ನನ್ನೊಳಗಿನ ತಂದೆಯ ಮನಸ್ಸು ಇದನ್ನು ಒಪ್ಪುತ್ತಿಲ್ಲ!...ಗುಜರಾತ್ ಟೈಟನ್ಸ್ ತಂತ್ರಕ್ಕೆ ಇರ್ಫಾನ್ ಪಠಾಣ್ ತೀವ್ರ ಅಸಮಾಧಾನ | Irfan Pathan

Irfan Pathan | ಗುಜರಾತ್ ಟೈಟನ್ಸ್ ತಂತ್ರಕ್ಕೆ ಇರ್ಫಾನ್ ಪಠಾಣ್ ತೀವ್ರ ಅಸಮಾಧಾನ
Irfan Pathan | ಗುಜರಾತ್ ಟೈಟನ್ಸ್ ತಂತ್ರಕ್ಕೆ ಇರ್ಫಾನ್ ಪಠಾಣ್ ತೀವ್ರ ಅಸಮಾಧಾನ
Published on
Irfan Pathan: ನಿನ್ನೆ ನಡೆದ ಕ್ವಾಲಿಫೈಯರ್-2 ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್‌ನ 15 ವರ್ಷದ ಬ್ಯಾಟರ್​ ವೈಭವ್ ಸೂರ್ಯವಂಶಿ ವಿರುದ್ಧ ಗುಜರಾತ್ ಟೈಟನ್ಸ್ ಬೌಲರ್‌ಗಳು ನಡೆಸಿದ ಅಪಾಯಕಾರಿ ಬಾಡಿಲೈನ್ ಬೌಲಿಂಗ್ ದಾಳಿ ಈಗ ಹೊಸ ಚರ್ಚೆಗೆ ನಾಂದಿ ಹಾಡಿದ್ದು, ಹದಿಹರೆಯದ ಬಾಲಕನ ಶರೀರವನ್ನೇ ಗುರಿಯಾಗಿಸಿ ಬೌನ್ಸ್ ಎಸೆದಿದ್ದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿರುವ ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್, ಆತ ದೊಡ್ಡ ಆಟಗಾರರ ವಿರುದ್ಧ ಆಡುತ್ತಿದ್ದಾನೆ ಎಂಬುದು ನನಗೆ ತಿಳಿದಿದೆ, ಆದರೆ ನನ್ನೊಳಗಿನ ತಂದೆಯ ಮನಸ್ಸು ಇಂತಹ ಅಪಾಯಕಾರಿ ಬೌಲಿಂಗ್ ಒಪ್ಪುತ್ತಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.
ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಪಠಾಣ್​, ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಮಾಡುವುದನ್ನು ನೋಡುವುದು ನನ್ನ ಸ್ವಂತ ಮಗ ಬ್ಯಾಟಿಂಗ್ ಮಾಡುವುದನ್ನು ನೋಡಿದಂತೆ ಇರುತ್ತದೆ. ಪಂದ್ಯದ ವೇಳೆ ಚೆಂಡು ಆತನ ತಲೆಗೆ ಬಡಿದಿದ್ದನ್ನು ನೋಡಿದಾಗ ನನಗೆ ತೀವ್ರ ಆತಂಕವಾಯಿತು ಮತ್ತು ನನ್ನ ಆಲೋಚನೆಗಳು ತಕ್ಷಣವೇ ಫಿಲಿಪ್ ಹ್ಯೂಸ್ ಕಡೆಗೆ ಹೋದವು ಎಂದು ಪಠಾಣ್ ಬರೆದಿದ್ದಾರೆ.
ಮುಂದುವರಿದು ಮಾತನಾಡಿದ ಅವರು, ಖಂಡಿತವಾಗಿಯೂ ನೀವು ದೊಡ್ಡ ಮಟ್ಟದ ಕ್ರಿಕೆಟ್‌ನಲ್ಲಿ ಆಡುವಾಗ ನಿಮಗೆ ಕಠಿಣ ಪರೀಕ್ಷೆ ಎದುರಾಗುತ್ತದೆ. ಅದರಲ್ಲಿ ಯಾವುದೇ ತಪ್ಪಿಲ್ಲ. ಎದುರಾಳಿ ತಂಡಗಳು ಆತನ ವಿರುದ್ಧ ತಂತ್ರಗಳನ್ನು ಹೆಣೆಯುವುದು ಸಹಜ. ನಾನು ಈ ಅದ್ಭುತ ಬಾಲಕನಿಗೆ ಒಳ್ಳೆಯದಾಗಲಿ ಎಂದು ಮಾತ್ರ ಹಾರೈಸಬಲ್ಲೆ. ಆದರೆ ಆ ಬಾಡಿಲೈನ್ ಬೌಲಿಂಗ್ ಮಾತ್ರ ನನಗೆ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಇರ್ಫಾನ್ ಪಠಾಣ್ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.
ಸದ್ಯ ವೈಭವ್ ಸೂರ್ಯವಂಶಿ ಅವರ ಈ ಆವೃತಿಯ ಐಪಿಎಲ್ ಅಭಿಯಾನ ಕೊನೆಗೊಂಡಿರಬಹುದು, ಆದರೆ ಅವರು ಸೃಷ್ಟಿಸಿರುವ ದಾಖಲೆಗಳು ಮಾತ್ರ ಕ್ರಿಕೆಟ್ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಿವೆ. ಈ ಸೀಸನ್‌ನಲ್ಲಿ ಆಡಿದ 16 ಪಂದ್ಯಗಳಿಂದ ಬರೋಬ್ಬರಿ 776 ರನ್ ಚಚ್ಚಿರುವ ವೈಭವ್, ಸದ್ಯ ಆರೆಂಜ್ ಕ್ಯಾಪ್ ತಮ್ಮಲ್ಲೇ ಉಳಿಸಿಕೊಂಡಿದ್ದಾರೆ.
ಇದರೊಂದಿಗೆ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಕಿರಿಯ ವಯಸ್ಸಿನಲ್ಲಿ 1000 ರನ್ ಪೂರೈಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ವೈಭವ್ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲದೆ, ಐಪಿಎಲ್‌ನಲ್ಲಿ ಅತ್ಯಂತ ವೇಗವಾಗಿ 1000 ರನ್‌ಗಳ ಮೈಲಿಗಲ್ಲು ತಲುಪಿದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗುವ ಮೂಲಕ ಗುಜರಾತ್ ಟೈಟನ್ಸ್ ತಂಡದ ಸಾಯಿ ಸುದರ್ಶನ್ ಹೆಸರಿನಲ್ಲಿದ್ದ ದಾಖಲೆಯನ್ನು ಧೂಳೀಪಟ ಮಾಡಿದ್ದಾರೆ. ಇಷ್ಟಕ್ಕೆ ನಿಲ್ಲದ ವೈಭವ್ ಸೂರ್ಯವಂಶಿ ದಾಖಲೆಗಳ ಬೇಟೆ, ಒಂದೇ ಐಪಿಎಲ್ ಸೀಸನ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದ್ದ ವೆಸ್ಟ್ ಇಂಡೀಸ್‌ನ ದೈತ್ಯ ಬ್ಯಾಟರ್, ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ಸಾರ್ವಕಾಲಿಕ ದಾಖಲೆಯನ್ನು ಮುರಿಯುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net