ಆರ್​ಸಿಬಿ ಫ್ರಾಂಚೈಸಿ ಸೇರಲು ಅನುಷ್ಕಾ ಶರ್ಮಾ ಆಸಕ್ತಿ... ಇದೇನಾದ್ರೂ ನಡೆದರೆ ಅಭಿಮಾನಿಗಳಿಗೆ ಹಬ್ಬ ಗ್ಯಾರಂಟಿ! RCB

ಆರ್​ಸಿಬಿ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ
ಆರ್​ಸಿಬಿ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ
Published on

ಪ್ರಮುಖ ಮುಖ್ಯಾಂಶಗಳು

  • ಇಂಡಿಯನ್​ ಪ್ರೀಮಿಯರ್​ ಲೀಗ್​ ಇತಿಹಾಸದಲ್ಲೇ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಏಕೈಕ ಫ್ರಾಂಚೈಸಿ
  • ಸತತ 17 ವರ್ಷ ಕಪ್​ ಗೆಲ್ಲದಿದ್ದರೂ ಒಮ್ಮೆಯೂ ತಮ್ಮ ತಂಡ ಬಿಟ್ಟುಕೊಡದೇ ಅಭಿಮಾನಿಗಳು ಜತೆಯಾಗಿ ನಿಂತರು
  • ಅಂತಿಮವಾಗಿ 18ನೇ ಐಪಿಎಲ್​ ಆವೃತ್ತಿಯಲ್ಲಿ ಆರ್​ಸಿಬಿ ಚೊಚ್ಚಲ ಟ್ರೋಫಿಯನ್ನು ಎತ್ತಿ ಹಿಡಿಯಿತು
  • ಇದೀಗ ಅನುಷ್ಕಾ ಶರ್ಮಾ ವಿಚಾರದಲ್ಲಿ ಹೊಸ ಸುದ್ದಿಯೊಂದು ಹರಿದಾಡುತ್ತಿದ್ದು, ನಿಜವಾದರೆ ಫ್ಯಾನ್ಸ್​ಗೆ ಹಬ್ಬ ಗ್ಯಾರಂಟಿ
RCB : ಇಂಡಿಯನ್​ ಪ್ರೀಮಿಯರ್​ ಲೀಗ್​ ( IPL )​ ಇತಿಹಾಸದಲ್ಲೇ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಏಕೈಕ ಫ್ರಾಂಚೈಸಿ ಎಂದರೆ ಅದು ರಾಯಲ್ ಚಾಲೆಂಜರ್ಸ್ ಬೆಂಗಳೂರು ( RCB ). ಸತತ 17 ವರ್ಷ ಕಪ್​ ಗೆಲ್ಲದಿದ್ದರೂ ಒಮ್ಮೆಯೂ ತಮ್ಮ ತಂಡವನ್ನು ಬಿಟ್ಟುಕೊಡದೇ ಅಭಿಮಾನಿಗಳು ಜತೆಯಾಗಿ ನಿಂತರು. ಎಷ್ಟೇ ಟೀಕೆಗಳು ಎದುರಾದರೂ ಅದಕ್ಕೆಲ್ಲ ಖಡಕ್​ ಉತ್ತರಗಳನ್ನು ನೀಡಿ ತಮ್ಮ ತಂಡವನ್ನು ಸಮರ್ಥನೆ ಮಾಡಿಕೊಂಡರು. ಅಂತಿಮವಾಗಿ ಕಳೆದ ಸೀಸನ್​ ಅಂದರೆ, 18ನೇ ಐಪಿಎಲ್​ ಆವೃತ್ತಿಯಲ್ಲಿ ಆರ್​ಸಿಬಿ ಚೊಚ್ಚಲ ಟ್ರೋಫಿಯನ್ನು ಎತ್ತಿ ಹಿಡಿಯಿತು. ಇದು ಆರ್​ಸಿಬಿಯ ಲಾಯಲ್​ ಫ್ಯಾನ್ಸ್​ಗಳ ಭರ್ಜರಿ ಸಂಭ್ರಮಕ್ಕೆ ಕಾರಣವಾಯಿತು. ಆದರೆ, ಅದೇ ಸಂತೋಷ, ಕೆಲವೇ ದಿನಗಳಲ್ಲಿ ದುಃಖಕ್ಕೆ ತಿರುಗಿದ್ದು ದುರಂತ.
ಆರ್‌ಸಿಬಿ 18 ವರ್ಷಗಳ ಬಳಿಕ ತಮ್ಮ ಚೊಚ್ಚಲ ಐಪಿಎಲ್ ಕಪ್​ ಗೆದ್ದ ಬೆನ್ನಲ್ಲೇ ಸಂಭ್ರಮಾಚರಣೆಗೆಂದು ಬೆಂಗಳೂರಿಗೆ ಆಗಮಿಸಿತು. ಈ ಸಂಭ್ರಮದಲ್ಲಿ ಭಾಗಿಯಾಗಲು ಲಕ್ಷಾಂತರ ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಜಮಾಯಿಸಿದರು. ತಮ್ಮ ನೆಚ್ಚಿನ ಆಟಗಾರರ ಮಧ್ಯೆ ಸಂಭ್ರಮಿಸಲು ಎದುರು ನೋಡುತ್ತಿದ್ದರು. ಆದರೆ, ಕೆಲವೇ ಸಮಯದಲ್ಲಿ ಸಂಭ್ರಮದ ವಾತವರಣ ದುಃಖದಿಂದ ಆವರಿಸಿತು. ಅಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಯುವ ಅಭಿಮಾನಿಗಳು ದುರಂತ ಅಂತ್ಯ ಕಂಡರು. ಅಲ್ಲದೆ, ಅನೇಕರು ಗಂಭೀರವಾಗಿ ಗಾಯಗೊಂಡರು. ಈ ಒಂದು ಘಟನೆ, ಆರ್​ಸಿಬಿ ಇತಿಹಾಸದಲ್ಲಿ ಒಂದು ಕರಾಳ ಅಧ್ಯಾಯವಾಗಿ ಉಳಿದಿದೆ. ಈ ಘಟನೆಯ ಬಳಿಕ ಆರ್​ಸಿಬಿ ಫ್ರಾಂಚೈಸಿಗೆ ಹಲವಾರು ಸಮಸ್ಯೆಗಳು ಎದುರಾಯಿತು.
ಆರ್​ಸಿಬಿ ಫ್ರಾಂಚೈಸಿ ವಿರುದ್ಧ ಸಾಲು ಸಾಲು ಆರೋಪಗಳ ಜತೆಗೆ ಕೇಸ್​ ಕೂಡ ದಾಖಲಾಯ್ತು. ಕರ್ನಾಟಕ ಸರ್ಕಾರವು ಕೂಡ ಆರ್​ಸಿಬಿ ಫ್ರಾಂಚೈಸಿ ವಿರುದ್ಧ ಟೀಕಾ ಪ್ರಹಾರ ಮಾಡಿತು. ಇಡೀ ಸಂಭ್ರಮದ ವಾತಾವರಣವನ್ನು ಈ ಒಂದು ಘಟನೆ ಸಂಪೂರ್ಣವಾಗಿ ಕೆಡಿಸಿಬಿಟ್ಟಿತು. ಈ ಘಟನೆ ಎಷ್ಟರಮಟ್ಟಿಗೆ ಪ್ರಭಾವ ಬೀರಿತು ಎಂದರೆ, ಆರ್​ಸಿಬಿ, ತನ್ನ ತವರು ನೆಲವಾಗಿ ಚಿನ್ನಸ್ವಾಮಿ ಕ್ರೀಡಾಂಗಣವೇ ಬೇಡ ಎನ್ನುವ ಹಂತಕ್ಕೆ ಬಂದಿತು. ಅಂತಿಮವಾಗಿ, ಅಭಿಮಾನಿಗಳ ಒತ್ತಡಕ್ಕೆ ಮಣಿದಿರುವ ಆರ್​ಸಿಬಿ ಬೆಂಗಳೂರಿನಲ್ಲೇ ಆಡಲು ನಿರ್ಧಾರ ಮಾಡಿದೆ.
ಇನ್ನು ಕಳೆದ ವರ್ಷ, ಆರ್‌ಸಿಬಿ ಅನ್ನು ಮಾರಾಟ ಮಾಡಲು ಆರ್​ಸಿಬಿ ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಐಪಿಎಲ್‌ನ ಮಾಜಿ ಅಧ್ಯಕ್ಷ ಲಲಿತ್ ಮೋದಿ ತಮ್ಮ ಸಾಮಾಜಿಕ ಜಾಲತಾಣದ ಅಧಿಕೃತ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡರು. ಅಂದಿನಿಂದ ಆರ್​ಸಿಬಿ ಮಾಲೀಕತ್ವ ಯಾರ ಪಾಲಾಗಲಿದೆ ಎಂಬ ಪ್ರಶ್ನೆ ಕಾಡಲಾರಂಭಿಸಿದೆ. ಇದರ ನಡುವೆ ಅನೇಕ ಮಂದಿಯ ಹೆಸರು ಕೇಳಿಬರುತ್ತಿದೆ. ನಮ್ಮ ಕನ್ನಡದ ಹೊಂಬಾಳೆ ಸಂಸ್ಥೆಯ ಹೆಸರು ಸಹ ಕೇಳಿಬಂತು. ಇದೀಗ ಮತ್ತೊಂದು ಹೆಸರು ಚಾಲ್ತಿಯಲ್ಲಿದೆ. ಅದುವೇ ಅನುಷ್ಕಾ ಶರ್ಮಾ.

ಆರ್​ಸಿಬಿ ಷೇರು ಖರೀದಿಗೆ ಅನುಷ್ಕಾ ಶರ್ಮಾ ಆಸಕ್ತಿ

ಕನ್ನಡಿಗರಿಗೆ ಅನುಷ್ಕಾ ಶರ್ಮಾರನ್ನು ಪರಿಚಯಿಸುವ ಅಗತ್ಯವೇ ಇಲ್ಲ. ಕರ್ನಾಟಕಕ್ಕೂ ಅನುಷ್ಕಾಗೂ ಅವಿನಾಭವ ಸಂಬಂಧವಿದೆ. ಅಲ್ಲದೆ, ಕರ್ನಾಟಕದ ದತ್ತು ಪುತ್ರನೆಂದೇ ಖ್ಯಾತಿಯಾಗಿರುವ ಟೀಮ್​ ಇಂಡಿಯಾದ ಸ್ಟಾರ್​ ಕ್ರಿಕೆಟಿಗ ಹಾಗೂ ಆರ್​ಸಿಬಿಯ ಆಧಾರಸ್ತಂಭ ವಿರಾಟ್​ ಕೊಹ್ಲಿಯ ಮುದ್ದಿನ ಮಡದಿ ಎಂಬುದು ಎಲ್ಲರಿಗೂ ತಿಳಿದಿದೆ. ಈಗಾಗಲೇ ಆರ್​ಸಿಬಿ ಜತೆ ವಿಶೇಷ ಬಂಧವನ್ನ ಹೊಂದಿರುವ ಅನುಷ್ಕಾ ಶರ್ಮಾ ಅದನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಲು ನಿರ್ಧಾರ ಮಾಡಿದ್ದಾರೆ ಎಂಬ ವರದಿಯೊಂದು ಹೊರಬಿದ್ದಿದೆ.
ಆರ್​ಸಿಬಿ ಮೂಲಗಳ ಪ್ರಕಾರ, ಅನುಷ್ಕಾ ಶರ್ಮಾ ಅವರು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಫ್ರಾಂಚೈಸಿಯ ಶೇ. 3 ರಷ್ಟು ಷೇರನ್ನು ಖರೀದಿ ಮಾಡಲು ಆಸಕ್ತಿ ತೋರಿದ್ದಾರೆ ಎನ್ನಲಾಗುತ್ತಿದೆ. ಶೇ. 3 ರಷ್ಟು ಅಂದರೆ ಬರೋಬ್ಬರಿ 400 ಕೋಟಿ ರೂ. ಬಂಡವಾಳ ಹೂಡಲು ಅನುಷ್ಕಾ ಶರ್ಮಾ ಮುಂದಾಗಿದ್ದಾರೆ ಎಂಬ ಮಾಹಿತಿ ಇದೆ. ವಿರಾಟ್ ಕೊಹ್ಲಿ ಅವರು ಈಗಾಗಲೇ ಆರ್​ಸಿಬಿಯ ಪ್ರಮುಖ ಆಟಗಾರರಾಗಿದ್ದಾರೆ. ಇನ್ನೊಂದೆಡೆ, ಅವರ ಪತ್ನಿ ಅನುಷ್ಕಾ, ಮೈದಾನದಿಂದಾಚೆಗೆ ಆರ್​ಸಿಬಿ ಪಾಲನ್ನು ಹೊಂದುವ ಮೂಲಕ ಆರ್​ಸಿಬಿ ತಂಡದ ಜತೆ ಹೊಸ ಜರ್ನಿ ಆರಂಭಿಸಲು ಆಸಕ್ತಿ ಹೊಂದಿದ್ದಾರೆ ಎಂಬ ವರದಿ ಇದೆ. ಒಂದು ವೇಳೆ ಇದು ಸಂಭವಿಸಿದ್ದಲ್ಲಿ, ವಿರಾಟ್​ ಮತ್ತು ಅನುಷ್ಕಾ ಭಾರತದ ಅತ್ಯಂತ ಶಕ್ತಿಶಾಲಿ ಕ್ರೀಡಾ ಜೋಡಿಯಾಗಿ ಹೊರಹೊಮ್ಮಲಿದ್ದಾರೆ.

ರಣಬೀರ್​ ಕಪೂರ್​ ಹೆಸರು

ಅನುಷ್ಕಾ ಶರ್ಮಾ ಜತೆಗೆ ಬಾಲಿವುಡ್​ ಸ್ಟಾರ್​ ನಟ ರಣಬೀರ್​ ಕಪೂರ್​ ಹೆಸರು ಸಹ ಕೇಳಿಬರುತ್ತಿದೆ. ವರದಿಗಳ ಪ್ರಕಾರ, ರಣಬೀರ್ ಕಪೂರ್ ಅವರು​ ಆರ್‌ಸಿಬಿಯಲ್ಲಿ ಸುಮಾರು 300ರಿಂದ 350 ಕೋಟಿ ರೂ.ಗೆ ಶೇ,2ರಷ್ಟು ಷೇರು ಖರೀದಿಸಲು ತೆರೆಮರೆಯಲ್ಲಿ ಮಾತುಕತೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ಆದಾಗ್ಯೂ, ಈ ಕುರಿತಾಗಿ ನಟನಿಂದಲೇ ಆಗಲಿ ಅಥವಾ ಐಪಿಎಲ್ ಫ್ರಾಂಚೈಸಿಯಿಂದಲೇ ಆಗಲಿ ಇಲ್ಲಿಯವರೆಗೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ ಎಂಬುದು ಗಮನಾರ್ಹ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net