ದಾಖಲೆಗಳ ಧಮಾಕಾ!

IPL 2026 > ದಾಖಲೆಗಳ ಧಮಾಕಾ!
IPL 2026 > ದಾಖಲೆಗಳ ಧಮಾಕಾ!
Published on

ಪ್ರಸಾದ್ ಶೆಟ್ಟಿಗಾರ್

ಭಾರತೀಯ ಕ್ರಿಕೆಟ್‌ನ ಹೆಮ್ಮೆಯಾಗಿರುವ ಐಪಿಎಲ್ ಟೂರ್ನಿ ವರ್ಷದಿಂದ ವರ್ಷಕ್ಕೆ ಶ್ರೀಮಂತವಾಗುತ್ತಿದೆ. ಅದೇ ರೀತಿ ವರ್ಷದಿಂದ ವರ್ಷಕ್ಕೆ ಟೂರ್ನಿಯಲ್ಲಿ ಹರಿಯುವ ರನ್, ಸಿಕ್ಸರ್, ಬೌಂಡರಿಗಳ ಪ್ರವಾಹವೂ ಅಧಿಕವಾಗುತ್ತ ಸಾಗುತ್ತಿದೆ. ಈ ಮೂಲಕ ಐಪಿಎಲ್ ಸದ್ಯ ಸಂಪೂರ್ಣವಾಗಿ ಬ್ಯಾಟರ್‌ಗಳ ಟೂರ್ನಿಯಾಗಿ ಪರಿವರ್ತನೆ ಆಗಲಾರಂಭಿಸಿದೆ. ಇದಕ್ಕೆ ಹಾಲಿ ಐಪಿಎಲ್ 19ನೇ ಆವೃತ್ತಿಯಲ್ಲಿ ಉಡೀಸ್ ಆಗಿರುವ ಹಲವಾರು ಬ್ಯಾಟಿಂಗ್ ದಾಖಲೆಗಳೇ ಸಾಕ್ಷಿಯಾಗಿವೆ. ಇದರಿಂದಾಗಿ 200 ಮಾತ್ರವಲ್ಲ, 250ಕ್ಕೂ ಅಧಿಕ ಮೊತ್ತವೂ ಇಲ್ಲಿ ಸುರಕ್ಷಿತವೆನಿಸಿಲ್ಲ. ಇನ್ನು ಸ್ಪಿನ್ನರ್‌ಗಳು ಯಾವುದೇ ರೀತಿಯಲ್ಲೂ ಪರಿಣಾಮಕಾರಿ ಎನಿಸುತ್ತಿಲ್ಲ. ಕೆಲ ಮಿಸ್ ಹಿಟ್‌ಗಳಷ್ಟೇ ಅವರಿಗೆ ವಿಕೆಟ್ ಒದಗಿಸುತ್ತಿವೆ. ವೇಗದ ಬೌಲರ್‌ಗಳು ಹೊಸ ಚೆಂಡಿನಲ್ಲೂ ದಂಡನೆಗೆ ಒಳಗಾಗುತ್ತಿದ್ದಾರೆ. ಕೆಲ ಅಪರೂಪದ ಸ್ಲೋವರ್ ಬಾಲ್‌ಗಳಷ್ಟೇ ಅವರನ್ನು ಸಿಕ್ಸರ್-ಬೌಂಡರಿ ಬಿಟ್ಟುಕೊಡುವುದರಿಂದ ರಕ್ಷಿಸುತ್ತಿವೆ. ಎರಡು ತಿಂಗಳ ಭರ್ಜರಿ ಮನರಂಜನೆಯ ಬಳಿಕ ಬಹುತೇಕ ಮುಕ್ತಾಯ ಹಂತ ತಲುಪಿರುವ ಐಪಿಎಲ್-19ರಲ್ಲಿ ಇನ್ನು ಎರಡು ಪಂದ್ಯಗಳಷ್ಟೇ ಬಾಕಿ ಉಳಿದಿವೆ. ಭಾನುವಾರ ಟೂರ್ನಿಯ ಚಾಂಪಿಯನ್ ತಂಡದ ನಿರ್ಧಾರವಾಗುವುದಕ್ಕೆ ಮುನ್ನ ಈವರೆಗೆ ನಡೆದ 72 ಪಂದ್ಯಗಳಲ್ಲಿ ನಿರ್ಮಾಣವಾಗಿರುವ ಕೆಲ ಪ್ರಮುಖ ದಾಖಲೆಗಳ ಮೆಲುಕು ಇಲ್ಲಿದೆ.

ವೈಭವ್ ಸಿಕ್ಸರ್ ಸುನಾಮಿ

15 ವರ್ಷ ವಯಸ್ಸಿನ ಬ್ಯಾಟಿಂಗ್ ಸೆನ್ಸೇಶನ್ ವೈಭವ್ ಸೂರ್ಯವಂಶಿ ತನಗೆ ಕೇವಲ ಒಂದು ವರ್ಷವಿರುವಾಗ ಐಪಿಎಲ್‌ನಲ್ಲಿ ನಿರ್ಮಾಣವಾಗಿದ್ದ ಅಂದರೆ 14 ವರ್ಷ ಹಿಂದಿನ ಕ್ರಿಸ್ ಗೇಲ್ ಅವರ ಗರಿಷ್ಠ ಸಿಕ್ಸರ್ ದಾಖಲೆ ಮುರಿದಿದ್ದಾರೆ. ಗೇಲ್ ಆರ್‌ಸಿಬಿ ಪರ 2012ರ ಐಪಿಎಲ್‌ನಲ್ಲಿ 59 ಸಿಕ್ಸರ್ ಸಿಡಿಸಿದ್ದರೆ, ವೈಭವ್ ಈ ಬಾರಿ 65 ಸಿಕ್ಸರ್ ಸಿಡಿಸುವ ಮೂಲಕ ಐಪಿಎಲ್ ಆವೃತ್ತಿಯೊಂದರಲ್ಲಿ ಸರ್ವಾಧಿಕ ಸಿಕ್ಸರ್ ಬಾರಿಸಿದ ದಾಖಲೆ ಬರೆದಿದ್ದಾರೆ. ರಾಜಸ್ಥಾನ ತಂಡ 2ನೇ ಕ್ವಾಲಿಫೈಯರ್‌ಗೆ ಅರ್ಹತೆ ಪಡೆದಿರುವುದರಿಂದ ವೈಭವ್‌ಗೆ ಇನ್ನೂ 1 ಅಥವಾ 2 ಪಂದ್ಯ ಆಡುವ ಅವಕಾಶವಿದ್ದು, ಈ ದಾಖಲೆಗೆ ಇನ್ನಷ್ಟು ಸಿಕ್ಸರ್‌ಗಳು ಸೇರ್ಪಡೆಯಾಗುವ ನಿರೀಕ್ಷೆ ಇದೆ. ಗೇಲ್ 59 ಸಿಕ್ಸರ್ ಸಿಡಿಸಲು 456 ಎಸೆತ ಆಡಿದ್ದರೆ, ವೈಭವ್ 266 ಎಸೆತಗಳಲ್ಲೇ ಈ ಸಾಧನೆ ಮಾಡಿದ್ದಾರೆ. ಹೀಗಾಗಿ ವೈಭವ್ ಐಪಿಎಲ್‌ನ ಹೊಸ ಸಿಕ್ಸರ್ ಮಷಿನ್ ಎಂದು ವೆಸ್ಟ್ ಇಂಡೀಸ್ ಟಿ20 ದಿಗ್ಗಜ ಗೇಲ್ ಬಣ್ಣಿಸಿದ್ದಾರೆ.

ಸೂರ್ಯವಂಶಿ ದಾಖಲೆಗಳ ದರ್ಬಾರ್

ಹಾಲಿ ಐಪಿಎಲ್‌ನಲ್ಲಿ ಸ್ಟಾರ್ ಬ್ಯಾಟರ್‌ಗಳಿಗೆ ಅಚ್ಚರಿಯಾಗುವಂತೆ ಮತ್ತು ಸ್ಟಾರ್ ಬೌಲರ್‌ಗಳಿಗೆ ಹೆದರಿಕೆಯಾಗುವಂತೆ ರನ್, ಸಿಕ್ಸರ್ ಮಳೆ ಹರಿಸುತ್ತಿರುವ ‘ಬೇಬಿ ಬಾಸ್’ ವೈಭವ್ ಸೂರ್ಯವಂಶಿ, ಹಲವಾರು ದಾಖಲೆಗಳ ಒಡೆಯರಾಗಿದ್ದಾರೆ. ಇದುವರೆಗೆ 680 ರನ್ ಸಿಡಿಸಿ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ಅವರು, ಐಪಿಎಲ್ ಆವೃತ್ತಿಯೊಂದರಲ್ಲಿ ಅತ್ಯಧಿಕ ರನ್ ಗಳಿಸಿದ ಅನ್‌ಕ್ಯಾಪ್ಡ್ ಪ್ಲೇಯರ್ ಆಗಿದ್ದಾರೆ. ಅಲ್ಲದೆ, ಐಪಿಎಲ್‌ನಲ್ಲಿ 200ಕ್ಕೂ ಅಧಿಕ ಸ್ಟ್ರೈಕ್‌ರೇಟ್‌ನಲ್ಲಿ 600 ಪ್ಲಸ್ ರನ್ ಗಳಿಸಿದ ಮೊದಲಿಗರೆನಿಸಿದ್ದಾರೆ. ಐಪಿಎಲ್ ಆವೃತ್ತಿಯೊಂದರಲ್ಲಿ ಗರಿಷ್ಠ ಬಾರಿ (3) ಇನಿಂಗ್ಸ್ ಒಂದರಲ್ಲಿ 10 ಪ್ಲಸ್ ಸಿಕ್ಸರ್ ಸಾಧನೆಯೂ ಅವರದಾಗಿದೆ. ವೈಭವ್ (490) ಐಪಿಎಲ್‌ನ ಪವರ್‌ಪ್ಲೇಯಲ್ಲಿ ಗರಿಷ್ಠ ರನ್ ಸಿಡಿಸಿದ ಡೇವಿಡ್ ವಾರ್ನರ್ (467) ದಾಖಲೆಯನ್ನೂ ಮುರಿದಿದ್ದಾರೆ. ಇನ್ನು ಸನ್‌ರೈಸರ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ 29 ಎಸೆತಗಳಲ್ಲಿ 97 ರನ್ ಸಿಡಿಸಿದ್ದ ಅವರು ಈ ವೇಳೆ ಅತಿಕಡಿಮೆ ಎಸೆತಗಳಲ್ಲಿ 10 ಸಿಕ್ಸರ್ (24 ಎಸೆತ), ಪವರ್‌ಪ್ಲೇಯಲ್ಲಿ ಸರ್ವಾಧಿಕ 8 ಸಿಕ್ಸರ್ ಮತ್ತು ಪ್ಲೇಆಫ್ ಪಂದ್ಯದಲ್ಲಿ ಅತ್ಯಧಿಕ ಸಿಕ್ಸರ್ (12) ಬಾರಿಸಿದ ದಾಖಲೆಯನ್ನೂ ಬರೆದರು. ವೈಭವ್ ಐಪಿಎಲ್‌ ನಲ್ಲಿ ಅತ್ಯಧಿಕ ಸ್ಟ್ರೈಕ್‌ರೇಟ್‌ನಲ್ಲಿ (334.48) 90 ಪ್ಲಸ್ ರನ್ ಗಳಿಸಿದ ದಾಖಲೆಯನ್ನೂ ಬರೆದಿದ್ದಾರೆ. ಐಪಿಎಲ್‌ನಲ್ಲಿ ಅತಿವೇಗದ ಶತಕ ಸಿಡಿಸಿದ ಕ್ರಿಸ್ ಗೇಲ್ (30 ಎಸೆತ) ದಾಖಲೆ ಸ್ವಲ್ಪದರಲ್ಲೇ ಅವರ ಕೈತಪ್ಪಿತ್ತು.

ಭುವಿ, ರಬಾಡ ಬೌಲಿಂಗ್​ ಕಮಾಲ್​​

ಹಾಲಿ ಐಪಿಎಲ್‌ನಲ್ಲಿ ಬ್ಯಾಟರ್‌ಗಳ ಅಬ್ಬರದ ನಡುವೆ ಅನುಭವಿ ವೇಗಿಗಳಾದ ಭುವನೇಶ್ವರ್ ಕುಮಾರ್ ಮತ್ತು ಕಗಿಸೊ ರಬಾಡ ವಿಕೆಟ್ ಬೇಟೆಯಲ್ಲೂ ದಾಖಲೆ ಬರೆದು ಗಮನಸೆಳೆದಿದ್ದಾರೆ. ಆರ್‌ಸಿಬಿಯ ಭುವನೇಶ್ವರ್ 200 ವಿಕೆಟ್ ಪೂರೈಸುವ ಮೂಲಕ ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ವೇಗಿ ಎನಿಸಿದರು. ಐಪಿಎಲ್‌ನಲ್ಲಿ ಗರಿಷ್ಠ ಮೇಡನ್ (14) ಓವರ್ ಎಸೆದ ಪ್ರವೀಣ್ ಕುಮಾರ್ ದಾಖಲೆಯನ್ನೂ ಅವರು ಸರಿಗಟ್ಟಿದ್ದಾರೆ. ಇನ್ನು ಗುಜರಾತ್ ತಂಡದಲ್ಲಿರುವ ದಕ್ಷಿಣ ಆಫ್ರಿಕಾದ ರಬಾಡ ಐಪಿಎಲ್ ಆವೃತ್ತಿಯೊಂದರಲ್ಲಿ ಪವರ್‌ಪ್ಲೇಯಲ್ಲಿ ಗರಿಷ್ಠ ವಿಕೆಟ್ (18) ಕಬಳಿಸಿದ ಬೌಲರ್ ಎನಿಸಿದ್ದಾರೆ. ಅವರು 2023ರಲ್ಲಿ ಮೊಹಮದ್ ಸಿರಾಜ್ (17) ಆರ್‌ಸಿಬಿ ಪರ ಬರೆದಿದ್ದ ದಾಖಲೆ ಮುರಿದರು. ಇನ್ನು ರಬಾಡ ಆವೃತ್ತಿಯೊಂದರಲ್ಲಿ 3 ಬಾರಿ (2019, 2020, 2026) 25 ಪ್ಲಸ್ ವಿಕೆಟ್ ಕಬಳಿಸಿದ ಮೊದಲ ಬೌಲರ್ ಎನಿಸಿದ್ದಾರೆ.

ಕ್ಯಾಚ್‌ ಡ್ರಾಪ್

ಈ ಬಾರಿ ಬ್ಯಾಟರ್‌ಗಳ ಆರ್ಭಟಕ್ಕೆ ಬ್ಯಾಟಿಂಗ್ ಸ್ನೇಹಿ ಪಿಚ್‌ಗಳ ಜತೆಗೆ ಕಳಪೆ ಫೀಲ್ಡಿಂಗ್ ನಿರ್ವಹಣೆಯೂ ನೆರವಾಗಿದೆ. ಲೀಗ್ ಹಂತದ 70 ಪಂದ್ಯಗಳಲ್ಲಿ ಬರೋಬ್ಬರಿ 168 ಕ್ಯಾಚ್‌ಗಳು ಡ್ರಾಪ್ ಆದವು. ಪಂಜಾಬ್ ಮತ್ತು ಗುಜರಾತ್ ತಂಡಗಳು ಸರ್ವಾಧಿಕ ತಲಾ 20 ಕ್ಯಾಚ್ ಕೈಚೆಲ್ಲಿವೆ. ಮೊದಲ ಕ್ವಾಲಿಫೈಯರ್‌ನಲ್ಲಿ ಆರ್‌ಸಿಬಿ ನಾಯಕ ರಜತ್ ಪಾಟೀದಾರ್ ತನ್ನ ಕ್ಯಾಚ್ ಅನ್ನು ರಬಾಡ ಕೈಚೆಲ್ಲಿದ ಬಳಿಕ ಸ್ಫೋಟಕ ಆಟಕ್ಕಿಳಿದು ಪಂದ್ಯದ ಚಿತ್ರಣವನ್ನೇ ಬದಲಾಯಿಸಿದ್ದರು.

ಸೂಪರ್ ಪವರ್‌ಪ್ಲೇ

ಟಿ20 ಪಂದ್ಯಗಳನ್ನು ಈಗ ಪವರ್‌ಪ್ಲೇನಲ್ಲೇ ಗೆದ್ದು ಅಥವಾ ಸೋತು ಬಿಡಬಹುದಾಗಿದೆ. ಹೀಗಾಗಿ ಮೊದಲ 6 ಓವರ್‌ಗಳ ಆಟವೇ ನಿರ್ಣಾಯಕವೆನಿಸಿದ್ದು, ರನ್ ಸುರಿಮಳೆಯೂ ಹೆಚ್ಚಾಗಿದೆ. ಹೀಗಾಗಿ ಹಾಲಿ ಐಪಿಎಲ್‌ನಲ್ಲಿ ಪವರ್‌ಪ್ಲೇಯಲ್ಲಿ ಪ್ರತಿ ಓವರ್‌ಗೆ 10ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ ರನ್ ಸಿಡಿದೆ. ಇದೇ ಯತ್ನದಲ್ಲಿ ಕೆಲ ತಂಡಗಳು ಪವರ್‌ಪ್ಲೇನಲ್ಲೇ 4-5 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೂ ಸಿಲುಕಿಕೊಂಡಿವೆ.

ಅತ್ಯಧಿಕ 200 ಪ್ಲಸ್ ಮೊತ್ತ

ಅತ್ಯಧಿಕ 200 ಪ್ಲಸ್ ಮೊತ್ತ ಕಂಡ ಟೂರ್ನಿ ಎಂಬ ಹೆಗ್ಗಳಿಕೆ ಹಾಲಿ ಐಪಿಎಲ್‌ನದ್ದಾಗಿದೆ. ಇದುವರೆಗಿನ 72 ಪಂದ್ಯಗಳಲ್ಲಿ 63 ಬಾರಿ 200 ಪ್ಲಸ್ ಮೊತ್ತ ದಾಖಲಾಗಿದೆ. ಈ ಪೈಕಿ 250 ಪ್ಲಸ್ ಮೊತ್ತ 6 ಬಾರಿ ದಾಖಲಾಗಿವೆ. ಕಳೆದ ವರ್ಷ 52 ಇನಿಂಗ್ಸ್‌ಗಳಲ್ಲಿ 200 ಪ್ಲಸ್ ಮೊತ್ತ ದಾಖಲಾಗಿದ್ದು ಹಿಂದಿನ ದಾಖಲೆ. ಆರ್‌ಸಿಬಿ, ಸನ್‌ರೈಸರ್ಸ್ ಮತ್ತು ಪಂಜಾಬ್ ತಲಾ 9 ಬಾರಿ 200 ಪ್ಲಸ್ ಮೊತ್ತ ಪೇರಿಸಿದ್ದು ಗರಿಷ್ಠವೆನಿಸಿದೆ. ಪಂಜಾಬ್ ತಂಡ ಅತ್ಯಧಿಕ 9 ಬಾರಿ 200 ಪ್ಲಸ್ ಮೊತ್ತವನ್ನು ಬಿಟ್ಟುಕೊಟ್ಟಿದೆ. 2009ರ ಐಪಿಎಲ್‌ನಲ್ಲಿ 1 ಬಾರಿ ಮಾತ್ರ 200 ಪ್ಲಸ್ ಮೊತ್ತ ದಾಖಲಾಗಿತ್ತು ಎಂಬುದು ಗಮನಾರ್ಹ.

ಸರ್ವಾಧಿಕ ಸಿಕ್ಸರ್

ಐಪಿಎಲ್-19ರಲ್ಲಿ ಇನ್ನು 2 ಪಂದ್ಯ ಬಾಕಿ ಇರುವಾಗಲೇ ಒಟ್ಟು 1,396 ಸಿಕ್ಸರ್ ಸಿಡಿದಿವೆ. ಇದು ಈಗಾಗಲೇ, ಐಪಿಎಲ್ ಆವೃತ್ತಿಯೊಂದರಲ್ಲಿ ಸಿಡಿದ ಸರ್ವಾಧಿಕ ಸಿಕ್ಸರ್ ಎನಿಸಿದೆ. ಕಳೆದ ವರ್ಷ 1,294 ಸಿಕ್ಸರ್ ಸಿಡಿದಿದ್ದು ಹಿಂದಿನ ಗರಿಷ್ಠವೆನಿಸಿತ್ತು. 2022ರಲ್ಲಿ ಮೊದಲ ಬಾರಿಗೆ ಆವೃತ್ತಿಯೊಂದರಲ್ಲಿ ಸಾವಿರ ಸಿಕ್ಸರ್ (1,062) ಸಿಡಿದಿತ್ತು. ಬಳಿಕ 2023 (1,124) ಮತ್ತು 2024ರಲ್ಲೂ (1,260) ಈ ದಾಖಲೆ ಸುಧಾರಣೆ ಕಂಡಿತ್ತು. 2008ರ ಚೊಚ್ಚಲ ಆವೃತ್ತಿಯಲ್ಲಿ ಒಟ್ಟು 622 ಸಿಕ್ಸರ್ ಸಿಡಿದಿದ್ದರೆ, ದಕ್ಷಿಣ ಆಫ್ರಿಕಾದಲ್ಲಿ ನಡೆದ 2009ರ ಐಪಿಎಲ್‌ನಲ್ಲಿ 506 ಸಿಡಿದಿದ್ದು ಇದುವರೆಗಿನ ಕನಿಷ್ಠವೆನಿಸಿದೆ.

ಕೊಹ್ಲಿ ಟೆಸ್ಟ್​ಗಿಂತ ಐಪಿಎಲ್‌ನಲ್ಲಿ ಅಧಿಕ ರನ್​

ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹಾಲಿ ಆವೃತ್ತಿಯಲ್ಲಿ ಐಪಿಎಲ್‌ನಲ್ಲಿ 9 ಸಾವಿರ ರನ್ ಸಿಡಿಸಿದ ಮೊದಲ ಬ್ಯಾಟರ್ ಎನಿಸಿದರು. ಇದರೊಂದಿಗೆ ಐಪಿಎಲ್‌ನಲ್ಲಿ ಸರ್ವಾಧಿಕ ಶತಕ ಸಿಡಿಸಿದ ತನ್ನ ದಾಖಲೆಯನ್ನೂ ಅವರು 9ಕ್ಕೆ ವಿಸ್ತರಿಸಿದ್ದಾರೆ. ಇನ್ನು ಕೊಹ್ಲಿ ಈಗ ತನ್ನ ವೃತ್ತಿಜೀವನದಲ್ಲಿ ಟೆಸ್ಟ್ ಕ್ರಿಕೆಟಿಗಿಂತ (9,230) ಐಪಿಎಲ್‌ನಲ್ಲಿ (9,261) ಹೆಚ್ಚಿನ ರನ್ ಬಾರಿಸಿದ ಸಾಧನೆ ಮಾಡಿದ್ದಾರೆ. ಇದಲ್ಲದೆ ಐಪಿಎಲ್‌ನಲ್ಲಿ ಸರ್ವಾಧಿಕ ಪಂದ್ಯ (282) ಆಡಿದ ದಾಖಲೆಯೂ ಈಗ ಅವರದಾಗಿದೆ.

ಓವರ್‌ಗೆ 6 ಬೌಂಡರಿ

ಪಂಜಾಬ್ ಕಿಂಗ್ಸ್ ಆರಂಭಿಕ ಪ್ರಭ್‌ಸಿಮ್ರನ್ ಸಿಂಗ್, ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಮುಕೇಶ್ ಕುಮಾರ್ ಓವರ್‌ನ ಎಲ್ಲ 6 ಎಸೆತಗಳಲ್ಲಿ ಬೌಂಡರಿ ಬಾರಿಸಿದರು. ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ 3ನೇ ಬ್ಯಾಟರ್ ಅವರಾಗಿದ್ದಾರೆ. ಅಜಿಂಕ್ಯ ರಹಾನೆ (2012) ಮತ್ತು ಪೃಥ್ವಿ ಷಾ (2021) ಮೊದಲಿಬ್ಬರು.

ಊರ್ವಿಲ್ ಅತಿವೇಗದ ಫಿಫ್ಟಿ

ಗುಜರಾತ್‌ನ ಸ್ಫೋಟಕ ಬ್ಯಾಟರ್ ಊರ್ವಿಲ್ ಪಟೇಲ್, ಲಖನೌ ವಿರುದ್ಧದ ಪಂದ್ಯದಲ್ಲಿ ಸಿಎಸ್ಕೆ ಪರ 13 ಎಸೆತಗಳಲ್ಲೇ ಅರ್ಧಶತಕ ಪೂರೈಸಿದರು. ಈ ಮೂಲಕ ಅವರು 2023ರಲ್ಲಿ ಯಶಸ್ವಿ ಜೈಸ್ವಾಲ್ ಬರೆದಿದ್ದ ಐಪಿಎಲ್‌ನ ಅತಿವೇಗದ ಅರ್ಧಶತಕದ ದಾಖಲೆ ಸರಿಗಟ್ಟಿದರು.

ಚೇಸಿಂಗ್ ರೆಕಾರ್ಡ್

ಡೆಲ್ಲಿ ಕ್ಯಾಪಿಟಲ್ಸ್ ತಂಡ ನೀಡಿದ 265 ರನ್ ಸವಾಲನ್ನು ಯಶಸ್ವಿಯಾಗಿ ಬೆನ್ನಟ್ಟಿ ಗೆಲ್ಲುವ ಮೂಲಕ ಪಂಜಾಬ್ ಕಿಂಗ್ಸ್ ಐಪಿಎಲ್ ಇತಿಹಾಸದಲ್ಲಿ ಸರ್ವಾಧಿಕ ಮೊತ್ತದ ಚೇಸಿಂಗ್ ದಾಖಲೆ ಬರೆಯಿತು. ಹಾಲಿ ಐಪಿಎಲ್‌ನಲ್ಲಿ 16 ಬಾರಿ 200 ಪ್ಲಸ್ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಲಾಗಿದೆ. ಈ ಪೈಕಿ 9 ಬಾರಿ 220 ಪ್ಲಸ್ ಮೊತ್ತವನ್ನೂ ಬೆನ್ನಟ್ಟಲಾಗಿದೆ. ಹಿಂದಿನ 18 ಆವೃತ್ತಿಗಳಲ್ಲಿ 5 ಬಾರಿ ಮಾತ್ರ ಈ ಸಾಧನೆ ಮಾಡಲಾಗಿತ್ತು.
ಟೂರ್ನಿಯ ಲೀಗ್ ಹಂತದ 70 ಪಂದ್ಯಗಳಲ್ಲಿ ಪ್ರತಿ 11.7 ಎಸೆತಕ್ಕೊಂದರಂತೆ ಸಿಕ್ಸರ್ ಸಿಡಿದಿದೆ. ಅಂದರೆ ಪ್ರತಿ ಪಂದ್ಯದಲ್ಲಿ 19.27ರ ಸರಾಸರಿಯಲ್ಲಿ ಸಿಕ್ಸರ್ ಸಿಡಿದಿದೆ.

ರಾಹುಲ್ 150+ ಸಾಧನೆ

ಕರ್ನಾಟಕದ ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ (152*) ಐಪಿಎಲ್ ಇನಿಂಗ್ಸ್ ಒಂದರಲ್ಲಿ ಸರ್ವಾಧಿಕ ವೈಯಕ್ತಿಕ ರನ್ ಗಳಿಸಿದ ಭಾರತೀಯ ಎಂಬ ದಾಖಲೆ ಬರೆದರು. ಪಂಜಾಬ್ ವಿರುದ್ಧ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಅವರು ಈ ಸಾಧನೆ ಮಾಡಿದರು. 2025ರಲ್ಲಿ ಸನ್‌ರೈಸರ್ಸ್ ಪರ 141 ರನ್ ಸಿಡಿಸಿದ್ದ ಅಭಿಷೇಕ್ ಶರ್ಮ ಅವರ ಭಾರತೀಯ ದಾಖಲೆಯನ್ನು ರಾಹುಲ್ ಮುರಿದರು. ಕ್ರಿಸ್ ಗೇಲ್ 2013ರಲ್ಲಿ ಆರ್‌ಸಿಬಿ ಪರ ಅಜೇಯ 175 ರನ್ ಸಿಡಿಸಿದ್ದು ಮತ್ತು 2008ರಲ್ಲಿ ಬ್ರೆಂಡನ್ ಮೆಕ್ಕಲಂ ಕೆಕೆಆರ್ ಪರ ಅಜೇಯ 158 ರನ್ ಸಿಡಿಸಿದ್ದು ಐಪಿಎಲ್‌ನಲ್ಲಿ ಮೊದಲ 2 ಗರಿಷ್ಠ ರನ್ ಗಳಿಕೆ ಆಗಿವೆ. ರಾಹುಲ್ ಐಪಿಎಲ್‌ನಲ್ಲಿ 150 ಪ್ಲಸ್ ರನ್ ಗಳಿಸಿದ 3ನೇ ಬ್ಯಾಟರ್ ಆಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net