

ಮುಂಬೈ: ದೇಶೀಯ ಕ್ರಿಕೆಟ್ ಪ್ರೇಮಿಗಳ ಬಹುನಿರೀಕ್ಷಿತ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಭಾರತದಲ್ಲೇ ನಡೆಯುವುದು ಬಹುತೇಕ ಖಚಿತವಾಗಿದೆ. ಮಹಾರಾಷ್ಟ್ರದ ಪ್ರಮುಖ ನಗರಗಳಾದ ಮುಂಬೈ ಹಾಗೂ ಪುಣೆಯಲ್ಲಿ ಲೀಗ್ ಹಂತ ಹಾಗೂ ಅಹಮದಾಬಾದ್‌ನ ಮೊಟೆರಾದಲ್ಲಿ ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ಪ್ಲೇ ಆ್ ಹಂತದ ಪಂದ್ಯಗಳು ನಡೆಯುವ ಸಾಧ್ಯತೆಗಳಿವೆ ಎನ್ನಲಾಗಿದೆ. ಜನವರಿ ತಿಂಗಳಲ್ಲಿ ಬಯೋ ಸುರಕ್ಷತಾ ವಾತಾವರಣದಲ್ಲಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ಇದೇ ಉತ್ತೇಜನದಿಂದ ಸ್ವದೇಶದಲ್ಲಿ ಐಪಿಎಲ್ ಆಯೋಜಿಸಲು ತೀರ್ಮಾನಿಸಿದೆ. ಕಳೆದ ಬಾರಿಯಂತೆ ಈ ಬಾರಿಯೂ ಯುಎಇಯಲ್ಲೇ ಐಪಿಎಲ್ ಆಯೋಜಿಸಲಾಗುತ್ತಿದೆ ಎಂದು ಹೇಳಲಾಗಿತ್ತು. 2020ರಲ್ಲಿ ಭಾರತದಲ್ಲಿ ಕರೊನಾ ವೈರಸ್ ಹಾವಳಿ ಇದ್ದ ಕಾರಣ ದೂರ ಅರಬ್ ರಾಷ್ಟ್ರಕ್ಕೆ ಇಡೀ ಟೂರ್ನಿಯಲ್ಲೇ ಸ್ಥಳಾಂತರಿಸಲಾಗಿತ್ತು. ಐಪಿಎಲ್ 14ನೇ ಆವೃತ್ತಿಯನ್ನು ಭಾರತದಲ್ಲೇ ಆಯೋಜಿಸುವ ಸಂಕಲ್ಪ ಮಾಡಿಕೊಂಡಿರುವ ಬಿಸಿಸಿಐ, ಬದಲಿ ವಿದೇಶಿ ತಾಣವನ್ನೂ ಆಯ್ಕೆ ಮಾಡಿಕೊಂಡಿಲ್ಲ. ಭಾರತದಲ್ಲಿ ಸದ್ಯ ಕರೊನಾ ವೈರಸ್ ಹಾವಳಿ ಬಹುತೇಕ ನಿಯಂತ್ರಣಕ್ಕೆ ಬಂದಿರುವುದು ಇದಕ್ಕೆ ಕಾರಣ ಎಂದು ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಶನಿವಾರವಷ್ಟೇ ಹೇಳಿದ್ದರು.
* ಮುಂಬೈ, ಪುಣೆಗೆ ಮಣೆ ?
ಮುಂಬೈನ ವಾಂಖೆಡೆ, ಬ್ರಬೊರ್ನ್ ಸ್ಟೇಡಿಯಂ, ಡಿವೈ ಪಾಟೀಲ್ ಸ್ಟೇಡಿಯಂ, ನವಿ ಮುಂಬೈನಲ್ಲಿರುವ ರಿಲಯೆನ್ಸ್ ಕ್ರಿಕೆಟ್ ಸ್ಟೇಡಿಯಂ ಹಾಗೂ ಪುಣೆಯಲ್ಲಿ ಮಹಾರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ಸಿದ್ಧತೆ ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ಅಹಮದಾಬಾದ್‌ನ ಮೊಟೆರಾದಲ್ಲಿ ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ಪ್ಲೇ-ಆ್ ಹಂತದ ಪಂದ್ಯಗಳನ್ನು ಆಯೋಜಿಸಲು ಮುಂದಾಗಿದೆ ಎನ್ನಲಾಗಿದೆ. ದೇಶೀಯ ಏಕದಿನ ಕ್ರಿಕೆಟ್ ಟೂರ್ನಿ ವಿಜಯ್ ಹಜಾರೆ ಟ್ರೋಫಿ ಹಾಗೂ ಮಹಿಳಾ ಏಕದಿನ ಟೂರ್ನಿ ಮುಕ್ತಾಯಗೊಂಡ ಬೆನ್ನಲ್ಲೇ ಏಪ್ರಿಲ್ ತಿಂಗಳ ಆರಂಭದಲ್ಲೇ 14ನೇ ಐಪಿಎಲ್‌ಗೆ ಚಾಲನೆ ನೀಡಲು ಬಿಸಿಸಿಐ ಸಿದ್ಧತೆ ನಡೆಸಿದೆ. ವಿಜಯ್ ಹಜಾರೆ, ಮಹಿಳಾ ಏಕದಿನ ಹಾಗೂ 19 ವಯೋಮಿತಿ ವಿನೂ ಮಂಕಡ್ ಟೂರ್ನಿಗಳನ್ನು ಆಯೋಜಿಸುವ ಸಲುವಾಗಿ ಬಿಸಿಸಿಐ ಪ್ರಸಕ್ತ ವರ್ಷದ ರಣಜಿ ಟ್ರೋಫಿಯನ್ನೇ ರದ್ದುಗೊಳಿಸಲಾಗಿದೆ.
* ಏಪ್ರಿಲ್ 11 ಅಥವಾ 14 ರಂದು ಲೀಗ್‌ಗೆ ಚಾಲನೆ?
ಏಪ್ರಿಲ್ 11 ಅಥವಾ 14 ರಿಂದ 14ನೇ ಐಪಿಎಲ್ ಆರಂಭಗೊಳ್ಳಲಿದ್ದು, ಜೂನ್ 5 ಅಥವಾ 6 ರವರೆಗೂ ಸಾಗಲಿದೆ ಎಂದು ಮಂಡಳಿ ಮೂಲಗಳು ತಿಳಿಸಿವೆ. ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ವೇಳಾಪಟ್ಟಿ ಕುರಿತು ಅಂತಿಮ ತೀರ್ಮಾನ ಹೊರಬರಲಿದೆ. ಒಂದು ಮೂಲಗಳ ಪ್ರಕಾರ ಏಪ್ರಿಲ್ 11 ರಿಂದ ಟೂರ್ನಿ ಆರಂಭಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಭಾರತ ಹಾಗೂ ಇಂಗ್ಲೆಂಡ್ ನಡುವಿನ ದ್ವಿಪಕ್ಷೀಯ ಸರಣಿಯೂ ಮಾರ್ಚ್ 28ರವರೆಗೂ ನಡೆಯಲಿದೆ. ಬಳಿಕ ಆಟಗಾರರು ಐಪಿಎಲ್ ಸಂಬಂಧಿ ಕೆಲವೊಂದು ವಾಣಿಜ್ಯ ವ್ಯವಹಾರಗಳಲ್ಲಿ ತೊಡಗಿಕೊಳ್ಳಲಿದ್ದಾರೆ. ಹೀಗಾಗಿ ಏಪ್ರಿಲ್ 14 ರಂದು ಲೀಗ್ ಆರಂಭಿಸುವುದೇ ಸೂಕ್ತ ಎಂಬುದು ಕೆಲ ್ರಾಂಚೈಸಿಗಳ ವಾದವಾಗಿದೆ. ಚೆನ್ನೈನಲ್ಲಿ ಆರಂಭಿಕ ಎರಡು ಟೆಸ್ಟ್ ಮುಕ್ತಾಯಗೊಂಡ 14ನೇ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆಯೂ ೆಬ್ರವರಿ 18 ರಂದು ನಡೆಯಲಿದೆ.
* ಪ್ರೇಕ್ಷಕರಿಗೂ ಅವಕಾಶ ಸಾಧ್ಯತೆ
ಭಾರತದಲ್ಲೇ ಐಪಿಎಲ್ ಆಯೋಜನೆಗೊಂಡರೆ ಶೇಕಡ 50 ಪ್ರೇಕ್ಷಕರಿಗೂ ಅವಕಾಶ ನೀಡುವ ಸಾಧ್ಯತೆಗಳಿವೆ. ಅಹಮದಾಬಾದ್‌ನಲ್ಲಿ ನಡೆಯಲಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ 2 ಟೆಸ್ಟ್ ಹಾಗೂ 5 ಟಿ20 ಪಂದ್ಯಗಳಿಗೆ ಶೇಕಡ 50 ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲಾಗಿದೆ. ಈ ಪ್ರಯೋಗ ಯಶಸ್ವಿ ಕಂಡರೆ ಐಪಿಎಲ್ ವೀಕ್ಷಣೆಗೂ ಪ್ರೇಕ್ಷಕರಿಗೆ ಅವಕಾಶ ಸಿಗುವ ಸಾಧ್ಯತೆಗಳಿವೆ. ಯುಎಇಯಲ್ಲಿ ಖಾಲಿ ಸ್ಟೇಡಿಯಂನಲ್ಲಿ ಲೀಗ್ ನಡೆದಿದ್ದರಿಂದ ದಾಖಲೆ ಸಂಖ್ಯೆಯಲ್ಲಿ ವೀಕ್ಷಕರು ಟಿವಿ ಮೂಲಕ ಲೀಗ್ ವೀಕ್ಷಿಸಿದ್ದರು. ಇದು ಎಲ್ಲ ದಾಖಲೆಯನ್ನು ಹಿಂದಿಕ್ಕಿತ್ತು.