

ನವದೆಹಲಿ: ಮುಂಬರುವ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆಗೆ ಮುನ್ನ ಈಗಿರುವ 8 ತಂಡಗಳಿಗೆ ಗರಿಷ್ಠ 4 ಆಟಗಾರರನ್ನು ರಿಟೇನ್ ಮಾಡಿಕೊಳ್ಳಲು ಬಿಸಿಸಿಐ ಅವಕಾಶ ಕಲ್ಪಿಸುವ ನಿರೀಕ್ಷೆ ಇದೆ. ಇದಲ್ಲದೆ 2 ಹೊಸ ತಂಡಗಳಿಗೆ ಹರಾಜಿಗೆ ಮುನ್ನವೇ 2-3 ಸ್ಟಾರ್ ಆಟಗಾರರೊಂದಿಗೆ ಒಪ್ಪಂದ ಮಾಡಿಕೊಳ್ಳಲು ಅವಕಾಶ ನೀಡುವ ಸಾಧ್ಯತೆ ಇದೆ.
8 ತಂಡಗಳು ಗರಿಷ್ಠ 3 ಭಾರತೀಯ ಮತ್ತು ಗರಿಷ್ಠ 2 ವಿದೇಶಿ ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಒಟ್ಟಾರೆ 4ಕ್ಕಿಂತ ಹೆಚ್ಚು ಆಟಗಾರರನ್ನು ರಿಟೇನ್ ಮಾಡಿಕೊಳ್ಳಲು ಅವಕಾಶವಿಲ್ಲ. ಇದಲ್ಲದೆ, ಅಂತಾರಾಷ್ಟ್ರೀಯ ಕ್ರಿಕೆಟ್ ಆಡದ ಗರಿಷ್ಠ ಇಬ್ಬರು ಆಟಗಾರರನ್ನಷ್ಟೇ ರಿಟೇನ್ ಮಾಡಬಹುದು ಎನ್ನಲಾಗಿದೆ. 2022ರ ಹರಾಜಿನಲ್ಲಿ ಪ್ರತಿ ತಂಡ ಆಟಗಾರರ ಖರೀದಿಗೆ ಗರಿಷ್ಠ 90 ಕೋಟಿ ರೂ. ವ್ಯಯಿಸಲು ಅವಕಾಶವಿದೆ.
ಅಕ್ಟೋಬರ್ 25ರಂದು 2 ಹೊಸ ತಂಡಗಳ ಮಾಲೀಕರ ಹೆಸರು ಘೋಷಿಸುವ ಸಮಯದಲ್ಲೇ ಬಿಸಿಸಿಐ ರಿಟೇನ್ ನಿಯಮವನ್ನು ಅಧಿಕೃತವಾಗಿ ಪ್ರಕಟಿಸಲಿದೆ ಎನ್ನಲಾಗಿದೆ.
ಆರ್‌ಟಿಎಂ ಇರಲ್ಲ?
ಮೆಗಾ ಹರಾಜಿನಲ್ಲಿ ‘ರೈಟ್ ಟು ಮ್ಯಾಚ್’ (ಆರ್‌ಟಿಎಂ) ಕಾರ್ಡ್ ಬಳಸಲು ತಂಡಗಳಿಗೆ ಅನುಮತಿ ನೀಡಲಾಗುವುದಿಲ್ಲ ಎನ್ನಲಾಗಿದೆ. ಆಟಗಾರನೊಬ್ಬ ಹರಾಜಿನಲ್ಲಿ ಬೇರೊಂದು ತಂಡಕ್ಕೆ ಮಾರಾಟವಾದಾಗ ಅದೇ ಮೊತ್ತವನ್ನು ಆತನ ಹಿಂದಿನ ತಂಡ ಪಾವತಿಸಿ ಆಟಗಾರನನ್ನು ತನ್ನಲ್ಲೇ ಉಳಿಸಿಕೊಳ್ಳುವುದಕ್ಕೆ ‘ರೈಟ್ ಟು ಮ್ಯಾಚ್’ ಎನ್ನುತ್ತಾರೆ. ಇದರಿಂದಾಗಿ ಚೆನ್ನೈ ಸೂಪರ್‌ಕಿಂಗ್ಸ್ ತಂಡ, ಎಂಎಸ್ ಧೋನಿಯನ್ನು ಹರಾಜಿಗೆ ಬಿಟ್ಟುಕೊಟ್ಟರೆ, ಗರಿಷ್ಠ ಮೊತ್ತದ ಬಿಡ್ ಸಲ್ಲಿಸದ ಹೊರತಾಗಿ ಅವರನ್ನು ತನ್ನ ತಂಡದಲ್ಲೇ ಉಳಿಸಿಕೊಳ್ಳಲು ಬೇರಾವುದೇ ಮಾರ್ಗ ಇರುವುದಿಲ್ಲ.