ಇಂದು ಐಪಿಎಲ್​ ತಂಡಗಳ ರಿಟೇನ್​ ಪಟ್ಟಿ ಪ್ರಕಟ; ಧೋನಿ ರಿಟೇನ್​ ಅಥವಾ ರಿಟೈರ್?

ಐಪಿಎಲ್​ ಹರಾಜು ಪ್ರಕ್ರಿಯೆಗೆ ಮುನ್ನ ಯಾರು ಸೇಫ್​, ಯಾರು ಔಟ್​?
IPL
ಸಂಗ್ರಹ ಚಿತ್ರ
Published on: 

ನವದೆಹಲಿ: ಮುಂದಿನ ವರ್ಷದ ಐಪಿಎಲ್​ 20ನೇ ಆವೃತ್ತಿಯ ಹರಾಜು ಪ್ರಕ್ರಿಯೆಗೆ ಮುನ್ನ ಎಲ್ಲ 10 ತಂಡಗಳು ಆಟಗಾರರ ರಿಟೇನ್​ ಪಟ್ಟಿಯನ್ನು ಪ್ರಕಟಿಸಲು ಮಂಗಳವಾರ ಅಂತಿಮ ಗಡುವು ಆಗಿದೆ. ತಂಡಗಳು ಯಾವ ಆಟಗಾರರನ್ನು ರಿಟೇನ್​ ಮಾಡಿಕೊಳ್ಳಲಿವೆ ಮತ್ತು ಯಾರನ್ನು ಕೈಬಿಡಲಿವೆ ಎಂಬ ಬಗ್ಗೆ ತೀವ್ರ ಕುತೂಹಲಗಳು ಹರಡಿವೆ.

ಹರಾಜು ಪ್ರಕ್ರಿಯೆಗೆ ಮುನ್ನ ಈಗಾಗಲೆ ಕೆಲ ಪ್ರಮುಖ ಆಟಗಾರರ ವರ್ಗಾವಣೆ ಪ್ರಕ್ರಿಯೆಗಳು ನಡೆದಿವೆ. ಹಾರ್ದಿಕ್​ ಪಾಂಡ್ಯ ಮುಂಬೈ ಇಂಡಿಯನ್ಸ್​ನಿಂದ ಪಂಜಾಬ್​ ಕಿಂಗ್ಸ್​ಗೆ ವರ್ಗಾವಣೆ ಆಗಿದ್ದರೆ, ಎಡಗೈ ವೇಗಿ ಅರ್ಷದೀಪ್​ ಸಿಂಗ್​ ಮುಂಬೈ ಇಂಡಿಯನ್ಸ್​ ಸೇರಿದ್ದಾರೆ. ರಿಷಭ್​ ಪಂತ್​ ಲಖನೌ ಸೂಪರ್​ಜೈಂಟ್ಸ್​ನಿಂದ ಡೆಲ್ಲಿ ಕ್ಯಾಪಿಟಲ್ಸ್​ ತಂಡಕ್ಕೆ ಮರಳಿದ್ದಾರೆ.

ಮುಂಬರುವ ಆವೃತ್ತಿಗೆ ಆಟಗಾರರ ವೇತನಕ್ಕೆ ಎಲ್ಲ ತಂಡಗಳಿಗೆ ತಲಾ 157 ಕೋಟಿ ರೂ. ವ್ಯಯಿಸಲು ಅವಕಾಶವಿದೆ. ತಂಡಗಳು ಯಾವ ಆಟಗಾರರನ್ನು ಕೈಬಿಡಲಿವೆ ಎಂಬ ಆಧಾರದಲ್ಲಿ ಹರಾಜಿಗೆ ಆಯಾ ತಂಡಗಳ ಉಳಿಕೆ ಮೊತ್ತ ನಿರ್ಧಾರವಾಗಲಿವೆ. ಹರಾಜು ಪ್ರಕ್ರಿಯೆ ಡಿಸೆಂಬರ್​ 16ಕ್ಕೆ ಕೊಚ್ಚಿಯಲ್ಲಿ ನಿಗದಿಯಾಗಿದೆ.

ಹಾಲಿ ಚಾಂಪಿಯನ್​ ಆರ್​ಸಿಬಿ ತಂಡ ಕಳೆದ 2 ಆವೃತ್ತಿಗಳ ಪ್ರಶಸ್ತಿ ಗೆಲುವಿಗೆ ನೆರವಾಗಿರುವ ತನ್ನ ಬಹುತೇಕ ಎಲ್ಲ ಪ್ರಮುಖ ಆಟಗಾರರನ್ನು ರಿಟೇನ್​ ಮಾಡಿಕೊಳ್ಳುವ ನಿರೀಕ್ಷೆ ಇದೆ. ಸಿಎಸ್​ಕೆ ತಂಡ ಕಳೆದ ಆವೃತ್ತಿಯಲ್ಲಿ ನಿರೀಕ್ಷಿತ ನಿರ್ವಹಣೆ ತೋರದ ತಲಾ 14.2 ಕೋಟಿ ರೂ. ಮೊತ್ತದ ಪ್ರಶಾಂತ್​ ವೀರ್​, ಕಾರ್ತಿಕ್​ ಶರ್ಮರನ್ನು ರಿಟೇನ್​ ಮಾಡಿಕೊಳ್ಳುವುದೇ ಎಂಬ ಕುತೂಹಲವಿದೆ. ಕೆಕೆಆರ್​ ತಂಡ 25.20 ಕೋಟಿ ರೂ. ಮೊತ್ತದ ಆಲ್ರೌಂಡರ್​ ಕ್ಯಾಮರಾನ್​ ಗ್ರೀನ್​ರನ್ನು ರಿಲೀಸ್​ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಪಂಜಾಬ್​ ಕಿಂಗ್ಸ್​ ತಂಡ ಯಜುವೇಂದ್ರ ಚಾಹಲ್​, ಮಾರ್ಕಸ್​ ಸ್ಟೋಯಿನಿಸ್​ರನ್ನು ಕೈಬಿಡುವ ಸಾಧ್ಯತೆಗಳಿವೆ. ಲಖನೌ ತಂಡ ನಿಕೋಲಸ್​ ಪೂರನ್​, ವಾನಿಂದು ಹಸರಂಗ ಭವಿಷ್ಯವನ್ನು ನಿರ್ಧರಿಸಬೇಕಿದೆ. ಮುಂಬೈ ತಂಡ ಟ್ರೆಂಟ್​ ಬೌಲ್ಟ್​, ಕ್ವಿಂಟನ್​ ಡಿಕಾಕ್​ ಕೈಬಿಡುವ ಸಾಧ್ಯತೆಗಳಿವೆ.

*ರಿಟೇನ್​ ಪಟ್ಟಿ ಪ್ರಕಟ: ಸಂಜೆ 5.00 ನಂತರ

*ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋ ಹಾಟ್​ಸ್ಟಾರ್​.

ಧೋನಿ ರಿಟೇನ್​/ರಿಟೈರ್​?

ಚೆನ್ನೈ ಸೂಪರ್​ಕಿಂಗ್ಸ್​ ತಂಡ ಮಾಜಿ ನಾಯಕ ಎಂಎಸ್​ ಧೋನಿ ಅವರನ್ನು ಮುಂದಿನ ವರ್ಷದ ಟೂರ್ನಿಗೂ ರಿಟೇನ್​ ಮಾಡಿಕೊಳ್ಳುವುದೇ ಅಥವಾ ಅವರು ಐಪಿಎಲ್​ನಿಂದಲೂ ನಿವೃತ್ತಿ ಹೊಂದುವರೇ ಎಂಬ ಕುತೂಹಲವಿದೆ. 45 ವರ್ಷದ ಧೋನಿ ಕಳೆದ ಆವೃತ್ತಿಗೆ ತಂಡದಲ್ಲಿದ್ದರೂ, ಫಿಟ್ನೆಸ್​ ಸಮಸ್ಯೆಯಿಂದಾಗಿ ಒಂದೂ ಪಂದ್ಯ ಆಡಿರಲಿಲ್ಲ. ಹೀಗಾಗಿ ಅವರು ಮುಂದಿನ ಆವೃತ್ತಿಗೆ ಫಿಟ್​ ಆಗುವ ಬಗ್ಗೆ ಅನುಮಾನವಿದೆ. ಅವರು ರಿಟೇನ್​ ಆಗದಿದ್ದರೆ ನಿವೃತ್ತಿ ಖಚಿತವೆನಿಸಿದೆ.