ಯುಎಇಯಲ್ಲಿ ಐಪಿಎಲ್ ತಂಡಗಳು ಕ್ವಾರಂಟೈನ್

ipl teams
Published on

ನವದೆಹಲಿ/ದುಬೈ: ಐಪಿಎಲ್ 13ನೇ ಆವೃತ್ತಿಗೆ ಪೂರ್ವಭಾವಿಯಾಗಿ ಎಲ್ಲ 8 ತಂಡಗಳು ಯುಎಇಯನ್ನು ತಲುಪಿವೆ. ಮಾಸ್ಕ್ ಮತ್ತು ಫೇಸ್ ಶೀಲ್ಡ್‌ಗಳನ್ನು ಧರಿಸಿದ ಆಟಗಾರರನ್ನು ಒಳಗೊಂಡ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್‌ರೈಸರ್ಸ್‌ ಹೈದರಾಬಾದ್ ಕೊನೆಯ 2 ತಂಡಗಳಾಗಿ ಭಾನುವಾರ ಅರಬ್ ರಾಷ್ಟ್ರವನ್ನು ತಲುಪಿವೆ.

ರಾಜಸ್ಥಾನ ರಾಯಲ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಕೋಲ್ಕತ ನೈಟ್‌ರೈಡರ್ಸ್‌ ತಂಡಗಳು ಗುರುವಾರ ಮೊದಲ ಹಂತದಲ್ಲಿ ಯುಎಇಗೆ ತೆರಳಿದ್ದರೆ, ಆರ್‌ಸಿಬಿ, ಚೆನ್ನೈ ಸೂಪರ್‌ಕಿಂಗ್ಸ್ ಮತ್ತು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಗಳು ಶುಕ್ರವಾರ 2ನೇ ಕಂತಿನಲ್ಲಿ ತೆರಳಿದ್ದವು. ಕೋವಿಡ್-19 ಹಾವಳಿಯಿಂದಾಗಿ ಭಾರತದಿಂದ ಸ್ಥಳಾಂತರಗೊಂಡಿರುವ ಟೂರ್ನಿ ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ನಡೆಯಲಿದೆ. ದುಬೈ, ಅಬುಧಾಬಿ ಮತ್ತು ಶಾರ್ಜಾ ಮೈದಾನಗಳಲ್ಲಿ ಪಂದ್ಯಗಳು ನಡೆಯಲಿವೆ.

ಎಲ್ಲ ತಂಡಗಳು ಎಲ್ಲ ಆಟಗಾರರು ಇನ್ನು 6 ದಿನಗಳ ಕ್ವಾರಂಟೈನ್‌ನಲ್ಲಿದ್ದು, 1, 3, 6ನೇ ದಿನದ ಕರೊನಾ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದ ಬಳಿಕ ಟೂರ್ನಿಯ ಬಯೋ-ಬಬಲ್‌ನಲ್ಲಿ ಅಭ್ಯಾಸ ಆರಂಭಿಸಲಿದ್ದಾರೆ. ಬಳಿಕ ಪ್ರತಿ 5 ದಿನಕ್ಕೊಮ್ಮೆ ಕರೊನಾ ಪರೀಕ್ಷೆ ನಡೆಯಲಿದೆ.

ಡೆಲ್ಲಿ, ಸನ್‌ರೈಸರ್ಸ್‌ ತಂಡಗಳ ಸಾಮಾಜಿಕ ಜಾಲತಾಣಗಳ ಪುಟದಲ್ಲಿ ಮತ್ತು ಆಟಗಾರರು ಟ್ವಿಟರ್‌ನಲ್ಲಿ ಪ್ರಯಾಣದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಪ್ರವಾಸಕ್ಕೆ ಪೂರ್ವಭಾವಿಯಾಗಿ ನಡೆದ 2 ಕರೊನಾ ಪರೀಕ್ಷೆಗಳಲ್ಲಿ ಎಲ್ಲರೂ ನೆಗೆಟಿವ್ ವರದಿಗಳನ್ನು ಪಡೆದುಕೊಂಡಿದ್ದಾರೆ.

ಆರ್‌ಸಿಬಿ ತಂಡ ಕೂಡಿಕೊಂಡ ಎಬಿಡಿ, ಸ್ಟೈನ್

ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್‌, ಡೇಲ್ ಸ್ಟೈನ್ ಮತ್ತು ಆಲ್ರೌಂಡರ್ ಕ್ರಿಸ್ ಮಾರಿಸ್ ಶನಿವಾರ ದುಬೈನಲ್ಲಿ ಆರ್‌ಸಿಬಿ ತಂಡವನ್ನು ಕೂಡಿಕೊಂಡಿದ್ದಾರೆ. ಈ ಮೂವರು ಆಟಗಾರರು ತಂಡವನ್ನು ಕೂಡಿಕೊಂಡ ವಿಡಿಯೋವನ್ನು ಆರ್‌ಸಿಬಿ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಲಾಗಿದೆ. ‘ಈ ಬಾರಿ ಪ್ರಯಾಣ ಸ್ವಲ್ಪ ಭಿನ್ನವಾಗಿತ್ತು. ದಕ್ಷಿಣ ಆಫ್ರಿಕಾದ ನನ್ನ ಗೆಳೆಯರ ಜತೆಗೆ ಆರ್‌ಸಿಬಿ ಕುಟುಂಬವನ್ನು ಕೂಡಿಕೊಂಡಿರುವುದು ಖುಷಿ ನೀಡಿದೆ’ ಎಂದು ಎಬಿಡಿ ತಿಳಿಸಿದ್ದಾರೆ. ಆರ್‌ಸಿಬಿ ತಂಡ ಶುಕ್ರವಾರ ಮುಂಬೈನಿಂದ ದುಬೈಗೆ ಪ್ರಯಾಣ ಬೆಳೆಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net