ಯುಎಇಗೆ ಐಪಿಎಲ್ ಶಿಫ್ಟ್​, ಕೇಂದ್ರ ಸರ್ಕಾರದ ಅಂಗಳಕ್ಕೆ ಚೆಂಡು?

ipl2020
Published on

ನವದೆಹಲಿ: ಭಾರತದಲ್ಲಿ ಕರೊನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ನಡುವೆ ಐಪಿಎಲ್ 13ನೇ ಆವೃತ್ತಿಯನ್ನು ಯುಎಇಗೆ ಸ್ಥಳಾಂತರಿಸಲು ಬಿಸಿಸಿಐ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಅನುಮತಿ ಪಡೆದುಕೊಳ್ಳಲು ಬಿಸಿಸಿಐ ಸಿದ್ಧತೆ ಆರಂಭಿಸಿದೆ. ಟಿ20 ವಿಶ್ವಕಪ್ ಟೂರ್ನಿ ಮುಂದೂಡಿಕೆ ಅಧಿಕೃತವಾಗಿ ಘೋಷಣೆಯಾದ ಬೆನ್ನಲ್ಲೇ ಬಿಸಿಸಿಐಗೆ ಐಪಿಎಲ್ ಸ್ಥಳಾಂತರ ಪ್ರಕ್ರಿಯೆ ಆರಂಭಿಸಲು ಶುಕ್ರವಾರ ನಡೆದ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ.

ಟಿ20 ವಿಶ್ವಕಪ್ ಮುಂದೂಡಿಕೆ ಮತ್ತು ಸ್ಥಳಾಂತರಕ್ಕೆ ಕೇಂದ್ರ ಸರ್ಕಾರದ ಅನುಮತಿ ದೊರೆತ ಬೆನ್ನಲ್ಲೇ ಟೂರ್ನಿಯ ವೇಳಾಪಟ್ಟಿ ಅಂತಿಮಗೊಳಿಸಲಾಗುವುದು ಎನ್ನಲಾಗಿದೆ. ಈ ಹಿಂದೆ 2014ರಲ್ಲಿ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಐಪಿಎಲ್ ಟೂರ್ನಿಯ ಮೊದಲಾರ್ಧ ಯುಎಇಗೆ ಸ್ಥಳಾಂತರಗೊಂಡಿತ್ತು. ಅದಕ್ಕೆ ಮುನ್ನ 2009ರಲ್ಲಿ ಸಂಪೂರ್ಣ ಟೂರ್ನಿ ದಕ್ಷಿಣ ಆಫ್ರಿಕಾದಲ್ಲಿ ನಡೆದಿತ್ತು.

ಯುಎಇಯಲ್ಲಿ 56 ಸಾವಿರಕ್ಕೂ ಅಧಿಕ ಕರೊನಾ ಪ್ರಕರಣ ದಾಖಲಾಗಿದ್ದು, 337 ಮಂದಿ ಮೃತಪಟ್ಟಿದ್ದು, 48 ಸಾವಿರಕ್ಕೂ ಅಧಿಕ ಮಂದಿ ಗುಣಮುಖರಾಗಿದ್ದಾರೆ. ದುಬೈ, ಅಬುಧಾಬಿ ಮತ್ತು ಶಾರ್ಜಾದಲ್ಲಿ ಸುಸಜ್ಜಿತ ಕ್ರಿಕೆಟ್ ಕ್ರೀಡಾಂಗಣಗಳಿದ್ದು, 3 ನಗರಗಳ ನಡುವೆ ಹೆಚ್ಚು ಅಂತರವಿಲ್ಲ. ವಿದೇಶಿ ಕ್ರಿಕೆಟಿಗರು ದುಬೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯವುದು ಸುಲಭವೆನಿಸಿದೆ. ಸೆ. 26ರಿಂದ ನ. 7ರವರೆಗೆ ಐಪಿಎಲ್ ಆಯೋಜನೆಗೆ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ. ಸೋಮವಾರದ ಐಸಿಸಿ ಸಭೆಯಲ್ಲಿ ಟಿ20 ವಿಶ್ವಕಪ್ ಮುಂದೂಡಲ್ಪಟ್ಟರೆ ಬಿಸಿಸಿಐಗೆ ಎಲ್ಲ ವಿಷಯದ ಬಗ್ಗೆ ಸ್ಪಷ್ಟ ನಿರ್ಧಾರ ಸಾಧ್ಯವಾಗಲಿದೆ.

ಸ್ಥಳಾಂತರಕ್ಕೆ ಕೇಂದ್ರ ಒಪ್ಪದಿದ್ದರೆ ಮಹಾರಾಷ್ಟ್ರ ಆತಿಥ್ಯ?

ಅತ್ಯಧಿಕ ಕರೊನಾ ಪ್ರಕರಣಗಳಿರುವ ರಾಜ್ಯ ಮಹಾರಾಷ್ಟ್ರ. ಆದರೆ ಕೇಂದ್ರ ಸರ್ಕಾರ, ಐಪಿಎಲ್ ಸ್ಥಳಾಂತರಕ್ಕೆ ಒಪ್ಪದಿದ್ದರೆ ಆಗ ಮಹಾರಾಷ್ಟ್ರದ ಮುಂಬೈ-ಪುಣೆಯಲ್ಲಿ ಆಯೋಜನೆ ಮಾಡಲು ಪ್ಲ್ಯಾನ್ ಬಿ ಕೂಡ ಬಿಸಿಸಿಐ ಸಿದ್ಧವಿಟ್ಟಿದೆ. ಈ ನಗರಗಳಲ್ಲಿ ಒಟ್ಟು 4 ಸುಸಜ್ಜಿತ ಮೈದಾನಗಳಿವೆ.

ಫ್ರಾಂಚೈಸಿಗಳಿಂದ ಬಾಡಿಗೆ ವಿಮಾನ ಬುಕ್?

ಐಪಿಎಲ್ ಟೂರ್ನಿ ಯುಎಇಯಲ್ಲಿ ಆಯೋಜನೆಗೊಂಡರೆ ಅಲ್ಲಿಗೆ ತೆರಳುವ ಯೋಜನೆಯ ರೂಪುರೇಷೆಗಳನ್ನು ಫ್ರಾಂಚೈಸಿಗಳು ಸಿದ್ಧಪಡಿಸಿವೆ. ಆಟಗಾರರನ್ನು ಮೊದಲಿಗೆ ಭಾರತದಲ್ಲೇ ಐಸೋಲೇಷನ್ ಮಾಡಿ ಬಳಿಕ ಬಾಡಿಗೆ ವಿಮಾನದ ಮೂಲಕ ಯುಎಇಗೆ ಕರೆದೊಯ್ಯಲು ಯೋಜನೆ ರೂಪಿಸಲಾಗಿದೆ. 35-40 ಸದಸ್ಯರನ್ನು ಹೊಂದಿರುವ ಪ್ರತಿ ಫ್ರಾಂಚೈಸಿ ಆಗಸ್ಟ್ ಕೊನೆಯಲ್ಲಿ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಯುಎಇಗೆ ಪ್ರಯಾಣಿಸುವ ಯೋಜನೆಯಲ್ಲಿವೆ. ವಿದೇಶಿ ಆಟಗಾರರು ನೇರವಾಗಿ ಯುಎಇಗೆ ಆಗಮಿಸಲಿದ್ದಾರೆ ಎನ್ನಲಾಗಿದೆ.

ಡಿಸೆಂಬರ್‌ವರೆಗಿಲ್ಲ ದೇಶೀಯ ಕ್ರಿಕೆಟ್?

ಡಿಸೆಂಬರ್‌ವರೆಗೂ ಯಾವುದೇ ದೇಶೀಯ ಕ್ರಿಕೆಟ್ ಟೂರ್ನಿಗಳನ್ನು ಆಯೋಜಿಸದಿರುವ ಬಗ್ಗೆ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಚರ್ಚಿಸಲಾಗಿದೆ. ಅಲ್ಲದೆ ದುಲೀಪ್ ಟ್ರೋಫಿ, ದೇವಧರ್ ಟ್ರೋಫಿ ಮತ್ತು ಚಾಲೆಂಜರ್ ಸರಣಿಗಳನ್ನು ಮುಂದಿನ ದೇಶೀಯ ಕ್ರಿಕೆಟ್ ಕ್ಯಾಲೆಂಡರ್‌ನಿಂದ ಕೈಬಿಡುವ ಬಗ್ಗೆ ಚಿಂತನೆ ನಡೆದಿದೆ ಎನ್ನಲಾಗಿದೆ. ಇದಲ್ಲದೆ ಈ ವರ್ಷಾಂತ್ಯದವರೆಗೆ ಭಾರತದಲ್ಲಿ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವೂ ಆಯೋಜನೆಗೊಳ್ಳುವ ಸಾಧ್ಯತೆ ಇಲ್ಲ. ಹಾಲಿ ಕರೊನಾ ಹಾವಳಿಯ ಪರಿಸ್ಥಿತಿ ಗಮನಿಸಿದಾಗ, 38 ತಂಡಗಳು ಆಡುವ ದೇಶೀಯ ಕ್ರಿಕೆಟ್ ಟೂರ್ನಿಗಳನ್ನು ಆಯೋಜಿಸುವುದು ಕಷ್ಟಕರವಾಗಿ ಕಾಣಿಸಿದೆ. ರಣಜಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿ ಪಂದ್ಯಗಳು ಮಾತ್ರ ಸಂಪೂರ್ಣವಾಗಿ ಆಯೋಜನೆಗೊಳ್ಳಬಹುದು ಎನ್ನಲಾಗಿದೆ. ವಯೋಮಿತಿ ಟೂರ್ನಿಗಳ ಪೈಕಿ 23 ವಯೋಮಿತಿಯ ಸಿಕೆ ನಾಯ್ಡು ಟ್ರೋಫಿ ಮತ್ತು 19 ವಯೋಮಿತಿಯ ಕೂಚ್ ಬೆಹಾರ್ ಟ್ರೋಫಿ ಟೂರ್ನಿಗಳು ಮಾತ್ರ ನಡೆಯಬಹುದು. 14 ಮತ್ತು 16 ವಯೋಮಿತಿಯ ಟೂರ್ನಿಗಳು ರದ್ದುಗೊಳ್ಳಲಿವೆ ಎನ್ನಲಾಗಿದೆ. ಮಹಿಳಾ ಕ್ರಿಕೆಟ್‌ನಲ್ಲಿ 23 ವಯೋಮಿತಿ ಮತ್ತು ಸೀನಿಯರ್ ಏಕದಿನ ಟೂರ್ನಿ ಮಾತ್ರ ನಡೆಯಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net