

ನವದೆಹಲಿ: ವೆಚ್ಚ ತಗ್ಗಿಸುವ ಕ್ರಮದ ಅಂಗವಾಗಿ ಮುಂಬರುವ ಐಪಿಎಲ್ 13ನೇ ಆವೃತ್ತಿಯ ಬಹುಮಾನ ಮೊತ್ತವನ್ನು ಅರ್ಧದಷ್ಟು ಕಡಿತಗೊಳಿಸಲು ಬಿಸಿಸಿಐ ನಿರ್ಧರಿಸಿದೆ. ಇದರಿಂದ ಟೂರ್ನಿಯ ಒಟ್ಟು ಬಹುಮಾನ ಮೊತ್ತ ಈ ಬಾರಿ 50 ಕೋಟಿ ರೂ.ನಿಂದ 25 ಕೋಟಿ ರೂ.ಗೆ ಇಳಿಕೆಯಾಗಿದೆ.
ಈ ಬಾರಿ ಟೂರ್ನಿಯ ಚಾಂಪಿಯನ್ ತಂಡ 10 ಕೋಟಿ ರೂ. ಬಹುಮಾನ ಪಡೆಯಲಿದೆ. ಕಳೆದ ವರ್ಷ 20 ಕೋಟಿ ರೂ. ಬಹುಮಾನ ನೀಡಲಾಗಿತ್ತು. ರನ್ನರ್ ಅಪ್ ತಂಡ ಈ ಬಾರಿ 12.5 ಕೋಟಿ ರೂ.ಗೆ ಬದಲಾಗಿ 6.25 ಕೋಟಿ ರೂ. ಬಹುಮಾನ ಪಡೆಯಲಿದೆ. ಪ್ಲೇಆಫ್ನಲ್ಲಿ ಸೋತ ತಂಡಗಳು 4.375 ಕೋಟಿ ರೂ. ಬಹುಮಾನ ಪಡೆಯಲಿವೆ. ಕಳೆದ ವರ್ಷ 3, 4ನೇ ಸ್ಥಾನ ಪಡೆದ ತಂಡಗಳು ತಲಾ 8.75 ಕೋಟಿ ರೂ. ಪಡೆದಿದ್ದವು. ಈ ಬಗ್ಗೆ ಈಗಾಗಲೆ ಎಲ್ಲ ಫ್ರಾಂಚೈಸಿಗಳಿಗೆ ಬಿಸಿಸಿಐ ಮಾಹಿತಿ ನೀಡಿದೆ.
‘ಐಪಿಎಲ್ನ ಎಲ್ಲ ಫ್ರಾಂಚೈಸಿಗಳೂ ಈಗ ಸುಸ್ಥಿತಿಯಲ್ಲಿವೆ. ಪ್ರಾಯೋಜಕತ್ವ ಮತ್ತಿತರ ಮಾರ್ಗಗಳಿಂದ ಎಲ್ಲ ಫ್ರಾಂಚೈಸಿಗಳು ಉತ್ತಮ ಆದಾಯ ಗಳಿಸುತ್ತಿವೆ. ಹೀಗಾಗಿ ಬಹುಮಾನ ಮೊತ್ತ ತಗ್ಗಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ರಾಜ್ಯ ಸಂಸ್ಥೆಗಳಿಗೆ ಲಾಭ: ಐಪಿಎಲ್ ಆಯೋಜಿಸುವ ಎಲ್ಲ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಪ್ರತಿ ಪಂದ್ಯಕ್ಕೆ ಒಂದು ಕೋಟಿ ರೂ. ನೀಡಲು ಬಿಸಿಸಿಐ ನಿರ್ಧರಿಸಿದೆ. ಇದರಲ್ಲಿ 50 ಲಕ್ಷ ರೂ.ಗಳನ್ನು ಬಿಸಿಸಿಐ ವಿತರಿಸಲಿದ್ದರೆ, ಉಳಿದ 50 ಲಕ್ಷ ರೂ.ಗಳನ್ನು ಫ್ರಾಂಚೈಸಿಗಳು ನೀಡಬೇಕಿದೆ. ಕಳೆದ ವರ್ಷ ಫ್ರಾಂಚೈಸಿಗಳು, ರಾಜ್ಯ ಕ್ರಿಕೆಟ್ ಸಂಸ್ಥೆಗೆ ಪ್ರತಿ ಪಂದ್ಯಕ್ಕೆ 30 ಲಕ್ಷ ರೂ. ನೀಡುತ್ತಿದ್ದರೆ, ಈ ಬಾರಿ 20 ಲಕ್ಷ ರೂ. ಹೆಚ್ಚಿಸಲಾಗಿದೆ. ಇದಕ್ಕೂ ಫ್ರಾಂಚೈಸಿಗಳು ಅಸಮಾಧಾನ ವ್ಯಕ್ತಪಡಿಸಿವೆ.
ಆರ್ಥಿಕ ಕುಸಿತದ ಪರಿಣಾಮ?: ಕಾಸ್ಟ್ ಕಟ್ಟಿಂಗ್ಗಾಗಿ ಐಪಿಎಲ್ ಬಹುಮಾನ ಮೊತ್ತ ಕಡಿತಗೊಳಿಸಲಾಗಿದೆ ಎಂದು ಬಿಸಿಸಿಐ ಹೇಳಿದ್ದರೂ, ಜಾಗತಿಕ ಆರ್ಥಿಕ ಕುಸಿತದ ಪರಿಣಾಮವಾಗಿ ಈ ಇಳಿಕೆ ಮಾಡಲಾಗಿದೆ ಎಂದೂ ವಿಶ್ಲೇಷಿಸಲಾಗುತ್ತಿದೆ. 47,500 ಕೋಟಿ ರೂ. ಬ್ರಾಂಡ್ ಮೌಲ್ಯದ ಐಪಿಎಲ್ ಕೂಡ ಆರ್ಥಿಕ ಕುಸಿತದಿಂದ ತತ್ತರಿಸಿದೆ ಎನ್ನಲಾಗುತ್ತಿದೆ. -ಪಿಟಿಐ/ಏಜೆನ್ಸೀಸ್