ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಇಂದು ಮುಂಬೈ-ಚೆನ್ನೈ ಕಾದಾಟ

ipl mi-cswk match today web
Published on

ಅಬುಧಾಬಿ: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್‌ಕಿಂಗ್ಸ್ ತಂಡಗಳ ನಡುವೆ ಶನಿವಾರ ಯುಎಇಯ ಪ್ರಮುಖ ಪ್ರವಾಸಿತಾಣ ಕಡಲನಗರಿಯ ಶೇಖ್ ಜಯೆದ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದ ಮೂಲಕ ಐಪಿಎಲ್ 13ನೇ ಆವೃತ್ತಿ ಅಧಿಕೃತ ಆರಂಭವನ್ನು ಕಾಣಲಿದೆ. ಕಳೆದ ವರ್ಷ ಉಭಯ ತಂಡಗಳ ನಡುವೆಯೇ ನಡೆದಿದ್ದ ಫೈನಲ್ ಪಂದ್ಯದ ರೋಚಕತೆಯೇ ಮತ್ತೆ ಮರುಕಳಿಸುವ ನಿರೀಕ್ಷೆ ಇದೆ.

2019ರ ಮೇ 12ರಂದು ಹೈದರಾಬಾದ್‌ನಲ್ಲಿ ನಡೆದ 12ನೇ ಆವೃತ್ತಿಯ ಫೈನಲ್‌ನಲ್ಲಿ 4ನೇ ಬಾರಿ ಚಾಂಪಿಯನ್‌ಪಟ್ಟ ಒಲಿಸಿಕೊಳ್ಳುವ ಅವಕಾಶವನ್ನು ಕೇವಲ 1 ರನ್‌ನಿಂದ ಕಳೆದುಕೊಂಡಿದ್ದ ಎಂಎಸ್ ಧೋನಿ ಸಾರಥ್ಯದ ಸಿಎಸ್‌ಕೆ ತಂಡ ಇದೀಗ ಉದ್ಘಾಟನಾ ಪಂದ್ಯದಲ್ಲಿ ಸೇಡು ತೀರಿಸಿಕೊಂಡು ಶುಭಾರಂಭ ಕಾಣುವ ತವಕದಲ್ಲಿದೆ. ಆರಂಭದಲ್ಲೇ ತಂಡದ ಇಬ್ಬರು ಆಟಗಾರರಿಗೆ ಕರೊನಾ, ಸುರೇಶ್ ರೈನಾ, ಹರ್ಭಜನ್ ಸಿಂಗ್ ಗೈರಿನಿಂದ ತತ್ತರಿಸಿರುವ ಸಿಎಸ್‌ಕೆ ಗೆಲುವಿನೊಂದಿಗೆ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ಗುರಿ ಹೊಂದಿದೆ. ಧೋನಿ ನಾಯಕತ್ವವೇ ತಂಡಕ್ಕೆ ಸ್ಫೂರ್ತಿಯಾಗಿದೆ.

ಮತ್ತೊಂದೆಡೆ, 4 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಕಳೆದ ವರ್ಷದ ಫೈನಲ್ ಪಂದ್ಯದ ಫಲಿತಾಂಶ ಪುನರಾವರ್ತಿಸುವ ಹಂಬಲಲ್ಲಿದೆ. ರೋಹಿತ್ ಶರ್ಮ ಬಳಗ 2014ರಲ್ಲಿ ಯುಎಇ ನಡೆದ ಲೀಗ್‌ನ ಆರಂಭಿಕ 5 ಪಂದ್ಯಗಳಲ್ಲೂ ಸೋತಿತ್ತು. ಇದರಿಂದ ಮುಂಬೈ ಇಂಡಿಯನ್ಸ್ ತಂಡಕ್ಕೆ ಅರಬರ ನಾಡಲ್ಲಿ ಅದೃಷ್ಟವಿಲ್ಲ ಎಂದೇ ಹೇಳಲಾಗುತ್ತಿದೆ.

ಇತಿಹಾಸ ಏನೇ ಇದ್ದರೂ ಒಟ್ಟಾರೆ ಲೆಕ್ಕಾಚಾರದಲ್ಲಿ ಸಿಎಸ್‌ಕೆ ವಿರುದ್ಧ ಮೇಲುಗೈ ಹೊಂದಿರುವ ಮುಂಬೈ ಇಂಡಿಯನ್ಸ್ ಕೂಡ ಶುಭಾರಂಭದ ನಿರೀಕ್ಷೆಯಲ್ಲಿದೆ. ಸ್ಟಾರ್ ಆಟಗಾರನ್ನೇ ಹೊಂದಿರುವ ಮುಂಬೈ ತಂಡಕ್ಕೆ ಅನುಭವಿ ಲಸಿತ್ ಮಾಲಿಂಗ ಅನುಪಸ್ಥಿತಿ ಕಾಡಲಿದೆ.

ಮುಖಾಮುಖಿ: 28, ಸಿಎಸ್‌ಕೆ: 11, ಮುಂಬೈ: 17

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net