ಇಂದು-ನಾಳೆ ಐಪಿಎಲ್​ ಮೆಗಾ ಹರಾಜು: ಕಣದಲ್ಲಿ 577 ಆಟಗಾರರು; ಇಲ್ಲಿದೆ ಪೂರ್ಣ ವಿವರ

web ipl auction
Published on

ಜಿದ್ದಾ (ಸೌದಿ ಅರೇಬಿಯಾ): ಬಹುನಿರೀಕ್ಷಿತ ಐಪಿಎಲ್​ 18ನೇ ಆವೃತ್ತಿಯ ಮೆಗಾ ಹರಾಜು ಪ್ರಕ್ರಿಯೆ ಭಾನುವಾರ ಮತ್ತು ಸೋಮವಾರ ಸೌದಿ ಅರೇಬಿಯಾದ ಜಿದ್ದಾದಲ್ಲಿ ನಡೆಯಲಿದೆ. ವಿಕೆಟ್​ ಕೀಪರ್​-ಬ್ಯಾಟರ್​ ರಿಷಭ್​ ಪಂತ್​, ಕನ್ನಡಿಗ ಕೆಎಲ್​ ರಾಹುಲ್​, ಮುಂಬೈ ಬ್ಯಾಟರ್​ ಶ್ರೇಯಸ್​ ಅಯ್ಯರ್​, ಎಡಗೈ ವೇಗಿ ಅರ್ಷದೀಪ್​ ಸಿಂಗ್​, ಇಂಗ್ಲೆಂಡ್​ ಸ್ಫೋಟಕ ಬ್ಯಾಟರ್​ ಜೋಸ್​ ಬಟ್ಲರ್​, ಆಸೀಸ್​ ವೇಗಿ ಮಿಚೆಲ್​ ಸ್ಟಾರ್ಕ್​ ಖರೀದಿಗೆ ಹರಾಜಿನಲ್ಲಿ 10 ತಂಡಗಳ ನಡುವೆ ನಿಕಟ ಪೈಪೋಟಿ ನಡೆಯುವ ನಿರೀಕ್ಷೆ ಇದೆ.

2 ದಿನಗಳ ಹರಾಜು ಪ್ರಕ್ರಿಯೆಯಲ್ಲಿ 367 ಭಾರತೀಯರು, 210 ವಿದೇಶಿಯರ ಸಹಿತ ಒಟ್ಟು 577 ಆಟಗಾರರ ಲಿಲಾವು ನಡೆಯಲಿದೆ. 10 ತಂಡಗಳು 70 ವಿದೇಶಿಯರ ಸಹಿತ ಗರಿಷ್ಠ 204 ಆಟಗಾರರ ಖರೀದಿ ಮಾಡಬಹುದಾಗಿದೆ. ಪ್ರತಿ ತಂಡ ಕನಿಷ್ಠ 18ರಿಂದ ಗರಿಷ್ಠ 25 ಆಟಗಾರರನ್ನು ಹೊಂದಬಹುದಾಗಿದೆ. ರಿಟೇನ್​ ವೆಚ್ಚ ಸೇರಿ ಪ್ರತಿ ತಂಡ ಆಟಗಾರರ ಖರೀದಿಗೆ ಗರಿಷ್ಠ 120 ಕೋಟಿ ರೂ. ವ್ಯಯಿಸಬಹುದಾಗಿದೆ.

ತಲಾ 6ರ 2 ಸೆಟ್​ನಲ್ಲಿ 12 ಪ್ರಮುಖ (ಮಾರ್ಕೀ) ಆಟಗಾರರ ಹರಾಜು ಮೊದಲಿಗೆ ನಡೆಯಲಿದೆ. ನಂತರ ವಿವಿಧ ಸೆಟ್​ಗಳಲ್ಲಿ ಆಟಗಾರರ ಲಿಲಾವು ನಡೆಯಲಿದೆ. ಮೊದಲ 116 ಆಟಗಾರರ ಲಿಲಾವಿನ ನಂತರ ಹರಾಜು ಪ್ರಕ್ರಿಯೆ ವೇಗ ಪಡೆದುಕೊಳ್ಳಲಿದೆ.

81 ಆಟಗಾರರ ಗರಿಷ್ಠ 2 ಕೋಟಿ ರೂ. ಮೂಲಬೆಲೆ ಹೊಂದಿದ್ದಾರೆ. 27 ಆಟಗಾರರು 1.5 ಕೋಟಿ ರೂ., 18 ಆಟಗಾರರು 1.25 ಕೋಟಿ ರೂ., 23 ಆಟಗಾರರು 1 ಕೋಟಿ ರೂ, 92 ಆಟಗಾರರು 75 ಲಕ್ಷ ರೂ. ಮೂಲಬೆಲೆ ಹೊಂದಿದ್ದಾರೆ. 320 ಆಟಗಾರರು ಕನಿಷ್ಠ 30 ಲಕ್ಷ ರೂ. ಮೂಲಬೆಲೆಯ ಪಟ್ಟಿಯಲ್ಲಿದ್ದಾರೆ. ಪಂಜಾಬ್​ ಕಿಂಗ್ಸ್​ ಹರಾಜಿಗೆ ಗರಿಷ್ಠ 110.5 ಕೋಟಿ ರೂ. ಮೊತ್ತ ಹೊಂದಿದ್ದರೆ, ರಾಜಸ್ಥಾನ ಕನಿಷ್ಠ 41 ಕೋಟಿ ರೂ. ಮಾತ್ರ ಹೊಂದಿದೆ. ಆರ್​ಸಿಬಿ ತಂಡ ಹರಾಜಿಗೆ 2ನೇ ಗರಿಷ್ಠ 83 ಕೋಟಿ ರೂ. ಬಜೆಟ್​ ಹೊಂದಿದೆ. ಮೊದಲ ದಿನ ಹರಾಜಿನಲ್ಲಿ ಮಾರಾಟವಾಗದ ಆಟಗಾರರು 2ನೇ ದಿನ ಮೂಲಬೆಲೆ ಇಳಿಸಿಕೊಂಡು ಮತ್ತೆ ಹರಾಜಿನಲ್ಲಿ ಕಾಣಿಸಿಕೊಳ್ಳಬಹುದಾಗಿರುತ್ತದೆ.

577: ಹರಾಜು ಕಣದಲ್ಲಿರುವ ಒಟ್ಟು ಆಟಗಾರರು.

367: ಹರಾಜು ಪಟ್ಟಿಯಲ್ಲಿರುವ ಭಾರತೀಯರು.

210: ಹರಾಜು ಪಟ್ಟಿಯಲ್ಲಿರುವ ವಿದೇಶೀಯರು.

46: 10 ತಂಡಗಳು ರಿಟೇನ್​ ಮಾಡಿರುವವರು.

81: ಗರಿಷ್ಠ 2 ಕೋಟಿ ರೂ. ಮೂಲಬೆಲೆ ಕ್ರಿಕೆಟಿಗರು.

204: ಮಾರಾಟವಾಗಬಹುದಾದ ಗರಿಷ್ಠ ಕ್ರಿಕೆಟಿಗರು.

70: ಮಾರಾಟವಾಗಬಹುದಾದ ಗರಿಷ್ಠ ವಿದೇಶಿಯರು.

558.5: ಕೋಟಿ ರೂ. 10 ತಂಡಗಳ ರಿಟೇನ್​ ವೆಚ್ಚ.

641.5: ಕೋಟಿ ರೂ. ಹರಾಜಿನ ಒಟ್ಟಾರೆ ಬಜೆಟ್​.

*ಹರಾಜು ನಡೆಸಿಕೊಡುವವರು: ಮಲ್ಲಿಕಾ ಸಾಗರ್​

*ಹರಾಜು ಪ್ರಕ್ರಿಯೆ: ಮಧ್ಯಾಹ್ನ 3.30ರಿಂದ ರಾತ್ರಿ 11.

*ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋಸಿನಿಮಾ

*12 ಮಾರ್ಕೀ ಆಟಗಾರರು

ರಿಷಭ್​ ಪಂತ್​, ಕೆಎಲ್​ ರಾಹುಲ್​, ಶ್ರೇಯಸ್​ ಅಯ್ಯರ್​, ಅರ್ಷದೀಪ್​ ಸಿಂಗ್​, ಯಜುವೇಂದ್ರ ಚಾಹಲ್​, ಮೊಹಮದ್​ ಶಮಿ, ಮೊಹಮದ್​ ಸಿರಾಜ್​, ಮಿಚೆಲ್​ ಸ್ಟಾರ್ಕ್​, ಜೋಸ್​ ಬಟ್ಲರ್​, ಲಿಯಾಮ್​ ಲಿವಿಂಗ್​ಸ್ಟೋನ್​, ಡೇವಿಡ್​ ಮಿಲ್ಲರ್​, ಕಗಿಸೊ ರಬಾಡ.

*ಸೆಟ್​3: ಹ್ಯಾರಿ ಬ್ರೂಕ್​, ಡೆವೊನ್​ ಕಾನ್​ವೇ, ಫ್ರೇಸರ್​ ಮೆಕ್​ಗುರ್ಕ್​, ಏಡನ್​ ಮಾರ್ಕ್ರಮ್​, ದೇವದತ್​ ಪಡಿಕ್ಕಲ್​, ರಾಹುಲ್​ ತ್ರಿಪಾಠಿ, ಡೇವಿಡ್​ ವಾರ್ನರ್​.

*ಸೆಟ್​4: ಆರ್​. ಅಶ್ವಿನ್​, ವೆಂಕಟೇಶ್​ ಅಯ್ಯರ್​, ಮಿಚೆಲ್​ ಮಾರ್ಷ್​, ಗ್ಲೆನ್​ ಮ್ಯಾಕ್ಸ್​ವೆಲ್​, ಹರ್ಷಲ್​ ಪಟೇಲ್​, ರಚಿನ್​ ರವೀಂದ್ರ, ಮಾರ್ಕಸ್​ ಸ್ಟೋಯಿನಿಸ್​.

*ಸೆಟ್​5: ಜಾನಿ ಬೇರ್​ಸ್ಟೋ, ಕ್ವಿಂಟನ್​ ಡಿಕಾಕ್​, ರಹಮಾನುಲ್ಲ ಗುರ್ಬಜ್​, ಇಶಾನ್​ ಕಿಶನ್​, ಫಿಲ್​ ಸಾಲ್ಟ್​, ಜಿತೇಶ್​ ಶರ್ಮ.

*ಬಿಡ್ಡಿಂಗ್​ ಪ್ರಕ್ರಿಯೆ ಹೀಗಿರುತ್ತದೆ...

ಹರಾಜಿನಲ್ಲಿ ಆಟಗಾರರ ಬಿಡ್ಡಿಂಗ್​ನಲ್ಲಿ ಕೋಟಿ ರೂ. ವರೆಗೆ 5 ಲಕ್ಷ ರೂ. ಏರಿಕೆಯಾಗುತ್ತದೆ. 1 ಕೋಟಿಯಿಂದ 2 ಕೋಟಿ ರೂ.ವರೆಗೆ 10 ಲಕ್ಷ ರೂ.ನಂತೆ ಬಿಡ್​ ಏರಿಕೆಯಾಗುತ್ತದೆ. 2ರಿಂದ 3 ಕೋಟಿ ರೂ.ವರೆಗೆ 20 ಲಕ್ಷ ರೂ.ನಂತೆ ಬಿಡ್​ ಏರಿಸಲಾಗುತ್ತದೆ. 3 ಕೋಟಿ ರೂ. ನಂತರದಲ್ಲಿ 25 ಲಕ್ಷ ರೂ.ನಂತೆ ಬಿಡ್​ ಮೊತ್ತವನ್ನು ಏರಿಸಲಾಗುತ್ತದೆ.

ಹಿರಿ-ಕಿರಿಯ ಆಟಗಾರರು

ಇಂಗ್ಲೆಂಡ್​ನ 42 ವರ್ಷದ ನಿವೃತ್ತ ವೇಗಿ ಜೇಮ್ಸ್​ ಆಂಡರ್​ಸನ್​ (1.25 ಕೋಟಿ ರೂ. ಮೂಲಬೆಲೆ) ಹರಾಜು ಪಟ್ಟಿಯಲ್ಲಿರುವ ಅತ್ಯಂತ ಹಿರಿಯ ಆಟಗಾರರಾಗಿದ್ದಾರೆ. ಬಿಹಾರದ 14 ವರ್ಷದ ಬ್ಯಾಟರ್​ ವೈಭವ್​ ಸೂರ್ಯವಂಶಿ ಹರಾಜು ಕಣದಲ್ಲಿರುವ ಅತ್ಯಂತ ಕಿರಿಯ ಆಟಗಾರರಾಗಿದ್ದಾರೆ. 17 ವರ್ಷದ ಆಯುಷ್​ ಮಹಾತ್ರೆ, 18 ವರ್ಷದ ಕ್ವೆನಾ ಮಾಕ ಮತ್ತು 18 ವರ್ಷದ ಆಂಡ್ರೆ ಸಿದ್ಧಾರ್ಥ್​ ಇತರ ಕಿರಿಯರಾಗಿದ್ದಾರೆ. ಇಂಗ್ಲೆಂಡ್​ನ ಜೇಮಿ ಓವರ್ಟನ್​, ದಣ ಆಫ್ರಿಕಾದ ಫಾಫ್ ಡು ಪ್ಲೆಸಿಸ್​, ಅಫ್ಘಾನಿನಿಸ್ತಾನದ ಮೊಹಮದ್​ ನಬಿ ಹರಾಜಿನಲ್ಲಿರುವ ಇತರ 40 ಪ್ಲಸ್​ ಆಟಗಾರರು.

ಕಣದಲ್ಲಿ 27 ಕನ್ನಡಿಗರು

ಐಪಿಎಲ್​-18ರ ಹರಾಜಿನಲ್ಲಿ ಕರ್ನಾಟಕದ 27 ಕ್ರಿಕೆಟಿಗರು ಅದೃಷ್ಟ ಪರೀಸಲಿದ್ದಾರೆ. ಕೆಎಲ್​ ರಾಹುಲ್​ ಜತೆಗೆ ದೇವದತ್​ ಪಡಿಕ್ಕಲ್​, ಪ್ರಸಿದ್ಧ ಕೃಷ್ಣ 2 ಕೋಟಿ ರೂ. ಮೂಲಬೆಲೆ ಹೊಂದಿದ್ದಾರೆ. ಮಯಾಂಕ್​ ಅಗರ್ವಾಲ್​, ಕೆ ಗೌತಮ್​ ತಲಾ 1 ಕೋಟಿ ರೂ., ಮನೀಷ್​ ಪಾಂಡೆ 75 ಲಕ್ಷ  ರೂ. ಮೂಲಬೆಲೆ ಹೊಂದಿದ್ದಾರೆ. ಕರುಣ್​ ನಾಯರ್​, ಕೆಸಿ ಕಾರಿಯಪ್ಪ, ಜೆ. ಸುಚಿತ್​, ಅಭಿನವ್​ ಮನೋಹರ್​, ವೈಶಾಕ್​ ವಿಜಯ್​ಕುಮಾರ್​, ಶ್ರೇಯಸ್​ ಗೋಪಾಲ್​, ವಿದ್ವತ್​ ಕಾವೇರಪ್ಪ, ಬಿಆರ್​ ಶರತ್​, ಲವನೀತ್​ ಸಿಸೋಡಿಯಾ, ವಿದ್ಯಾಧರ್​ ಪಾಟೀಲ್​, ಆರ್​. ಸ್ಮರಣ್​, ಚೇತನ್​ ಎಲ್​ಆರ್​, ಪ್ರವಿಣ್​ ದುಬೆ, ಮನೋಜ್​ ಭಾಂಡಗೆ, ಅಭಿಲಾಷ್​ ಶೆಟ್ಟಿ, ಕೆಎಲ್​ ಶ್ರೀಜಿತ್​, ಮನ್ವಂತ್​ ಕುಮಾರ್​ ಎಲ್​, ದೀಪಕ್​ ದೇವಾಡಿಗ, ಹಾರ್ದಿಕ್​ ರಾಜ್​, ಶುಭಾಂಗ್​ ಹೆಗ್ಡೆ, ಸಮರ್ಥ್​ ನಾಗರಾಜ್​ ತಲಾ 30 ಲಕ್ಷ ರೂ. ಮೂಲಬೆಲೆ ಹೊಂದಿದ್ದಾರೆ.

ಏನಿದು ರೈಟ್​ ಟು ಮ್ಯಾಚ್​?

ತಂಡವೊಂದು ಹಿಂದಿನ ಆವೃತ್ತಿಯಲ್ಲಿ ತನ್ನ ಪರ ಆಡಿದ ಆಟಗಾರನನ್ನು ತನ್ನಲ್ಲೇ ಉಳಿಸಿಕೊಳ್ಳಲು ರೈಟ್​ ಟು ಮ್ಯಾಚ್​ (ಆರ್​ಟಿಎಂ) ಕಾರ್ಡ್​ ಬಳಸಿಕೊಳ್ಳಬಹುದು. 2014 ಮತ್ತು 2018ರ ಮೆಗಾ ಹರಾಜಿನ ನಂತರ ಈ ಕಾರ್ಡ್​ ಮತ್ತೆ ಬಂದಿದೆ. ಆದರೆ ಈ ಬಾರಿ ಇದಕ್ಕೆ ಸ್ವಲ್ಪ ಟ್ವಿಸ್ಟ್​ ನೀಡಲಾಗಿದೆ. ಆಟಗಾರನೊಬ್ಬ ಬೇರೆ ತಂಡಕ್ಕೆ ಗರಿಷ್ಠ ಬಿಡ್​ ಪಡೆದ ಬಳಿಕ ಅದೇ ಮೊತ್ತಕ್ಕೆ ಆತನ ಮೂಲ ತಂಡ ಆತನನ್ನು ಉಳಿಸಿಕೊಳ್ಳಲು ಈ ಹಿಂದಿನ ಆರ್​ಟಿಎಂನಲ್ಲಿ ಅವಕಾಶವಿತ್ತು. ಆದರೆ ಈ ಬಾರಿ ಗರಿಷ್ಠ ಬಿಡ್​ ಬಳಿಕ ಮೂಲ ತಂಡ ಆರ್​ಟಿಎಂ ಮೂಲಕ ಆತನನ್ನು ಉಳಿಸಿಕೊಳ್ಳಲು ಮುಂದಾದಾಗ, ಆತನಿಗೆ ಗರಿಷ್ಠ ಬಿಡ್​ ಮಾಡಿದ್ದ ತಂಡಕ್ಕೆ ಬಿಡ್​ ಮೊತ್ತವನ್ನು ತನಗೆ ಬೇಕೆನಿಸಿದಷ್ಟು ಏರಿಸಲು ಅವಕಾಶ ನೀಡಲಾಗುತ್ತದೆ. ಆಗಲೂ ಆ ಏರಿಕೆ ಮೊತ್ತಕ್ಕೆ ಮೂಲ ತಂಡ ಆತನನ್ನು ಖರೀದಿಸಲು ಮುಂದಾದರೆ ಮಾತ್ರ ಆತನನ್ನು ಉಳಿಸಿಕೊಳ್ಳಬಹುದಾಗಿರುತ್ತದೆ. ಗರಿಷ್ಠ 6 ಆಟಗಾರರನ್ನು ರಿಟೇನ್​ ಮಾಡಿಕೊಂಡಿರುವ ರಾಜಸ್ಥಾನ, ಕೆಕೆಆರ್​ ಬಳಿ ಈ ಬಾರಿ ಆರ್​ಟಿಎಂ ಇರುವುದಿಲ್ಲ.

25 ಕೋಟಿ ರೂ. ದಾಖಲೆ ನಿರೀಕ್ಷೆ

ಕಳೆದ ಮಿನಿ ಹರಾಜಿನಲ್ಲಿ ಆಸೀಸ್​ನ ಪ್ಯಾಟ್​ ಕಮ್ಮಿನ್ಸ್​ (20.50 ಕೋಟಿ ರೂ.) ಮತ್ತು ಮಿಚೆಲ್​ ಸ್ಟಾರ್ಕ್​ 20 ಕೋಟಿ ರೂ.ಗೂ ಅಧಿಕ ಮೊತ್ತದ ಬಿಡ್​ ಪಡೆದಿದ್ದರು. ಈ ಪೈಕಿ ಮಿಚೆಲ್​ ಸ್ಟಾರ್ಕ್​ 24.75 ಕೋಟಿ ರೂ.ಗೆ ಮಾರಾಟವಾಗಿದ್ದು ದಾಖಲೆ ಎನಿಸಿದೆ. ಈ ಬಾರಿ ರಿಷಭ್​ ಪಂತ್​, ಕೆಎಲ್​ ರಾಹುಲ್​ರಂಥ ಆಟಗಾರರು ಅದಕ್ಕಿಂತಲೂ ಹೆಚ್ಚಿನ ಮೊತ್ತದ ಬಿಡ್​ ಪಡೆಯುವ ನಿರೀಕ್ಷೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net