ಐಪಿಎಲ್ ಮೆಗಾ ಹರಾಜಿಗೆ 1,574 ಆಟಗಾರರ ನೋಂದಣಿ: ಜೆಡ್ಡಾದಲ್ಲಿ ಬಿಡ್ಡಿಂಗ್ ವಾರ್!

New Project (1)
Published on

ಬೆಂಗಳೂರು: ಐಪಿಎಲ್ 18ನೇ ಆವೃತ್ತಿಯ ಮೆಗಾ ಹರಾಜಿಗೆ 1,165 ಭಾರತೀಯರು ಮತ್ತು 409 ವಿದೇಶೀಯರ ಸಹಿತ ಒಟ್ಟು 1,574 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಆಟಗಾರರ ಹೆಸರು ನೋಂದಣಿಗೆ ಸೋಮವಾರ ಅಂತಿಮ ದಿನವಾಗಿತ್ತು. ನವೆಂಬರ್ 24 ಮತ್ತು 25ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಎಲ್ಲ 10 ಫ್ರಾಂಚೈಸಿಗಳು ಗರಿಷ್ಠ 25 ಆಟಗಾರರನ್ನು ಹೊಂದಬಹುದಾಗಿದ್ದು, ಹರಾಜಿನಲ್ಲಿ 70 ವಿದೇಶೀಯರ ಸಹಿತ ಗರಿಷ್ಠ 204 ಆಟಗಾರರು ಬಿಕರಿಯಾಗಲಿದ್ದಾರೆ.

ಹರಾಜಿನಲ್ಲಿ 48 ಭಾರತೀಯರ ಸಹಿತ ಒಟ್ಟು 320 ಅಂತಾರಾಷ್ಟ್ರೀಯ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ. 965 ಭಾರತೀಯರ ಸಹಿತ 1,224 ದೇಶೀಯ (ಅನ್‌ಕ್ಯಾಪ್ಡ್) ಆಟಗಾರರು ಮತ್ತು ಅಸೋಸಿಯೇಟ್ಸ್ ರಾಷ್ಟ್ರಗಳ 30 ಆಟಗಾರರು ಇದ್ದಾರೆ.

ಭಾರತ ಹೊರತಾಗಿ ದಕ್ಷಿಣ ಆಫ್ರಿಕಾದಿಂದ ಗರಿಷ್ಠ 91 ಆಟಗಾರರು ಹರಾಜಿಗೆ ಹೆಸರು ನೋಂದಾಯಿಸಿದ್ದಾರೆ. ನಂತರ ಕ್ರಮವಾಗಿ ಆಸ್ಟ್ರೇಲಿಯಾ (76), ಇಂಗ್ಲೆಂಡ್ (52), ನ್ಯೂಜಿಲೆಂಡ್ (39), ವೆಸ್ಟ್ ಇಂಡೀಸ್ (33), ಶ್ರೀಲಂಕಾ (29),ಅ್ಘಾನಿಸ್ತಾನ (29), ಬಾಂಗ್ಲಾದೇಶ (13), ಅಮೆರಿಕ (10), ಐರ್ಲೆಂಡ್ (9), ಜಿಂಬಾಬ್ವೆ (8), ಕೆನಡಾ (4), ಸ್ಕಾಟ್ಲೆಂಡ್ (2) ಹಾಗೂ ಇಟಲಿ, ಯುಎಇಯ ತಲಾ ಒಬ್ಬರು ಹರಾಜಿಗೆ ಹೆಸರು ನೀಡಿದ್ದಾರೆ.

ಸದ್ಯ 10 ತಂಡಗಳು ಒಟ್ಟಾರೆ 46 ಆಟಗಾರರನ್ನು ರಿಟೇನ್ ಮಾಡಿಕೊಂಡಿದ್ದು, ಇದಕ್ಕಾಗಿ ₹558.5 ಕೋಟಿ ವಿನಿಯೋಗಿಸಿವೆ. 10 ್ರಾಂಚೈಸಿಗಳು ಹರಾಜಿನಲ್ಲಿ ಆಟಗಾರರ ಖರೀದಿಗೆ ಒಟ್ಟು ₹641.5 ಕೋಟಿ ಬಜೆಟ್ ಉಳಿಸಿಕೊಂಡಿವೆ. ಪ್ರತಿ ತಂಡದ ಬಜೆಟ್ ಮಿತಿ 120 ಕೋಟಿ ರೂ. ಆಗಿದೆ. ಪಂಜಾಬ್ ಕಿಂಗ್ಸ್ ತಂಡ ಗರಿಷ್ಠ ₹110.5 ಕೋಟಿಯೊಂದಿಗೆ ಹರಾಜಿನಲ್ಲಿ ಭಾಗವಹಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net