ಬೆಂಗಳೂರಿನಲ್ಲಿ ಐಪಿಎಲ್ ಆಟಗಾರರ ಹರಾಜು, ಇದುವೇ ಕೊನೇ ಮೆಗಾ ಶೋ?

ipl auctionweb
Published on

ನವದೆಹಲಿ: ಐಪಿಎಲ್ 15ನೇ ಆವೃತ್ತಿಗೆ ಮುನ್ನ ಆಟಗಾರರ ಮೆಗಾ ಹರಾಜು ಪ್ರಕ್ರಿಯೆಯನ್ನು ಫೆಬ್ರವರಿ 12 ಮತ್ತು 13ರಂದು ಬೆಂಗಳೂರಿನಲ್ಲಿ ನಡೆಸಲು ಯೋಜಿಸಲಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ಕೋವಿಡ್-19 ಪರಿಸ್ಥಿತಿ ಹದಗೆಡದಿದ್ದರೆ ಭಾರತದಲ್ಲೇ ಹರಾಜು ಪ್ರಕ್ರಿಯೆ ನಡೆಸಲು ಯೋಜಿಸಲಾಗಿದೆ. ಇದಕ್ಕೆ ಸಿದ್ಧತೆಗಳನ್ನೂ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಈ ಮುನ್ನ ಹರಾಜು ಪ್ರಕ್ರಿಯೆ ಯುಎಇಯಲ್ಲಿ ನಡೆಯಬಹುದು ಎಂದು ವರದಿಯಾಗಿತ್ತು.

ದೇಶದಲ್ಲಿ ಈಗ ಕರೊನಾ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ. ಅಲ್ಲದೆ ಪ್ರಯಾಣ ಸೇರಿದಂತೆ ಲಾಜಿಸ್ಟಿಕ್ಸ್ ಸಮಸ್ಯೆ ಎದುರಾಗುವುದರಿಂದ ವಿದೇಶದಲ್ಲಿ ಹರಾಜು ನಡೆಸುವ ಚಿಂತನೆ ಇಲ್ಲ ಎಂದು ಬಿಸಿಸಿಐ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಲಖನೌ ಮತ್ತು ಅಹಮದಾಬಾದ್ ಸೇರ್ಪಡೆಯೊಂದಿಗೆ ಈ ಬಾರಿ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 10 ತಂಡಗಳು ಭಾಗವಹಿಸಲಿವೆ. ಹಿಂದಿನ 8 ತಂಡಗಳು ಗರಿಷ್ಠ 4 ಆಟಗಾರರನ್ನು ಉಳಿಸಿಕೊಂಡಿದ್ದರೆ, 2 ಹೊಸ ತಂಡಗಳಿಗೆ ಹರಾಜಿಗೆ ಮುನ್ನವೇ ಗರಿಷ್ಠ 3 ಆಟಗಾರರೊಂದಿಗೆ ಒಪ್ಪಂದ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಬೆಟ್ಟಿಂಗ್ ಕಂಪನಿ ಜತೆಗಿನ ಸಂಪರ್ಕದ ಆರೋಪದಿಂದಾಗಿ ಸಿವಿಸಿ ಕ್ಯಾಪಿಟಲ್ಸ್ ಸಂಸ್ಥೆ ಪಾಲಾಗಿರುವ ಅಹಮದಾಬಾದ್ ತಂಡದ ಭವಿಷ್ಯ ಸದ್ಯ ಅನಿಶ್ಚಿತವೆನಿಸಿದ್ದರೂ, ಮುಂದಿನ ಕೆಲ ವಾರಗಳಲ್ಲಿ ಅದಕ್ಕೆ ಹಸಿರು ನಿಶಾನೆ ಸಿಗುವ ನಿರೀಕ್ಷೆ ಇದೆ.

ಇದೇ ಕೊನೇ ಮೆಗಾ ಹರಾಜು?

ಐಪಿಎಲ್‌ನಲ್ಲಿ ಇದುವೇ ಕೊನೇ ಮೆಗಾ ಹರಾಜು ಪ್ರಕ್ರಿಯೆ ಆಗುವ ಸಾಧ್ಯತೆಗಳಿವೆ. ಯಾಕೆಂದರೆ, ಹೆಚ್ಚಿನ ಐಪಿಎಲ್ ತಂಡಗಳು ತಮ್ಮ ಪ್ರಮುಖ ಆಟಗಾರರನ್ನು ಪ್ರತಿ 3 ವರ್ಷಕ್ಕೊಮ್ಮೆ ಹರಾಜಿಗೆ ಬಿಟ್ಟುಕೊಡುವ ಪದ್ಧತಿಯ ಬಗ್ಗೆ ಅಸಮಾಧಾನ ಹೊಂದಿವೆ. ಮೆಗಾ ಹರಾಜಿಗೆ ಬಹುತೇಕ ಆಟಗಾರರನ್ನು ಬಿಟ್ಟುಕೊಡುವುದರಿಂದ ತಂಡದ ಸಮತೋಲನ ಮತ್ತು ಯೋಜನೆಗಳಿಗೆ ಭಾರಿ ಹೊಡೆತಗಳು ಬೀಳುತ್ತವೆ. ‘ನಾವು ಸಾಕಷ್ಟು ಕಷ್ಟಪಟ್ಟು ತಂಡಗಳನ್ನು ಕಟ್ಟಿರುತ್ತೇವೆ. ಯುವ ಆಟಗಾರರಿಗೆ ಅವಕಾಶಗಳನ್ನು ಕಲ್ಪಿಸಿರುತ್ತೇವೆ. ಇದರಿಂದ ಅವರಿಗೆ ದೇಶದ ಪರ ಆಡುವ ಅವಕಾಶಗಳೂ ಲಭಿಸುತ್ತವೆ. ಆದರೆ 3 ವರ್ಷಗಳ ಬಳಿಕ ಅವರನ್ನು ಬಿಟ್ಟುಕೊಡಬೇಕಾಗುತ್ತದೆ’ ಎಂದು ಡೆಲ್ಲಿ ತಂಡದ ಸಹ-ಮಾಲೀಕ ಪಾರ್ಥ ಜಿಂದಾಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net