ಐಪಿಎಲ್ ಪಂದ್ಯಗಳನ್ನು ಯಾವೆಲ್ಲ ಚಾನಲ್‌ಗಳಲ್ಲಿ ನೋಡಬಹುದು ಗೊತ್ತೇ?

ipl 2020 star sports1
Published on

ನವದೆಹಲಿ: ಐಪಿಎಲ್ ಟೂರ್ನಿಯ ನೇರಪ್ರಸಾರ ಹಕ್ಕನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಪಡೆದುಕೊಂಡಿರುವುದು ಈಗಾಗಲೆ ಎಲ್ಲ ಕ್ರಿಕೆಟ್ ಪ್ರೇಮಿಗಳಿಗೆ ಗೊತ್ತಿರುವ ವಿಷಯವೇ ಆಗಿದೆ. 5 ವರ್ಷಗಳಿಗೆ ಬರೋಬ್ಬರಿ 16,347.5 ಕೋಟಿ ರೂಪಾಯಿಗಳಿಗೆ ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಐಪಿಎಲ್ ಪಂದ್ಯಗಳ ನೇರಪ್ರಸಾರ ಹಕ್ಕು ಪಡೆದುಕೊಂಡಿದೆ. ಇದೀಗ ಈ ಒಪ್ಪಂದದ ಮೊತ್ತವನ್ನು ಆದಾಯದ ರೂಪದಲ್ಲಿ ಮರಳಿ ಪಡೆದುಕೊಳ್ಳಲು ಸ್ಟಾರ್ ಸ್ಪೋರ್ಟ್ಸ್ ವಾಹಿನಿ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಐಪಿಎಲ್ ಪಂದ್ಯಗಳನ್ನು ತನ್ನ ನೆಟ್‌ವರ್ಕ್‌ನ ಹಲವು ಚಾನಲ್‌ಗಳಲ್ಲಿ ನೇರಪ್ರಸಾರ ಮಾಡಲಿದೆ. ಭಾರತದಲ್ಲಿ ಯಾವೆಲ್ಲ ಚಾನಲ್‌ಗಳಲ್ಲಿ ಐಪಿಎಲ್ ಪಂದ್ಯಗಳನ್ನು ವೀಕ್ಷಿಸಬಹುದು ಮತ್ತು ಯಾವೆಲ್ಲ ಭಾಷೆಗಳಲ್ಲಿ ಪಂದ್ಯಗಳ ವೀಕ್ಷಕವಿವರಣೆಯನ್ನು ಆಲಿಸಬಹುದು ಎಂಬುದರ ವಿವರ ಇಲ್ಲಿದೆ...

ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಸಹಿತ ಒಟ್ಟು 8 ಭಾಷೆಗಳಲ್ಲಿ ಐಪಿಎಲ್ ಪಂದ್ಯಗಳ ವೀಕ್ಷಕವಿವರಣೆಯನ್ನು ನೀಡಲು ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಸಿದ್ಧತೆಗಳನ್ನು ನಡೆಸಿಕೊಂಡಿದೆ. ಅಲ್ಲದೆ ತನ್ನ ನೆಟ್‌ವರ್ಕ್‌ನ ಹಲವು ರಾಷ್ಟ್ರೀಯ ಮತ್ತು ಪ್ರಾದೇಶಿಕ ಚಾನಲ್‌ಗಳಲ್ಲೂ ಪಂದ್ಯಗಳನ್ನು ನೇರಪ್ರಸಾರ ಮಾಡಲಿದೆ.

ಪ್ರಮುಖವಾಗಿ ಕನ್ನಡದಲ್ಲಿ ವೀಕ್ಷಕವಿವರಣೆಗಳನ್ನು ನೀಡಲು ಸ್ಟಾರ್ ಸ್ಪೋರ್ಟ್ಸ್ ಸಂಸ್ಥೆ ಈಗಾಗಲೆ ‘ಸ್ಟಾರ್ ಸ್ಪೋರ್ಟ್ಸ್ ಕನ್ನಡ’ ಎಂಬ ಚಾನಲ್ ಆರಂಭಿಸಿದೆ. ಇದರೊಂದಿಗೆ ‘ಸ್ಟಾರ್ ಸುವರ್ಣ’ದ ಎಸ್‌ಡಿ ಮತ್ತು ಎಚ್‌ಡಿ ಚಾನಲ್‌ಗಳಲ್ಲೂ ಪ್ರತಿ ಭಾನುವಾರದ ಐಪಿಎಲ್ ಪಂದ್ಯಗಳ ನೇರಪ್ರಸಾರವನ್ನು ವೀಕ್ಷಿಸಬಹುದಲ್ಲದೆ, ಕನ್ನಡದಲ್ಲಿ ಕಾಮೆಂಟರಿಯನ್ನೂ ಕೇಳಬಹುದಾಗಿದೆ.

ಐಪಿಎಲ್ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಯಾವೆಲ್ಲ ಚಾನಲ್‌ಗಳಲ್ಲಿ ನೇರಪ್ರಸಾರ ಕಾಣಲಿವೆ ಮತ್ತು ಯಾವೆಲ್ಲ ಭಾಷೆಗಳಲ್ಲಿ ವೀಕ್ಷಕವಿವರಣೆಗಳು ಇರಲಿವೆ ಎಂಬುದರ ಸಂಕ್ಷಿಪ್ತ ವಿವರ ಇಲ್ಲಿದೆ:

ಹಿಂದಿ: ಸ್ಟಾರ್ ಸ್ಪೋರ್ಟ್ಸ್ ಹಿಂದಿ (ಎಚ್‌ಡಿ, ಎಸ್‌ಡಿ), ಸ್ಟಾರ್ ಸ್ಪೋರ್ಟ್ಸ್ ಫಸ್ಟ್​​.

ಇಂಗ್ಲಿಷ್: ಸ್ಟಾರ್ ಸ್ಪೋರ್ಟ್ಸ್ 1 (ಎಸ್‌ಡಿ, ಎಚ್‌ಡಿ), ಸ್ಟಾರ್ ಸ್ಪೋರ್ಟ್ಸ್ ಸೆಲೆಕ್ಟ್ (ಎಸ್‌ಡಿ, ಎಚ್‌ಡಿ).

ಕನ್ನಡ: ಸ್ಟಾರ್ ಸ್ಪೋರ್ಟ್ಸ್ ಕನ್ನಡ (ಪ್ರತಿದಿನ), ಸ್ಟಾರ್ ಸುವರ್ಣ-ಎಸ್‌ಡಿ, ಎಚ್‌ಡಿ (ಪ್ರತಿ ಭಾನುವಾರ).

ತಮಿಳು: ಸ್ಟಾರ್ ಸ್ಪೋರ್ಟ್ಸ್ ತಮಿಳ್ (ಪ್ರತಿದಿನ), ವಿಜಯ್ ಸೂಪರ್-ಎಸ್‌ಡಿ (ಪ್ರತಿ ಭಾನುವಾರ).

ತೆಲುಗು: ಸ್ಟಾರ್ ಸ್ಪೋರ್ಟ್ಸ್ ತೆಲುಗು (ಪ್ರತಿದಿನ), ಮಾ ಮೂವಿಸ್-ಎಸ್‌ಡಿ, ಎಚ್‌ಡಿ (ಪ್ರತಿ ಭಾನುವಾರ).

ಬೆಂಗಾಲಿ: ಸ್ಟಾರ್ ಸ್ಪೋರ್ಟ್ಸ್ ಬಾಂಗ್ಲಾ (ಪ್ರತಿದಿನ), ಜಲ್ಶಾ ಮೂವೀಸ್-ಎಸ್‌ಡಿ, ಎಚ್‌ಡಿ (ಪ್ರತಿ ಭಾನುವಾರ).

ಮರಾಠಿ: ಸ್ಟಾರ್ ಪ್ರವಾಹ್-ಎಸ್‌ಡಿ, ಎಚ್‌ಡಿ (ಪ್ರತಿ ಭಾನುವಾರ).

ಮಲಯಾಳಂ: ಏಷ್ಯಾನೆಟ್ ಪ್ಲಸ್-ಎಸ್‌ಡಿ (ಪ್ರತಿ ಭಾನುವಾರ).

ಲೈವ್ ಸ್ಟ್ರೀಮಿಂಗ್: ಡಿಸ್ನಿ+ ಹಾಟ್‌ಸ್ಟಾರ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net