

ಬೆಂಗಳೂರು: ಉದ್ಯಾನನಗರಿಯಲ್ಲಿ ನೀರಿನ ತಾಪತ್ರಯ ಹೆಚ್ಚಾಗಿರುವ ನಡುವೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಐಪಿಎಲ್ ಪಂದ್ಯಗಳಿಗೆ ಸಂಸ್ಕರಿಸಿದ ನೀರು ಬಳಸಿರುವ ಆರೋಪ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ವಿರುದ್ಧ ಕೇಳಿಬಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) ಸ್ವಯಂ ಪ್ರಕರಣದ ದಾಖಲಿಸಿಕೊಂಡಿದ್ದು, ಕೆಎಸ್ಸಿಎ ಜತೆಗೆ ಸಂಬಂಧಿಸಿದ ಇತರ ಎಲ್ಲರಿಗೂ ನೋಟಿಸ್ ಜಾರಿಗೊಳಿಸಿದೆ. ಕ್ರೀಡಾಂಗಣದಲ್ಲಿನ ನೀರಿನ ಬಳಕೆಯ ಪ್ರಸ್ತುತ ಸ್ಥಿತಿಯ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆಯೂ ತಾಕೀತು ಮಾಡಿದೆ.
ಐಪಿಎಲ್ ಪಂದ್ಯಗಳಿಗೆ ಬಳಸಲಾದ ನೀರಿನ ಮೂಲ, ಗುಣಮಟ್ಟ ಮತ್ತು ಪ್ರಮಾಣದ ಬಗ್ಗೆ ಸೂಕ್ತ ವಿವರವನ್ನು ಮೇ 2ರೊಳಗೆ ಒದಗಿಸುವಂತೆ ಕೆಎಸ್ಸಿಎ ಜತೆಗೆ ಬೆಂಗಳೂರು ಜಲಮಂಡಳಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಎನ್ಜಿಟಿ ಸೂಚಿಸಿದೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇದುವರೆಗೆ ಐಪಿಎಲ್ 17ನೇ ಆವೃತ್ತಿಯ 3 ಪಂದ್ಯಗಳು ನಡೆದಿದ್ದು, ಪ್ರತಿ ಪಂದ್ಯಕ್ಕೆ 75 ಸಾವಿರ ಲೀಟರ್ ಸಂಸ್ಕರಿಸಿದ ನೀರು ಬಳಕೆಯಾಗಿದೆ ಎಂದು ಅಂದಾಜಿಸಲಾಗಿದೆ. ಸ್ಟೇಡಿಯಂನಲ್ಲಿ ಆರ್ಸಿಬಿ ತಂಡದ ಇನ್ನೂ 4 ಲೀಗ್ ಪಂದ್ಯಗಳು ನಡೆಯಬೇಕಿದೆ. ಏಪ್ರಿಲ್ 15ರಂದು ಸನ್ರೈಸರ್ಸ್, ಮೇ 4ಕ್ಕೆ ಗುಜರಾತ್, ಮೇ 12ಕ್ಕೆ ಡೆಲ್ಲಿ ಮತ್ತು ಮೇ 18ಕ್ಕೆ ಸಿಎಸ್ಕೆ ವಿರುದ್ಧದ ಪಂದ್ಯಗಳು ನಿಗದಿಯಾಗಿವೆ.
ಕೆಎಸ್ಸಿಎ ಮನವಿಯ ಮೇರೆಗೆ ಬೆಂಗಳೂರು ಜಲಮಂಡಳಿ, ಕಬ್ಬನ್ ಪಾರ್ಕ್ ಸಮೀಪದಲ್ಲಿರುವ ಸ್ಟೇಡಿಯಂಗೆ ನೀರು ಪೂರೈಸಲು ಸಮ್ಮತಿಸಿದೆ ಎಂಬ ವರದಿಯನ್ನು ಆಧರಿಸಿ ಎನ್ಜಿಟಿ ಚೇರ್ಮನ್ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಮತ್ತು ತಜ್ಞ ಸದಸ್ಯ ಡಾ. ಎ ಸೆಂಥಿಲ್ ವೆಲ್ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದಾರೆ. ಆದರೆ ಕೆಎಸ್ಸಿಎ ಅಧಿಕಾರಿಗಳು, ಪಿಚ್ ಅಥವಾ ಮೈದಾನಕ್ಕೆ ನೀರುಣಿಸುವ ಉದ್ದೇಶಗಳಿಗಾಗಿ ಅಂತರ್ಜಲ ಅಥವಾ ಕುಡಿಯುವ ನೀರನ್ನು ಬಳಸಿಕೊಳ್ಳುತ್ತಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ಆರೋಪ ತಳ್ಳಿಹಾಕಿದ ಕೆಎಸ್ಸಿಎ
ಐಪಿಎಲ್ ಪಂದ್ಯಗಳಿಗೆ ಸಂಸ್ಕರಿಸಿದ ನೀರು ಬಳಸಿರುವ ಆರೋಪವನ್ನು ಕೆಎಸ್ಸಿಎ ತಳ್ಳಿಹಾಕಿದೆ. "ಪ್ರತಿ ಪಂದ್ಯ ನಡೆಸಲು ನಮಗೆ ಅಂದಾಜು 15 ಸಾವಿರ ಲೀಟರ್ ನೀರು ಬೇಕಾಗುತ್ತದೆ. ಆದರೆ ಅದಕ್ಕೆ ನಾವು ಸಂಸ್ಕರಿಸಿದ ನೀರು ಬಳಸುವುದಿಲ್ಲ. ನಮ್ಮದೇ ಒಳಚರಂಡಿ ಸಂಸ್ಕರಣಾ ಟಕದ (ಎಸ್ಟಿಪಿ) ನೀರನ್ನು ಬಳಸಿಕೊಳ್ಳುತ್ತೇವೆ. ಎನ್ಜಿಟಿ ನೋಟಿಸ್ ಅಧ್ಯಾಯನ ಮಾಡುತ್ತಿದ್ದೇವೆ. ನಮ್ಮ ಸ್ಟೇಡಿಯಂ ಎನ್ಜಿಟಿ ನಿಬಂಧನೆಗಳಿಗೆ ಒಳಪಟ್ಟಿದೆ. ಹೀಗಾಗಿ ನಾವು ಮುಂದೆಯೂ ಪಂದ್ಯ ಆಯೋಜನೆಗೆ ಅನುಮತಿ ಲಭಿಸುವ ವಿಶ್ವಾಸದಲ್ಲಿದ್ದೇವೆ' ಎಂದು ಕೆಎಸ್ಸಿಎ ಸಿಇಒ ಶುಬೇಂದು ಘೋಷ್ ತಿಳಿಸಿದ್ದಾರೆ.