

ದುಬೈ: ಟೂರ್ನಿ ಪೂರ್ವಭಾವಿ ಲೆಕ್ಕಾಚಾರದಲ್ಲಿ ಸಾಧಾರಣ ತಂಡದಂತೆ ಕಂಡಿದ್ದ ರಾಜಸ್ಥಾನ ರಾಯಲ್ಸ್ ತಂಡ ಸತತ 2 ಗೆಲುವಿನೊಂದಿಗೆ ಐಪಿಎಲ್ 13ನೇ ಆವೃತ್ತಿಯಲ್ಲಿ ಭರ್ಜರಿ ಆರಂಭ ಕಂಡಿದೆ. ಇದೀಗ ಹ್ಯಾಟ್ರಿಕ್ ಗೆಲುವಿನ ಹಂಬಲದಲ್ಲಿರುವ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಬುಧವಾರ ನಡೆಯಲಿರುವ ಪಂದ್ಯದಲ್ಲಿ ಕೋಲ್ಕತ ನೈಟ್‌ರೈಡರ್ಸ್ ತಂಡದ ಸವಾಲು ಎದುರಾಗಲಿದೆ.
ದಿನೇಶ್ ಕಾರ್ತಿಕ್ ಬಳಗ ಟೂರ್ನಿಯಲ್ಲಿ ಹೀನಾಯ ಸೋಲಿನ ಆರಂಭ ಕಂಡರೂ, ಸನ್‌ರೈಸರ್ಸ್ ವಿರುದ್ಧದ ಭರ್ಜರಿ ಗೆಲುವಿನೊಂದಿಗೆ ಲಯಕ್ಕೆ ಮರಳಿದೆ. ವಿದೇಶಿ ಮತ್ತು ದೇಶೀಯ ಸ್ಟಾರ್‌ಗಳ ಮಿಶ್ರಣದೊಂದಿಗೆ ಉಭಯ ತಂಡಗಳ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದ್ದು, ಮತ್ತೊಮ್ಮೆ ರನ್‌ಮಳೆ ಹರಿಯುವ ನಿರೀಕ್ಷೆ ಇಡಲಾಗಿದೆ.
ರಾಯಲ್ಸ್ ತಂಡ ಆಡಿದ ಎರಡೂ ಪಂದ್ಯಗಳಲ್ಲಿ 200 ಪ್ಲಸ್ ಮೊತ್ತ ಪೇರಿಸಿ ತನ್ನ ಬ್ಯಾಟಿಂಗ್ ಶಕ್ತಿಯನ್ನು ಪ್ರದರ್ಶಿಸಿದೆ. ಸಂಜು ಸ್ಯಾಮ್ಸನ್ ಮತ್ತು ರಾಹುಲ್ ತೆವಾಟಿಯಾ ಸಾಹಸದಿಂದ ರಾಯಲ್ಸ್ ತಂಡ ಕಳೆದ ಪಂದ್ಯದಲ್ಲಿ ದಾಖಲೆಯ ಚೇಸಿಂಗ್ ಕೂಡ ಮಾಡಿದೆ. ಸಿಎಸ್‌ಕೆ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದಾಗಲೂ ಸರಾಗವಾಗಿ ರನ್‌ಪ್ರವಾಹವನ್ನೇ ಹರಿಸಿತ್ತು. ಹೀಗಾಗಿ ದಿನೇಶ್ ಕಾರ್ತಿಕ್ ಟಾಸ್ ಗೆದ್ದರೆ ಖಂಡಿತವಾಗಿಯೂ ಇಕ್ಕಟ್ಟಿನಲ್ಲಿ ಸಿಲುಕಲಿದ್ದಾರೆ.
ಕೆಕೆಆರ್ ತಂಡ ಸನ್‌ರೈಸರ್ಸ್ ವಿರುದ್ಧ ಸಾಧಾರಣ ಮೊತ್ತವನ್ನು ಚೇಸಿಂಗ್ ಮಾಡಿ ಜಯಿಸಿತ್ತು. ಆದರೆ ತಂಡದ ಸ್ಟಾರ್ ಆಲ್ರೌಂಡರ್ ಆಂಡ್ರೆ ರಸೆಲ್ ಅವರಿಂದ ಟೂರ್ನಿಯಲ್ಲಿ ಇನ್ನೂ ನಿರೀಕ್ಷಿತ ಆಟ ಬಂದಿಲ್ಲ. ಯುವ ಆರಂಭಿಕ ಶುಭಮಾನ್ ಗಿಲ್ ಕಳೆದ ಪಂದ್ಯದಲ್ಲಿ ಅಜೇಯ ಅರ್ಧಶತಕ ಸಿಡಿಸಿ ಕೆಕೆಆರ್ ತಂಡಕ್ಕೆ ಮೊದಲ ಪಂದ್ಯದ ವೈಲ್ಯವನ್ನು ಮರೆಸಿದ್ದರು. ಕಳೆದ ಹರಾಜಿನಲ್ಲಿ ದುಬಾರಿ ಮೊತ್ತಕ್ಕೆ ಕೆಕೆಆರ್ ಪಾಲಾಗಿದ್ದ ಆಸೀಸ್ ವೇಗಿ ಪ್ಯಾಟ್ ಕಮ್ಮಿನ್ಸ್ ಕೂಡ ಮೊದಲ ಪಂದ್ಯದ ವೈಲ್ಯವನ್ನು 2ನೇ ಪಂದ್ಯದಲ್ಲಿ ನೀಗಿಸಿದ್ದರು.
ಟೂರ್ನಿಯಲ್ಲಿ ಇದುವರೆಗೆ 2 ಪಂದ್ಯಗಳು ಟೈ ಆಗಿದ್ದು, ಅವೆರಡೂ ಪಂದ್ಯಗಳು ದುಬೈನಲ್ಲೇ ನಡೆದಿವೆ. ಹೀಗಾಗಿ ಇಲ್ಲಿ ಯಾವ ಮೊತ್ತ ಸುರಕ್ಷಿತ ಎಂಬ ಲೆಕ್ಕಾಚಾರ ಕಷ್ಟ. ಆದರೆ ಇಲ್ಲಿ ನಡೆದ ಇದುವರೆಗಿನ ಐದೂ ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡವೇ ಜಯಿಸಿದೆ. ಉಭಯ ತಂಡಗಳೂ ದುಬೈನಲ್ಲಿ ಮೊದಲ ಪಂದ್ಯ ಆಡುತ್ತಿವೆ.
ಟೀಮ್ ನ್ಯೂಸ್:
ರಾಜಸ್ಥಾನ ರಾಯಲ್ಸ್: ಗೆಲುವಿನ ಕಾಂಬಿನೇಷನ್ ಬದಲಾಗುವ ಸಾಧ್ಯತೆ ಕಡಿಮೆ. ಹೀಗಾಗಿ ಕನ್ನಡಿಗ ರಾಬಿನ್ ಉತ್ತಪ್ಪ ಮೊದಲೆರಡು ಪಂದ್ಯಗಳಲ್ಲಿ ನಿರಾಸೆ ಮೂಡಿಸಿದರೂ ಸ್ಥಾನ ಉಳಿಸಿಕೊಳ್ಳಬಹುದು. ಕಳೆದ ಪಂದ್ಯದ ಹೀರೋ ರಾಹುಲ್ ತೆವಾಟಿಯಾ ತಂಡದ ಮಧ್ಯಮ ಕ್ರಮಾಂಕಕ್ಕೆ ಹೊಸ ಬಲ ತುಂಬಿದ್ದಾರೆ. ತಂಡಕ್ಕೆ ಮೊದಲೆರಡು ಪಂದ್ಯಗಳಲ್ಲಿ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಅನುಪಸ್ಥಿತಿ ಕಾಡಿಲ್ಲ.
ಸಂಭಾವ್ಯ ತಂಡ: ಜೋಸ್ ಬಟ್ಲರ್ (ವಿ.ಕೀ), ಸ್ಟೀವನ್ ಸ್ಮಿತ್, ಸಂಜು ಸ್ಯಾಮ್ಸನ್, ರಿಯಾನ್ ಪರಾಗ್, ರಾಹುಲ್ ತೆವಾಟಿಯಾ, ರಾಬಿನ್ ಉತ್ತಪ್ಪ, ಟಾಮ್ ಕರ‌್ರನ್, ಶ್ರೇಯಸ್ ಗೋಪಾಲ್, ಜ್ರೋಾ ಆರ್ಚರ್, ಜೈದೇವ್ ಉನಾದ್ಕತ್, ಅಂಕಿತ್ ರಜಪೂತ್.
ಕಳೆದ ಪಂದ್ಯ: ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 4 ವಿಕೆಟ್ ಜಯ.
ಕೋಲ್ಕತ ನೈಟ್‌ರೈಡರ್ಸ್: ಕಳೆದ ಪಂದ್ಯದಲ್ಲಿ ಸರ್ವಾಂಗೀಣ ನಿರ್ವಹಣೆ ತೋರಿದ್ದರೂ, ತಂಡದಲ್ಲಿ ಕೆಲ ಬದಲಾವಣೆಗೆ ಈಗಲೂ ಅವಕಾಶವಿದೆ. ಚೈನಾಮನ್ ಬೌಲರ್ ಕುಲದೀಪ್ ಯಾದವ್ ಅವರಿಂದ ನಿರೀಕ್ಷಿತ ನಿರ್ವಹಣೆ ಬರುತ್ತಿಲ್ಲ. ಮತ್ತೊಂದೆಡೆ ಸುನೀಲ್ ನಾರಾಯಣ್ ಈ ಬಾರಿ ಆರಂಭಿಕರಾಗಿ ತಂಡಕ್ಕೆ ಸ್ಫೋಟಕ ಬ್ಯಾಟಿಂಗ್ ಒದಗಿಸಿಲ್ಲ. ಹೀಗಾಗಿ ತಜ್ಞ ಬ್ಯಾಟ್ಸ್‌ಮನ್‌ಗೆ ಆರಂಭಿಕನ ಜವಾಬ್ದಾರಿ ಒಪ್ಪಿಸಬಹುದಾಗಿದೆ.
ಸಂಭಾವ್ಯ ತಂಡ: ಶುಭಮಾನ್ ಗಿಲ್, ಸುನೀಲ್ ನಾರಾಯಣ್, ನಿತೀಶ್ ರಾಣಾ, ದಿನೇಶ್ ಕಾರ್ತಿಕ್ (ವಿ.ಕೀ), ಇವೊಯಿನ್ ಮಾರ್ಗನ್, ಆಂಡ್ರೆ ರಸೆಲ್, ಕಮಲೇಶ್ ನಾಗರಕೋಟಿ, ಶಿವಂ ಮಾವಿ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ಪ್ಯಾಟ್ ಕಮ್ಮಿನ್ಸ್.
ಕಳೆದ ಪಂದ್ಯ: ಸನ್‌ರೈಸರ್ಸ್ ವಿರುದ್ಧ 7 ವಿಕೆಟ್ ಜಯ.
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್
*ಮುಖಾಮುಖಿ: 20
ಕೆಕೆಆರ್: 10
ರಾಜಸ್ಥಾನ: 10