

ಬೆಂಗಳೂರು: ಕರೊನಾ ಹಾವಳಿಯಿಂದಾಗಿ ಐಪಿಎಲ್ ಟೂರ್ನಿ ಈ ಬಾರಿ ಮತ್ತೆ ಯುಎಇಗೆ ಸ್ಥಳಾಂತರಗೊಂಡಿದೆ. ವಿದೇಶದಲ್ಲಿ ಪ್ರೇಕ್ಷಕರಿಲ್ಲದೆ ಖಾಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಟೂರ್ನಿ, ಯಾವ ತಂಡಕ್ಕೆ ಟ್ರೋಫಿ ಎತ್ತಲು ನೆರವಾಗಲಿದೆ ಎಂಬ ಲೆಕ್ಕಾಚಾರವೂ ಶುರುವಾಗಿದೆ. 2014ರ ಐಪಿಎಲ್‌ನಲ್ಲಿ ಮೊದಲ 20 ಪಂದ್ಯಗಳು ಅರಬ್ ರಾಷ್ಟ್ರದಲ್ಲೇ ನಡೆದಿದ್ದವು. ಅದರ ಆಧಾರದಲ್ಲಿ ಮತ್ತು ಹಾಲಿ ತಂಡಗಳ ಬಲಾಬಲದ ಲೆಕ್ಕಾಚಾರದಲ್ಲಿ ಈ ಬಾರಿ ಯಾವ ತಂಡಕ್ಕೆ ಅರಬ್ ರಾಷ್ಟ್ರ ವರದಾನವಾಗಬಹುದು ಎಂಬ ಸಂಕ್ಷಿಪ್ತ ವಿಶ್ಲೇಷಣೆ ಇಲ್ಲಿದೆ.
ಪಂಜಾಬ್ ಅಜೇಯ, ಮುಂಬೈಗೆ ಜಯವಿಲ್ಲ!
2014ರ ಐಪಿಎಲ್‌ನಲ್ಲಿ ಎಲ್ಲ ತಂಡಗಳು ತಲಾ 5 ಪಂದ್ಯಗಳನ್ನು ಯುಎಇಯಲ್ಲಿ ಆಡಿದ್ದವು. ಈ ಪೈಕಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಎಲ್ಲ 5 ಪಂದ್ಯಗಳನ್ನು ಗೆದ್ದು ಅಜೇಯವಾಗಿದ್ದರೆ, ಮುಂಬೈ ಇಂಡಿಯನ್ಸ್ ತಂಡ ಆಡಿದ ಎಲ್ಲ 5 ಪಂದ್ಯಗಳಲ್ಲೂ ಸೋಲು ಕಂಡಿತ್ತು (ಬಳಿಕ ಭಾರತದಲ್ಲಿ ಆಡಿದ 9 ಪಂದ್ಯಗಳಲ್ಲಿ 7ರಲ್ಲಿ ಗೆದ್ದು ಮುಂಬೈ ಪ್ಲೇಆ್ಗೇರಿತ್ತು ಎಂಬುದು ವಿಶೇಷ). ಮುಂಬೈ ಇಂಡಿಯನ್ಸ್ ತಂಡ ಐಪಿಎಲ್‌ನಲ್ಲಿ ಗರಿಷ್ಠ 4 ಬಾರಿ ಪ್ರಶಸ್ತಿ ಜಯಿಸಿದ ದಾಖಲೆ ಹೊಂದಿದ್ದರೆ, ಕಿಂಗ್ಸ್ ಇಲೆವೆನ್ ಪಂಜಾಬ್ ಇವರೆಗೆ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. ಹೀಗಾಗಿ ಅರಬ್ ದೇಶದಲ್ಲಿ ಆಡಲಿರುವುದು ಐಪಿಎಲ್‌ನಲ್ಲಿ ಹೊಸ ಬಗೆಯ ಬೆಳವಣಿಗೆಗಳಿಗೆ ಸಾಕ್ಷಿಯಾಗಬಹುದು.
ಸಿಎಸ್‌ಕೆಗೆ ಯಶ, ಆರ್‌ಸಿಬಿಗೆ ಮಿಶ್ರಲ
ಚೆನ್ನೈ ಸೂಪರ್‌ಕಿಂಗ್ಸ್ ತಂಡ 2014ರಲ್ಲಿ ಯುಎಇಯಲ್ಲಿ ಆಡಿದ 5 ಪಂದ್ಯಗಳಲ್ಲಿ 4ರಲ್ಲಿ ಜಯಿಸಿ, ಒಂದರಷ್ಟೇ ಸೋತು ಉತ್ತಮ ಯಶಸ್ಸನ್ನೇ ಕಂಡಿತ್ತು. ಆರ್‌ಸಿಬಿ ತಂಡ 5 ಪಂದ್ಯಗಳಲ್ಲಿ 2ರಲ್ಲಿ ಗೆದ್ದು, 3ರಲ್ಲಿ ಸೋಲು ಕಂಡಿತ್ತು. ರಾಜಸ್ಥಾನ ರಾಯಲ್ಸ್ ಮತ್ತು ಕೆಕೆಆರ್ ತಂಡಗಳು ತಲಾ 2ರಲ್ಲಿ ಗೆಲುವು, ಸೋಲು ಕಂಡಿದ್ದವು. ಟೈ ಆಗಿದ್ದ ಉಭಯ ತಂಡಗಳ ಮುಖಾಮುಖಿಯಲ್ಲಿ ಸೂಪರ್ ಓವರ್ ಕೂಡ ಟೈ ಆಗಿತ್ತು. ಕೊನೆಗೆ ರಾಜಸ್ಥಾನ ತಂಡ ಬೌಂಡರಿ ಕೌಂಟ್‌ನಲ್ಲಿ ಜಯಿಸಿತ್ತು. ಸನ್‌ರೈಸರ್ಸ್ ಮತ್ತು ಡೆಲ್ಲಿ ತಂಡಗಳು ತಲಾ 2ರಲ್ಲಿ ಜಯಿಸಿ, 3ರಲ್ಲಿ ಸೋತಿದ್ದವು.
ಮ್ಯಾಕ್ಸ್‌ವೆಲ್ ಆರ್ಭಟಿಸಿದ್ದರು
ಯುಎಇ ಚರಣದ ಐಪಿಎಲ್‌ನಲ್ಲಿ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಅಪಾಯಕಾರಿ ಬ್ಯಾಟ್ಸ್‌ಮನ್ ಎನಿಸಿದ್ದರು. ಅಬುಧಾಬಿಯಲ್ಲಿ ನಡೆದ ಸನ್‌ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಅವರು 43 ಎಸೆತಗಳಲ್ಲಿ 95 ರನ್ ಸಿಡಿಸಿದ್ದರು. ಕಿಂಗ್ಸ್ ಇಲೆವೆನ್ ಆಟಗಾರರಾಗಿದ್ದ ಮ್ಯಾಕ್ಸ್‌ವೆಲ್, ಬಳಿಕ ಚೆನ್ನೈ ಸೂಪರ್‌ಕಿಂಗ್ಸ್ ವಿರುದ್ಧ 43 ಎಸೆತಗಳಲ್ಲಿ 95 ರನ್ ಸಿಡಿಸಿ 206 ರನ್ ಸವಾಲು ಬೆನ್ನಟ್ಟಲು ನೆರವಾಗಿದ್ದರು. ಆಡಿದ ಮೊದಲ 3 ಪಂದ್ಯಗಳಲ್ಲಿ ಕ್ರಮವಾಗಿ 95, 89, 95 ರನ್ ಸಿಡಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಗ್ಲೆನ್ ಮ್ಯಾಕ್ಸ್‌ವೆಲ್ ಈ ಬಾರಿಯೂ ಕನ್ನಡಿಗ ಕೆಎಲ್ ರಾಹುಲ್ ಸಾರಥ್ಯ ಮತ್ತು ಅನಿಲ್ ಕುಂಬ್ಳೆ ತರಬೇತಿಯ ಪಂಜಾಬ್ ತಂಡದಲ್ಲೇ ಇದ್ದಾರೆ.
ವೇಗ-ಸ್ಪಿನ್‌ಗೆ ಸಹಕಾರಿ
2014ರ ಅಂಕಿ-ಅಂಶ ಗಮನಿಸಿದರೆ ಯುಎಇ ಪಿಚ್‌ಗಳು ವೇಗ ಮತ್ತು ಸ್ಪಿನ್ ಬೌಲಿಂಗ್ ಸಮಾನ ರೀತಿಯಲ್ಲಿ ನೆರವಾಗಿವೆ. ಆದರೆ ಶಾರ್ಜಾದಲ್ಲಿ ಹೆಚ್ಚಿನ ರನ್‌ಪ್ರವಾಹ ಹರಿದಿದ್ದರೆ, ದುಬೈನಲ್ಲಿ ಸಾಧಾರಣ ಮೊತ್ತಗಳು ದಾಖಲಾಗಿದ್ದವು. ಅಬುಧಾಬಿಯಲ್ಲಿ ಆರ್‌ಸಿಬಿ ತಂಡದಿಂದ ಕನಿಷ್ಠ 70 ರನ್ ಮತ್ತು ಪಂಜಾಬ್ ತಂಡದಿಂದ ಗರಿಷ್ಠ 206 ರನ್ ದಾಖಲಾಗಿತ್ತು. ಆದರೆ ಆಕಾಶ್ ಚೋಪ್ರಾ ಪ್ರಕಾರ ಈ ಬಾರಿ ಸ್ಪಿನ್ನರ್‌ಗಳಿಗೆ ಪಿಚ್ ಸಹಕಾರಿಯಾಗಲಿದ್ದು, ಉತ್ತಮ ಸ್ಪಿನ್ನರ್‌ಗಳನ್ನು ಹೊಂದಿರುವ ಚೆನ್ನೈ ಸೂಪರ್‌ಕಿಂಗ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್‌ನಂಥ ತಂಡಗಳಿಗೆ ಲಾಭವಾಗಲಿದೆ.
ಈ ಸಲ ಆರ್‌ಸಿಬಿಗೆ ಕಪ್?
ಐಪಿಎಲ್ 13ನೇ ಆವೃತ್ತಿ ಯುಎಇಯಲ್ಲಿ ನಡೆಯಲಿರುವುದು ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಲಾಭದಾಯಕ ಎಂದು ಭಾರತದ ಮಾಜಿ ಕ್ರಿಕೆಟಿಗ, ವೀಕ್ಷಕವಿವರಣೆಕಾರ ಆಕಾಶ್ ಚೋಪ್ರಾ ಮತ್ತು ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನಕ್ಕಿಂತ ಯುಎಇಯ ಮೈದಾನಗಳು ದೊಡ್ಡದಾಗಿವೆ. ಮೈದಾನ ದೊಡ್ಡದಿದ್ದಾಗ ಬೌಲರ್‌ಗಳು ಹೆಚ್ಚು ಧೈರ್ಯದಿಂದ ಬೌಲಿಂಗ್ ಮಾಡಬಹುದು. ಇದು ಆರ್‌ಸಿಬಿ ತಂಡದ ಬಲ ಹೆಚ್ಚಿಸಲಿದೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ. ‘ಆರ್‌ಸಿಬಿ ತಂಡಕ್ಕೆ ಈ ಬಾರಿ ಉತ್ತಮ ಅವಕಾಶವಿದೆ. ಕಾಗದದ ಮೇಲೆ ಆರ್‌ಸಿಬಿ ತಂಡ ಯಾವಾಗಲೂ ಉತ್ತಮವಾಗಿ ಕಾಣಿಸುತ್ತದೆ. ಆದರೆ ಅದಕ್ಕೆ ಯಾವಾಗಲೂ ಮೈದಾನದ ಮೇಲೆ ನಿರೀಕ್ಷಿತ ನಿರ್ವಹಣೆ ತೋರಲು ಸಾಧ್ಯವಾಗಿಲ್ಲ. ಈಗ ಅಗ್ರ ಸರದಿಯಲ್ಲಿ ಆರನ್ ಫಿಂಚ್ ಇದ್ದು, ಪವರ್‌ಪ್ಲೇಯಲ್ಲಿ ಪ್ರಾಬಲ್ಯ ಸಾಧಿಸಲು ಸಾಧ್ಯವಾಗಲಿದೆ. ಬಳಿಕ ಮಧ್ಯಮ ಕ್ರಮಾಂಕದಲ್ಲಿ ಎಬಿ ಡಿವಿಲಿಯರ್ಸ್ ಮತ್ತು ವಿರಾಟ್ ಕೊಹ್ಲಿ ಇನ್ನಷ್ಟು ರನ್ ಸೇರಿಸಿಕೊಡಬಹುದು. ಬೌಲಿಂಗ್ ವಿಭಾಗದಲ್ಲೂ ಡೇಲ್ ಸ್ಟೈನ್ ಮತ್ತು ಕೇನ್ ರಿಚರ್ಡ್‌ಸನ್ ಇದ್ದು, ತಂಡ ಕಳೆದ ಕೆಲ ವರ್ಷಗಳಿಗಿಂತ ಉತ್ತಮ ಸಮತೋಲನ ಹೊಂದಿದೆ. ಟೂರ್ನಿಗೆ ಉತ್ತಮ ಕಾರ್ಯತಂತ್ರ ರೂಪಿಸಿಕೊಳ್ಳುವುದು ಮುಖ್ಯವಾಗುತ್ತದೆ’ ಎಂದು ಬ್ರಾಡ್ ಹಾಗ್ ವಿವರಿಸಿದ್ದಾರೆ.