

ನವದೆಹಲಿ: ಕರೊನಾ ಕಳವಳ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾರಣ ಏಪ್ರಿಲ್-ಮೇನಲ್ಲಿ ಐಪಿಎಲ್ 13ನೇ ಆವೃತ್ತಿಯನ್ನು ಸಂಘಟಿಸುವುದು ಬಿಸಿಸಿಐಗೆ ಬಹುತೇಕ ಅಸಾಧ್ಯ ಸವಾಲೆನಿಸಿದೆ. ಹೀಗಾಗಿ ಬಿಸಿಸಿಐ ‘ಪ್ಲಾ್ಯನ್ ಬಿ’ ಸಿದ್ಧಪಡಿಸಲು ಆರಂಭಿಸಿದ್ದು, ಜುಲೈ-ಸೆಪ್ಟೆಂಬರ್ ಸಮಯದಲ್ಲಿ ಐಪಿಎಲ್ ಟೂರ್ನಿಯನ್ನು ಆಯೋಜಿಸುವ ಬಗ್ಗೆ ಪರಿಶೀಲನೆ ನಡೆಸಿದೆ.
ಪಂದ್ಯಗಳ ಸಂಖ್ಯೆಯನ್ನು ಕಡಿತಗೊಳಿಸಿ ಅಥವಾ ವಿದೇಶಿ ಆಟಗಾರರು ಇಲ್ಲದೆ ಐಪಿಎಲ್ ಆಯೋಜಿಸುವ ಯೋಚನೆಗೆ ಫ್ರಾಂಚೈಸಿ ಮಾಲೀಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಐಪಿಎಲ್ ಆಯೋಜಿಸುವುದಾದರೆ ಎಲ್ಲ 60 ಪಂದ್ಯಗಳೂ ಇರಬೇಕಾಗುತ್ತದೆ. ಸದ್ಯದ ಯೋಜನೆ ಪ್ರಕಾರ ಇದಕ್ಕೆ ಕನಿಷ್ಠ 37 ದಿನಗಳ ಸಮಯ ಅಗತ್ಯ. 2009ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಇಷ್ಟೇ ದಿನಗಳಲ್ಲಿ ಐಪಿಎಲ್ ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಿದ್ದು ಬಿಸಿಸಿಐಗೆ ಮಾದರಿಯಾಗಿದೆ.
ಜೂನ್ ನಂತರದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ಯಾಲೆಂಡರ್ ಹಾಲಿ ವೇಳಾಪಟ್ಟಿಯಂತೆ ಶುರುವಾಗಿ ಬಿಟ್ಟರೆ ಐಪಿಎಲ್ಗೆ ವಿದೇಶಿ ಆಟಗಾರರು ಲಭ್ಯರಾಗುವುದು ಕಷ್ಟ. ಆದರೆ ಸದ್ಯಕ್ಕೆ ಐಸಿಸಿಯ ಫ್ಯೂಚರ್ ಟೂರ್ಸ್ ಪ್ರೋಗ್ರಾಂ (ಎಫ್ಟಿಪಿ) ಅನ್ವಯ ಜುಲೈನಿಂದ ಸೆಪ್ಟೆಂಬರ್ ನಡುವೆ ಹೆಚ್ಚಿನ ಅಂತಾರಾಷ್ಟ್ರೀಯ ಸರಣಿಗಳಿಲ್ಲ. ಸೆಪ್ಟೆಂಬರ್ನಲ್ಲಿ ಯುಎಇಯಲ್ಲಿ ಏಷ್ಯಾಕಪ್ ಟಿ20 ಟೂರ್ನಿ ನಿಗದಿಯಾಗಿದೆ. ಆದರೆ ಸದ್ಯ ಯುಎಇಯಲ್ಲಿ ಕರೊನಾ ಕಾಡುತ್ತಿರುವುದರಿಂದ ಅಲ್ಲಿ ಏಷ್ಯಾಕಪ್ ಆಯೋಜನೆ ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಇದೆ. ಸೋಂಕು ನಿಯಂತ್ರಣಕ್ಕೆ ಬಾರದಿದ್ದರೆ ಏಷ್ಯಾಕಪ್ ಕೂಡ ರದ್ದುಗೊಳ್ಳಬಹುದು.
ಇನ್ನು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ) ಜೂನ್-ಜುಲೈನಲ್ಲಿ ಹೊಸ ಅವಿಷ್ಕಾರವಾದ ‘ದಿ ಹಂಡ್ರೆಡ್’ (ತಲಾ 100 ಎಸೆತಗಳ ಪಂದ್ಯ) ಆಯೋಜಿಸಲು ಮುಂದಾಗಿದೆ. ಆದರೆ ಸದ್ಯ ಯುಕೆಯಲ್ಲೂ ಕರೊನಾ ಕಾಟ ಜೋರಾಗಿರುವುದರಿಂದ ಈ ಟೂರ್ನಿಯೂ ಅನುಮಾನ. ಆದರೆ ದಿ ಹಂಡ್ರೆಡ್ ಟೂರ್ನಿ ನಡೆದರೆ ಇಂಗ್ಲೆಂಡ್ ಕ್ರಿಕೆಟಿಗರು, ಮರುನಿಗದಿಯಾದ ಐಪಿಎಲ್ಗೆ ಅಲಭ್ಯರಾಗಲಿದ್ದಾರೆ.ಉಳಿದಂತೆ ನ್ಯೂಜಿಲೆಂಡ್, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ತಂಡಗಳು ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಹೆಚ್ಚಿನ ಪಂದ್ಯಗಳನ್ನು ಹೊಂದಿಲ್ಲ. ಅಕ್ಟೋಬರ್-ನವೆಂಬರ್ನಲ್ಲಿ ನಿಗದಿಯಾಗಿರುವ ಟಿ20 ವಿಶ್ವಕಪ್ಗೆ ಮುನ್ನ ಭಾರತ ತಂಡ ಏಷ್ಯಾಕಪ್ ಹೊರತಾಗಿ ಆಡಬೇಕಿರುವ ಏಕೈಕ ಸರಣಿ ಶ್ರೀಲಂಕಾದಲ್ಲಿ ನಿಗದಿಯಾಗಿದೆ. ಜೂನ್-ಜುಲೈನಲ್ಲಿ ಭಾರತ ತಂಡ ಶ್ರೀಲಂಕಾ ಪ್ರವಾಸದಲ್ಲಿ 3 ಏಕದಿನ ಮತ್ತು 3 ಟಿ20 ಪಂದ್ಯಗಳನ್ನು ಆಡಬೇಕಿದೆ. ಬಿಸಿಸಿಐ ಮನಸ್ಸು ಮಾಡಿದರೆ ಈ ಸರಣಿಯನ್ನು ಸುಲಭವಾಗಿ ಮುಂದೂಡಬಹುದಾಗಿದೆ. ಹೀಗಾಗಿ ಜುಲೈ-ಸೆಪ್ಟೆಂಬರ್ ನಡುವಿನ ಕನಿಷ್ಠ 37 ದಿನ ಗಳಲ್ಲಿ ಅಂದರೆ 5 ವಾರ ಮತ್ತು 2 ದಿನಗಳಲ್ಲಿ ಐಪಿಎಲ್ ಆಯೋಜಿ ಸಲು ಬಿಸಿಸಿಐ ಯೋಜನೆ ಸಿದ್ಧಪಡಿಸುತ್ತಿದೆ. -ಏಜೆನ್ಸೀಸ್