ಯುಎಇಯಲ್ಲಿ ಐಪಿಎಲ್ ಆಯೋಜನೆ ಪ್ರಕ್ರಿಯೆ ಚುರುಕು, 7-10 ದಿನದಲ್ಲಿ ಮಹತ್ವದ ಸಭೆ

ipl 2020
Published on

ಬೆಂಗಳೂರು: ಕೊನೆಗೂ ಟಿ20 ವಿಶ್ವಕಪ್ ಮುಂದೂಡಿಕೆಯಾಗಿರುವ ಬೆನ್ನಲ್ಲೇ, ನಿರೀಕ್ಷೆಯಂತೆಯೇ ಐಪಿಎಲ್ 13ನೇ ಆವೃತ್ತಿ ಆಯೋಜನೆ ಪ್ರಕ್ರಿಯೆಯನ್ನು ಬಿಸಿಸಿಐ ಚುರುಕುಗೊಳಿಸಿದೆ. ಇನ್ನೊಂದು ವಾರ ಅಥವಾ 10 ದಿನದೊಳಗೆ ಐಪಿಎಲ್ ಆಡಳಿತ ಮಂಡಳಿಯ ಮಹತ್ವದ ಸಭೆ ನಡೆಯಲಿದ್ದು, ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸುವ ಬಗ್ಗೆ ರೂಪುರೇಷೆಗಳನ್ನು ಅಂತಿಮಗೊಳಿಸುವ ನಿರೀಕ್ಷೆ ಇದೆ. ಈ ವರ್ಷ ಐಪಿಎಲ್ ಟೂರ್ನಿ ಯುಎಇಯಲ್ಲಿ ನಡೆಯಲಿರುವುದನ್ನು ಮತ್ತು ಸರ್ಕಾರದಿಂದ ಅನುಮತಿ ಸಿಕ್ಕ ಬಳಿಕ ಈ ಬಗ್ಗೆ ಅಧಿಕೃತ ಘೋಷಣೆ ಮಾಡುವ ಬಗ್ಗೆ ಐಪಿಎಲ್ ಚೇರ್ಮನ್ ಬ್ರಿಜೇಶ್ ಪಟೇಲ್ ವಿಜಯವಾಣಿಗೆ ಖಚಿತಪಡಿಸಿದ್ದಾರೆ.

ಸೆಪ್ಟೆಂಬರ್ 26ರಿಂದ ನವೆಂಬರ್ 8ರವರೆಗೆ ಯುಎಇಯಲ್ಲಿ ಐಪಿಎಲ್ ಆಯೋಜಿಸಲು ಬಿಸಿಸಿಐ ಈಗಾಗಲೆ ಯೋಜನೆ ಸಿದ್ಧಪಡಿಸಿದೆ. ‘ಇನ್ನು 7ರಿಂದ 10 ದಿನಗಳಲ್ಲಿ ನಡೆಯಲಿರುವ ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ಟೂರ್ನಿಯ ವೇಳಾಪಟ್ಟಿ ಅಂತಿಮವಾಗಲಿದೆ. ಯುಎಇಯಲ್ಲಿ 60 ಪಂದ್ಯಗಳನ್ನು ಒಳಗೊಂಡ ಪೂರ್ಣ ಪ್ರಮಾಣದ ಐಪಿಎಲ್ ಆಯೋಜನೆಗೆ ಯೋಜನೆ ಹಾಕಿಕೊಂಡಿದ್ದೇವೆ’ ಎಂದು ಕೆಎಸ್‌ಸಿಎ ಮಾಜಿ ಕಾರ್ಯದರ್ಶಿ ಬ್ರಿಜೇಶ್ ಪಟೇಲ್ ತಿಳಿಸಿದ್ದಾರೆ. ಪ್ರೇಕ್ಷಕರಿಲ್ಲದೆ ಐಪಿಎಲ್ ಟೂರ್ನಿ ನಡೆಯಲಿದ್ದು, ಹಾಲಿ ಸನ್ನಿವೇಶದಲ್ಲಿ ಟೂರ್ನಿಯ ಕಾರ್ಯನಿರ್ವಹಣೆ ದೊಡ್ಡ ಸವಾಲಾಗಿದೆ ಎಂದು ಅವರು ತಿಳಿಸಿದ್ದಾರೆ. ಟಿ20 ವಿಶ್ವಕಪ್ ಮುಂದೂಡಿಕೆಯ ಅಧಿಕೃತ ಘೋಷಣೆಗೆ ಮುನ್ನವೇ ಫ್ರಾಂಚೈಸಿಗಳು ಐಪಿಎಲ್ ಟೂರ್ನಿಗೆ ಸಿದ್ಧತೆಗಳನ್ನು ಆರಂಭಿಸಿದ್ದವು.

ಕಳೆದ ಮಾರ್ಚ್‌ನಲ್ಲಿ ಲಾಕ್‌ಡೌನ್ ಘೋಷಣೆಯಾದ ಬಳಿಕ ಭಾರತದ ಹೆಚ್ಚಿನ ಕ್ರಿಕೆಟಿಗರು ಮೈದಾನಕ್ಕೆ ಇಳಿದು ಅಭ್ಯಾಸ ನಡೆಸಿಲ್ಲ. ಐಪಿಎಲ್ ಪಂದ್ಯ ಆಡುವ ಮುನ್ನ ಎಲ್ಲ ಆಟಗಾರರಿಗೆ ಕನಿಷ್ಠ 3ರಿಂದ 4 ವಾರಗಳ ಅಭ್ಯಾಸ ಅಗತ್ಯವಾಗಿದೆ. ವಿದೇಶಿ ಆಟಗಾರರು ತಮ್ಮ ತಮ್ಮ ದೇಶಗಳಿಂದ ನೇರವಾಗಿ ಯುಎಇಗೆ ಬಂದಿಳಿಯುವ ನಿರೀಕ್ಷೆ ಇದೆ. ಈ ಮುನ್ನ 2014ರಲ್ಲಿ ಯುಎಇಯಲ್ಲಿ ಐಪಿಎಲ್ ಟೂರ್ನಿಯ ಮೊದಲಾರ್ಧ ನಡೆದಿತ್ತು. ಆಗ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಯುಪಿಎ ಸರ್ಕಾರ ಟೂರ್ನಿಗೆ ಭದ್ರತೆ ಒದಗಿಸಲು ನಿರಾಕರಿಸಿತ್ತು.

ಟೆಸ್ಟ್ ಕ್ರಿಕೆಟಿಗರಿಗೆ ಅಹಮದಾಬಾದ್‌ನಲ್ಲಿ ತರಬೇತಿ

ಐಪಿಎಲ್ ಬೆನ್ನಲ್ಲೇ ಭಾರತ ತಂಡ ಆಸೀಸ್ ಪ್ರವಾಸಕ್ಕೆ ತೆರಳಬೇಕಿದೆ. ಹೀಗಾಗಿ ಟೆಸ್ಟ್ ಆಟಗಾರರ ತರಬೇತಿಗೂ ಆದ್ಯತೆ ಸಿಗಬೇಕಾಗಿದೆ. ಟೆಸ್ಟ್ ವಿಶೇಷಜ್ಞರಾದ ಚೇತೇಶ್ವರ ಪೂಜಾರ ಮತ್ತು ಹನುಮ ವಿಹಾರಿ ಐಪಿಎಲ್ ತಂಡಗಳ ಭಾಗವಾಗಿಲ್ಲ. ಇವರು ಅಹಮದಾಬಾದ್‌ನ ನೂತನ ಮೊಟೆರಾ ಕ್ರೀಡಾಂಗಣದ ಜೈವಿಕ-ಸುರಕ್ಷಾ ವಾತಾವರಣದಲ್ಲಿ ಅಭ್ಯಾಸ ನಡೆಸುವ ನಿರೀಕ್ಷೆ ಇದೆ. ಐಪಿಎಲ್‌ನಲ್ಲಿ ಬೇಗನೆ ಪ್ಲೇ-ಆಫ್​ ರೇಸ್‌ನಿಂದ ಹೊರಬೀಳುವ ತಂಡಗಳಲ್ಲಿರುವ ಟೆಸ್ಟ್ ಆಟಗಾರರೂ ಬಳಿಕ ಇವರನ್ನು ಸೇರಿಕೊಳ್ಳಬಹುದು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net