ಆಲ್ ಸ್ಟಾರ್ ಪಂದ್ಯಕ್ಕೆ ಫ್ರಾಂಚೈಸಿ ವಿರೋಧ: ಆಟಗಾರರ ಸಿದ್ಧತೆ, ವಾಣಿಜ್ಯ ಲಾಭಕ್ಕೆ ಹೊಡೆತದ ಭೀತಿ, ಐಪಿಎಲ್ ನಂತರ ನಿಗದಿ?

Dhoni
Published on

ನವದೆಹಲಿ: ಮುಂಬರುವ ಐಪಿಎಲ್ 13ನೇ ಆವೃತ್ತಿಗೆ ಪೂರ್ವಭಾವಿಯಾಗಿ ಆಲ್ ಸ್ಟಾರ್ ಪಂದ್ಯ ಆಡುವ ಬಿಸಿಸಿಐ ಯೋಜನೆಗೆ ಎಲ್ಲ ಎಂಟು ಫ್ರಾಂಚೈಸಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಎಲ್ಲ ತಂಡಗಳಿಂದ ಸ್ಟಾರ್ ಆಟಗಾರರನ್ನು ಒಟ್ಟು ಸೇರಿಸಿ 2 ತಂಡಗಳ ನಡುವೆ ಪ್ರದರ್ಶನ ಪಂದ್ಯ ಆಡುವ ಮೂಲಕ ದತ್ತಿನಿಧಿ ಸಂಗ್ರಹಿಸುವುದು ಬಿಸಿಸಿಐ ಯೋಜನೆಯಾಗಿದೆ. ಈ ಪಂದ್ಯವನ್ನು ಐಪಿಎಲ್ ಆರಂಭಕ್ಕೆ ಮೂರು ದಿನ ಮುನ್ನ ಆಯೋಜಿಸಲು ಬಿಸಿಸಿಐ ಬಯಸಿದೆ. ಆದರೆ ಈ ಪಂದ್ಯಕ್ಕಾಗಿ ಪ್ರಮುಖ ಆಟಗಾರರನ್ನು ಬಿಟ್ಟುಕೊಟ್ಟರೆ, ತಂಡದ ಪೂರ್ವಸಿದ್ಧತೆಗೆ ಹಿನ್ನಡೆಯಾಗುವ ಭೀತಿ ಫ್ರಾಂಚೈಸಿಗಳದ್ದಾಗಿದೆ. ಅಲ್ಲದೆ ಪಂದ್ಯದಲ್ಲಿ ಆಟಗಾರರು ತಮ್ಮ ತಂಡದ ಜೆರ್ಸಿ ಧರಿಸದೆ ಆಡುವುದರಿಂದ ವಾಣಿಜ್ಯವಾಗಿಯೂ ನಷ್ಟವಾಗುವ ಕಳವಳವನ್ನು ಫ್ರಾಂಚೈಸಿ ಮಾಲೀಕರು ಹೊಂದಿದ್ದಾರೆ.

ಟೂರ್ನಿಗೆ ಒಂದು ವಾರ ಇರುವಾಗ ಆಟಗಾರರನ್ನು ಬಿಟ್ಟುಕೊಟ್ಟರೆ ಗಾಯದ ಅಪಾಯವೂ ಹೆಚ್ಚಿರುತ್ತದೆ. ಆಟಗಾರರಿಗೆ ತಂಡದ ಹೊಂದಾಣಿಕೆ ಪ್ರಕ್ರಿಯೆಗೆ ಒಗ್ಗಿಕೊಳ್ಳುವುದು ಕಷ್ಟವಾಗುತ್ತದೆ. ಇದಕ್ಕೆ ಲಭಿಸುವ ಅಲ್ಪ ಸಮಯವೂ ನಷ್ಟವಾಗುತ್ತದೆ ಎಂದು ಫ್ರಾಂಚೈಸಿ ಅಧಿಕಾರಿಯೊಬ್ಬರು ದೂರಿದ್ದಾರೆ. ಫ್ರಾಂಚೈಸಿಗಳ ವಿರೋಧದಿಂದಾಗಿ ಆಲ್ ಸ್ಟಾರ್ ಪಂದ್ಯವನ್ನು ಐಪಿಎಲ್ ಮುಗಿದ ನಂತರ ನಡೆಸುವ ಸಾಧ್ಯತೆ ಇದೆ.

ಅಹಮದಾಬಾದ್​ನಲ್ಲಿ ಅಪೆಕ್ಸ್ ಕೌನ್ಸಿಲ್ ಸಭೆ: ಬಿಸಿಸಿಐನ ಅಪೆಕ್ಸ್ ಕೌನ್ಸಿಲ್ ಸಭೆ ಫೆ. 13ರಂದು ಅಹಮದಾಬಾದ್​ನಲ್ಲಿ ನಡೆಯಲಿದೆ. ಐಪಿಎಲ್ ಸಂಬಂಧಿತ ವಿಷಯಗಳು ಸಭೆಯ ಪ್ರಮುಖ ಅಜೆಂಡಾ ಆಗಿರುತ್ತವೆ. ಆಲ್ ಸ್ಟಾರ್ ಪಂದ್ಯದ ಬಗ್ಗೆಯೂ ಇದೇ ವೇಳೆ ಅಂತಿಮ ನಿರ್ಧಾರ ಹೊರಬೀಳುವ ನಿರೀಕ್ಷೆ ಇದೆ.

ಐಪಿಎಲ್ ದಿನಾಂಕ ಇನ್ನೂ ಗೊಂದಲ

ಐಪಿಎಲ್ 13ನೇ ಆವೃತ್ತಿ ಮಾರ್ಚ್ 29ರಿಂದ ಮೇ 24ರವರೆಗೆ ನಡೆಯಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈಗಾಗಲೆ ಘೋಷಿಸಿದ್ದರೂ, ಇದು ಅಂತಿಮವಲ್ಲ ಎಂದು ಹೇಳಲಾಗುತ್ತಿದೆ. ಮಾರ್ಚ್ ಕೊನೇ ವಾರದಲ್ಲಿ ಐಸಿಸಿ ಸಭೆಯೂ ನಡೆಯಲಿರುವುದರಿಂದ, ಬಿಸಿಸಿಐ ಅಧಿಕಾರಿಗಳು ಅದರಲ್ಲಿ ವ್ಯಸ್ತರಾಗಿರುವ ಸಮಯದಲ್ಲಿ ಐಪಿಎಲ್ ಆರಂಭಿಸುವುದು ಅನುಮಾನವೆನಿಸಿದೆ.

ಚತುಷ್ಕೋನ ಕ್ರಿಕೆಟ್ ಸರಣಿ ಕುರಿತು ರ್ಚಚಿಸಲು ಇಂಗ್ಲೆಂಡ್​ನತ್ತ ಗಂಗೂಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಮ್ಮ ಮಹತ್ವಾಕಾಂಕ್ಷೆಯ ಚತುಷ್ಕೋನ ಕ್ರಿಕೆಟ್ ಸರಣಿ ಆಯೋಜನೆಯ ಬಗ್ಗೆ ರ್ಚಚಿಸಲು ಇಂಗ್ಲೆಂಡ್​ಗೆ ಪ್ರಯಾಣಿಸಿದ್ದಾರೆ. ಅವರು ಅಲ್ಲಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಅಧಿಕಾರಿಗಳ ಜತೆಗೆ ಮಹತ್ವದ ಚರ್ಚೆ ನಡೆಸಲಿದ್ದು, ಇದೇ ವೇಳೆ ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆ ಅಧಿಕಾರಿಗಳೂ ಹಾಜರಿರುವ ನಿರೀಕ್ಷೆ ಇದೆ. ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ಬೇರೊಂದು ತಂಡವನ್ನು ಒಳಗೊಂಡ ಸೂಪರ್ ಸಿರೀಸ್​ಅನ್ನು ಪ್ರತಿ ವರ್ಷ ಆಯೋಜಿಸುವ ಯೋಜನೆಯನ್ನು ಗಂಗೂಲಿ ರೂಪಿಸಿದ್ದಾರೆ. ಈ ರೂಪುರೇಷೆ ಅಂತಿಮಗೊಂಡ ಬಳಿಕ ಅವರು ಐಸಿಸಿಯಿಂದ ಒಪ್ಪಿಗೆ ಕೇಳುವ ನಿರೀಕ್ಷೆ ಇದೆ. 3ಕ್ಕಿಂತ ಹೆಚ್ಚು ತಂಡಗಳ ಟೂರ್ನಿಗೆ ಐಸಿಸಿ ಅನುಮತಿ ಪಡೆಯುವುದು ಅಗತ್ಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net