14ನೇ ಐಪಿಎಲ್‌ನಲ್ಲಿ ಆಡಲಿರುವ 9ನೇ ತಂಡ ಯಾವುದು ಗೊತ್ತಾ?

IPL PROMO AND ANOTHER FRANCHISE
Published on

ಬೆಂಗಳೂರು: ದೂರದ ಅರಬ್ ರಾಷ್ಟ್ರದಲ್ಲಿ 13ನೇ ಆವೃತ್ತಿ ಐಪಿಎಲ್ ಟೂರ್ನಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಯಶಸ್ವಿಯಾಗಿ ಆಯೋಜಿಸಿದೆ. ಇದೀಗ ಬಿಸಿಸಿಐ ಚಿತ್ತ 14ನೇ ಆವೃತ್ತಿಯತ್ತ ನೆಟ್ಟಿದೆ. ಭಾರತದಲ್ಲೇ ಮುಂದಿನ ಆವೃತ್ತಿ ಆಯೋಜಿಸಲಾಗುವುದು ಎಂದು ಈಗಾಗಲೇ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಕೂಡ ಹೇಳಿದ್ದಾರೆ. ಮುಂದಿನ ಆವೃತ್ತಿಯ ವಿಶೇಷ ಏನಂದರೆ 8 ತಂಡಗಳ ಬದಲಾಗಿ 9 ತಂಡಗಳು ಕಣಕ್ಕಿಳಿಯಲಿವೆ. ಐಪಿಎಲ್‌ನ 9ನೇ ತಂಡವಾಗಿ ಅಹಮದಾಬಾದ್ ನಗರದ ಫ್ರಾಂಚೈಸಿ ಸೇರ್ಪಡೆಗೊಳ್ಳಲಿದೆ ಎಂದು ಹೇಳಲಾಗಿದೆ. ನೂತನ ಸ್ಟೇಡಿಯಂ ಸರ್ದಾರ್ ವಲ್ಲಾಭಾಯ್ ಸ್ಟೇಡಿಯಂ ತಂಡದ ತವರು ಮೈದಾನವಾಗಿರಲಿದೆ.

ಒಂದು ವೇಳೆ 9ನೇ ತಂಡಕ್ಕೆ ಬಿಸಿಸಿಐ ಮಣೆ ಹಾಕಿದರೆ, ಗುಜರಾತ್ ಮೂಲದ ಉದ್ಯಮಿ ಗೌತಮ್ ಅದಾನಿ ಒಡೆತನ ಅದಾನಿ ಗ್ರೂಪ್ ಅಹಮದಾಬಾದ್ ಫ್ರಾಂಚೈಸಿ ಕೊಂಡುಕೊಳ್ಳಲು ಆಸಕ್ತಿ ವಹಿಸಿದೆ ಎನ್ನಲಾಗಿದೆ. ಆದರೆ, ಮೆಗಾ ಹರಾಜು ಪ್ರಕ್ರಿಯೆ ಆರಂಭಗೊಂಡರಷ್ಟೇ ನೂತನ ತಂಡದ ಕುರಿತು ಅಂತಿಮ ರೂಪು ರೇಷೆ ತಿಳಿಯಲಿದೆ. ಕರೊನಾ ವೈರಸ್‌ನಿಂದಾಗಿ ಆರ್ಥಿಕವಾಗಿ ಸಾಕಷ್ಟು ಪೆಟ್ಟು ತಿಂದಿರುವ ಬಿಸಿಸಿಐ, ಹಣಕಾಸಿನ ಸ್ಥಿತಿ ಸುಧಾರಿಸಿಕೊಳ್ಳುವ ನಿಟ್ಟಿನಲ್ಲಿ ಮೆಗಾ ಹರಾಜಿಗೆ ಒಲವು ಹೊಂದಿದೆ ಎನ್ನಲಾಗಿದೆ.

2013ರ ಸ್ಪಾಟ್ ಫಿಕ್ಸಿಂಗ್ ಪ್ರಕರಣದಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳನ್ನು 2 ವರ್ಷಗಳ (2016, 2017) ಕಾಲ ಅಮಾನತುಗೊಳಿಸಲಾಗಿತ್ತು. ಈ ವೇಳೆ ಬಿಸಿಸಿಐ ಈ ತಂಡಗಳ ಬದಲಿಗೆ ಪುಣೆ ಹಾಗೂ ಗುಜರಾತ್ ತಂಡಗಳಿಗೆ 2 ವರ್ಷಗಳ ಅವಧಿಗೆ ಫ್ರಾಂಚೈಸಿ ನೀಡಿತ್ತು. ಒಂದು ವೇಳೆ ಅಹಮದಾಬಾದ್ ಫ್ರಾಂಚೈಸಿ ಮುಂದಿನ ವರ್ಷ ಕಣಕ್ಕಿಳಿದರೆ, ಗುಜರಾತ್‌ನಿಂದ ಐಪಿಎಲ್ ಆಡಿದ 2ನೇ ತಂಡ ಎನಿಸಿಕೊಳ್ಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net