ಐಪಿಎಲ್-14ರ ಮೊದಲ ಭಾಗದಲ್ಲಿ ಏನೇನಾಯ್ತು, ಇಲ್ಲಿದೆ ಹೈಲೈಟ್ಸ್...

ipl highlights web
Published on

ಬೆಂಗಳೂರು: ಕರೊನಾದಿಂದಾಗಿ ದಿಢೀರ್ ಸ್ಥಗಿತಗೊಂಡಿದ್ದ ಐಪಿಎಲ್ 14ನೇ ಆವೃತ್ತಿ 4 ತಿಂಗಳ ಬಳಿಕ ಮತ್ತೆ ಆರಂಭಗೊಳ್ಳುತ್ತಿದೆ. ಏಪ್ರಿಲ್ 9ರಿಂದ ಮೇ 2ರವರೆಗೆ ನಡೆದ ಟೂರ್ನಿಯ ಮೊದಲ ಭಾಗದ 29 ಪಂದ್ಯಗಳಲ್ಲಿ ಹಲವು ರೋಚಕತೆ-ವಿಶೇಷತೆಗಳಿದ್ದವು. ಇದರ ಪ್ರಮುಖಾಂಶಗಳ ಸಂಕ್ಷಿಪ್ತ ಮೆಲುಕು ಇಲ್ಲಿದೆ.

ಹರ್ಷಲ್ ಪಟೇಲ್​ ಫೈವ್‌ಸ್ಟಾರ್

ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ವೇಗಿ ಹರ್ಷಲ್ ಪಟೇಲ್ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ 27 ರನ್‌ಗೆ 5 ವಿಕೆಟ್ ಕಬಳಿಸಿ ಗಮನ ಸೆಳೆದಿದ್ದರು. ಸ್ಲಾಗ್ ಓವರ್ ಅಬ್ಬರಕ್ಕೆ ಹೆಸರಾಗಿದ್ದ ಮುಂಬೈ ಕೊನೇ 4 ಓವರ್‌ಗಳಲ್ಲಿ ಕೇವಲ 25 ರನ್ ಗಳಿಸಿತ್ತು. ಇದರಿಂದ 160 ರನ್ ಸವಾಲು ಪಡೆದಿದ್ದ ಆರ್‌ಸಿಬಿ, ಎಬಿಡಿ (48) ಪರಿಶ್ರಮದಿಂದ ಕೊನೇ ಎಸೆತದಲ್ಲಿ ಜಯಿಸಿತ್ತು. ಹರ್ಷಲ್ ಮುಂಬೈ ವಿರುದ್ಧ 5 ವಿಕೆಟ್ ಗೊಂಚಲು ಪಡೆದ ಮೊದಲ ಬೌಲರ್ ಎನಿಸಿದರು.

ದೇವದತ್ ಪಡಿಕಲ್ ಶತಕ

ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಕನ್ನಡಿಗ ದೇವದತ್ ಪಡಿಕಲ್ (101ರನ್, 52 ಎಸೆತ, 11 ಬೌಂಡರಿ, 6 ಸಿಕ್ಸರ್) ಚೊಚ್ಚಲ ಐಪಿಎಲ್ ಶತಕ ಸಿಡಿಸಿ ಮಿಂಚಿದರು. ಅವರಿಗೆ ನಾಯಕ ವಿರಾಟ್ ಕೊಹ್ಲಿ (72) ಉತ್ತಮ ಸಾಥ್ ನೀಡಿದರು. ಇದರಿಂದ ಆರ್‌ಸಿಬಿ 178 ರನ್ ಸವಾಲನ್ನು 16.3 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಬೆನ್ನಟ್ಟಿ ಜಯಿಸಿತು.

ಓವರ್‌ಗೆ 37 ರನ್ ಕಸಿದ ಜಡೇಜಾ

ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ರವೀಂದ್ರ ಜಡೇಜಾ, ಸಿಎಸ್‌ಕೆ ಇನಿಂಗ್ಸ್‌ನ ಕೊನೇ ಓವರ್‌ನಲ್ಲಿ 37 ರನ್ (6, 6, 6+ನೋಬಾಲ್, 6, 2, 6, 4) ಕಸಿದು ಆರ್ಭಟಿಸಿದರು. 1 ನೋಬಾಲ್ ಇದ್ದ ಹರ್ಷಲ್ ಪಟೇಲ್ ಓವರ್‌ನಲ್ಲಿ ಜಡೇಜಾ 5 ಸಿಕ್ಸರ್ ಕೂಡ ಸಿಡಿಸಿದರು. ಇದರಿಂದಾಗಿ 170ರ ನಿರೀಕ್ಷೆಯಲ್ಲಿದ್ದ ಸಿಎಸ್‌ಕೆ 191 ರನ್ ಪೇರಿಸಿದರೆ, ಪ್ರತಿಯಾಗಿ ಆರ್‌ಸಿಬಿ 122 ರನ್ ಗಳಿಸಲಷ್ಟೇ ಶಕ್ತವಾಗಿತ್ತು.

ಸಿಂಗಲ್‌ಗೆ ಸ್ಯಾಮ್ಸನ್ ನಕಾರ

ಪಂಜಾಬ್ ವಿರುದ್ಧ ಪಂದ್ಯದಲ್ಲಿ 222 ರನ್ ಸವಾಲಿಗೆ ಪ್ರತಿಯಾಗಿ ರಾಜಸ್ಥಾನ ತಂಡ ನಾಯಕ ಸಂಜು ಸ್ಯಾಮ್ಸನ್ (119) ಭರ್ಜರಿ ಶತಕದ ಬಲದಿಂದ ಜಯದತ್ತ ಮುನ್ನಡೆದಿತ್ತು. ಅರ್ಷದೀಪ್ ಎಸೆದ ಪಂದ್ಯದ ಕೊನೇ ಓವರ್‌ನಲ್ಲಿ 13 ರನ್ ಬೇಕಾಗಿದ್ದಾಗ ಮೊದಲ 3 ಎಸೆತಗಳಲ್ಲಿ 2 ಸಿಂಗಲ್ಸ್‌ಗಳಷ್ಟೇ ಬಂದರೆ, 4ನೇ ಎಸೆತದಲ್ಲಿ ಸ್ಯಾಮ್ಸನ್ ಸಿಕ್ಸರ್ ಸಿಡಿಸಿದರು. ಇದರಿಂದ ಕೊನೇ 2 ಎಸೆತಗಳಲ್ಲಿ ಮತ್ತೆ 5 ರನ್ ಅಗತ್ಯವಿತ್ತು. 5ನೇ ಎಸೆತದಲ್ಲಿ ದೊಡ್ಡ ಹೊಡೆತ ಬಾರಿಸುವ ಸ್ಯಾಮ್ಸನ್ ಯತ್ನ ವಿಲವಾದರೂ ಸಿಂಗಲ್ಸ್ ಕಸಿಯುವ ಅವಕಾಶವಿತ್ತು. ಆದರೆ ಕ್ರಿಸ್ ಮಾರಿಸ್ ಅರ್ಧ ಪಿಚ್ ಓಡಿ ಬಂದರೂ ಸ್ಯಾಮ್ಸನ್ ವಾಪಸ್ ಕಳುಹಿಸಿದರು. ಅಂತಿಮ ಎಸೆತದಲ್ಲಿ ಸ್ಯಾಮ್ಸನ್, ಡೀಪ್ ಕವರ್‌ನಲ್ಲಿ ದೀಪಕ್ ಹೂಡಗೆ ಕ್ಯಾಚ್ ನೀಡಿದರು. ಇದರಿಂದ ರಾಜಸ್ಥಾನ 4 ರನ್‌ನಿಂದ ಸೋತಿತಲ್ಲದೆ, ಸಿಂಗಲ್ಸ್ ನಿರಾಕರಿಸಿದ ಸ್ಯಾಮ್ಸನ್ ನಡೆ ಸಾಕಷ್ಟು ಚರ್ಚೆಗೂ ಗ್ರಾಸವಾಯಿತು.

ಪೃಥ್ವಿ ಷಾ ಸತತ 6 ಬೌಂಡರಿ

ಡೆಲ್ಲಿ ಆರಂಭಿಕ ಪೃಥ್ವಿ ಷಾ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಶಿವಂ ಮಾವಿ ಓವರ್‌ನ ಎಲ್ಲ 6 ಎಸೆತಗಳಲ್ಲಿ ಬೌಂಡರಿ ಸಿಡಿಸಿ ವಿಶೇಷ ದಾಖಲೆ ಬರೆದರು. ಅದು ಡೆಲ್ಲಿ ಇನಿಂಗ್ಸ್‌ನ ಮೊದಲ ಓವರ್ ಆಗಿತ್ತು. ಮೊದಲ ಎಸೆತವನ್ನು ವೈಡ್ ಮಾಡಿದ್ದರಿಂದ ಶಿವಂ ಮಾವಿ ಆ ಓವರ್‌ನಲ್ಲಿ ಒಟ್ಟು 25 ರನ್ ಬಿಟ್ಟುಕೊಟ್ಟರು. ಪೃಥ್ವಿ ಷಾ (82) ಒದಗಿಸಿದ ಈ ಭರ್ಜರಿ ಆರಂಭದಿಂದ ಡೆಲ್ಲಿ 155 ರನ್ ಸವಾಲನ್ನು 16.3 ಓವರ್‌ಗಳಲ್ಲೇ ಬೆನ್ನಟ್ಟಿ ಜಯಿಸಿತು.

ಬಯೋಬಬಲ್‌ನಲ್ಲಿ ಕರೊನಾ

14ನೇ ಆವೃತ್ತಿ ಆರಂಭಕ್ಕೂ ಮೊದಲೇ ಪಡಿಕಲ್, ಅಕ್ಷರ್ ಪಟೇಲ್ ಸಹಿತ ಕೆಲ ಆಟಗಾರರು ಪಾಸಿಟಿವ್ ಆಗಿದ್ದರೂ, ಬಯೋಬಬಲ್‌ನಲ್ಲಿ ಸುರಕ್ಷಿತ ಟೂರ್ನಿ ನಡೆಯುವ ನಿರೀಕ್ಷೆ ಇತ್ತು. ಮುಂಬೈ-ಚೆನ್ನೈನ ಮೊದಲ ಚರಣ ನಿರ್ವಿಘ್ನವಾಗಿ ಸಾಗಿತ್ತು ಕೂಡ. ಆದರೆ ದೆಹಲಿ-ಅಹಮದಾಬಾದ್‌ನ 2ನೇ ಚರಣದ ವೇಳೆಗೆ ಬಯೋಬಬಲ್‌ನಲ್ಲೇ ಕರೊನಾ ಕಾಣಿಸಿಕೊಂಡಿತ್ತು. ಮೊದಲಿಗೆ ಕೆಕೆಆರ್ ತಂಡದ ವರುಣ್ ಚಕ್ರವರ್ತಿ, ಸಂದೀಪ್ ವಾರಿಯರ್ ಸೋಂಕಿತರಾದಾಗ ಮೇ 3ರಂದು ನಡೆಯಬೇಕಾಗಿದ್ದ ಕೆಕೆಆರ್-ಆರ್‌ಸಿಬಿ ಪಂದ್ಯವನ್ನು ಮುಂದೂಡಲಾಗಿತ್ತು. ಬಳಿಕ ಮೇ 4ರಂದು ಡೆಲ್ಲಿ ತಂಡದ ಅಮಿತ್ ಮಿಶ್ರಾ, ಸನ್‌ರೈಸರ್ಸ್‌ ತಂಡದ ವೃದ್ಧಿಮಾನ್ ಸಾಹಗೂ ವೈರಸ್ ಹರಡಿದಾಗ ಎಚ್ಚೆತ್ತ ಬಿಸಿಸಿಐ, ಟೂರ್ನಿ ಸ್ಥಗಿತಕ್ಕೆ ನಿರ್ಧರಿಸಿತ್ತು.

3: ಐಪಿಎಲ್ 14ರ ಮೊದಲ ಭಾಗದಲ್ಲಿ ಒಟ್ಟು 3 ಶತಕಗಳು ದಾಖಲಾಗಿದ್ದವು. ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ ಮತ್ತು ದೇವದತ್ ಪಡಿಕಲ್ ಈ ಮೂವರು ಶತಕವೀರರು.

43: ಡೆಲ್ಲಿ ಆರಂಭಿಕ ಶಿಖರ್ ಧವನ್ ಟೂರ್ನಿಯ ಮೊದಲ ಭಾಗದಲ್ಲಿ ಗರಿಷ್ಠ 43 ಬೌಂಡರಿ ಬಾರಿಸಿದ್ದರು.

4: ಮೊದಲ ಭಾಗದಲ್ಲಿ ಕೆಎಲ್ ರಾಹುಲ್ ಮತ್ತು ಫಾಫ್​ ಡು ಪ್ಲೆಸಿಸ್ ಗರಿಷ್ಠ ತಲಾ 4 ಅರ್ಧಶತಕ ಬಾರಿಸಿದ್ದರು.

2: ಹರ್ಷಲ್ ಪಟೇಲ್ ಮತ್ತು ಆಂಡ್ರೆ ರಸೆಲ್ ಟೂರ್ನಿಯ ಮೊದಲ ಭಾಗದಲ್ಲಿ 5 ವಿಕೆಟ್ ಗೊಂಚಲು ಪಡೆದಿದ್ದ ಇಬ್ಬರು ಬೌಲರ್‌ಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net