ಮೇ.24ಕ್ಕೆ ಐಪಿಎಲ್ ಫೈನಲ್?

ipl jan 07
Published on

ನವದೆಹಲಿ: ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್​ನ 13ನೇ ಆವೃತ್ತಿ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮಾರ್ಚ್ 29 ರಂದು ಆರಂಭವಾಗಲಿದೆ ಎಂದು ಈಗಾಗಲೇ ವರದಿಯಾಗಿದ್ದರೆ, ಲೀಗ್​ನ ಫೈನಲ್ ಮೇ. 24 ರಂದು ನಡೆಯಲಿದೆ ಎನ್ನುವ ಮಾಹಿತಿ ಸಿಕ್ಕಿದೆ. ಒಟ್ಟು 57 ದಿನಗಳ ಕಾಲ ಲೀಗ್ ನಡೆಯಲಿರುವ ಕಾರಣದಿಂದ ಈ ಬಾರಿ ಡಬಲ್ ಹೆಡರ್ ಪಂದ್ಯಗಳು ಭಾರಿ ಕಡಿಮೆ ಇರಲಿದ್ದು, ಪಂದ್ಯ ಸಮಯ ಕೂಡ 8 ರ ಬದಲಿಗೆ 7.30ಕ್ಕೆ ಆರಂಭವಾಗುವ ಸಾಧ್ಯತೆ ಇದೆ.

57 ದಿನಗಳ ಕಾಲ ಲೀಗ್ ನಡೆಯಲಿರುವುದರಿಂದ ಈ ಬಾರಿ ಡಬಲ್ ಹೆಡರ್ ಪಂದ್ಯಗಳು ನಡೆಯುವುದು ಬಹುತೇಕ ಅನುಮಾನ. ‘ಪೂರ್ಣ ಪ್ರಮಾಣದ ವೇಳಾಪಟ್ಟಿ ಇನ್ನೂ ಸಿದ್ಧವಾಗಿಲ್ಲ. ಆದರೆ, ಮಾರ್ಚ್ 29 ರಂದು ಆರಂಭವಾಗಲಿರುವ ಲೀಗ್​ನ ಫೈನಲ್ ಮೇ. 24 ರಂದು ನಡೆಯಲಿದೆ. ಹಿಂದಿನ ಆವೃತ್ತಿಗಳಲ್ಲಿದ್ದ 45 ದಿನಗಳ ವಿಂಡೋ ಬದಲಿಗೆ ಈ ಬಾರಿ 57 ದಿನಗಳು ಲೀಗ್​ಗೆ ಸಿಗಲಿದೆ. ಹಾಗಾಗಿ ಒಂದು ದಿನಕ್ಕೆ ಒಂದು ಪಂದ್ಯ ಮಾತ್ರವೇ ನಡೆಸುವ ಅವಕಾಶ ಹೆಚ್ಚಿದೆ. ತೀರಾ ಸಲೀಸಾಗಿ ವೇಳಾಪಟ್ಟಿಯನ್ನೂ ಸಿದ್ಧ ಮಾಡಬಹುದು’ ಎಂದು ಮೂಲಗಳು ತಿಳಿಸಿವೆ.

7.30ಕ್ಕೆ ಪಂದ್ಯ ಆರಂಭ

ನೇರಪ್ರಸಾರ ವಾಹಿನಿಗಳ ಒತ್ತಾಯದ ಮೇರೆಗೆ ಸಮಯವನ್ನು ಬದಲಾವಣೆ ಮಾಡುವ ಬಗ್ಗೆ ಬಿಸಿಸಿಐ ಚಿಂತೆನೆ ಮಾಡಿದ್ದು, ಈ ಬಾರಿ ಅದಾಗುವ ಸಾಧ್ಯತೆ ಇದೆ. ಈ ಆವೃತ್ತಿಯಿಂದ ಪಂದ್ಯ 7.30ಕ್ಕೆ ಆರಂಭವಾಗುವುದನ್ನು ನಿರೀಕ್ಷೆ ಮಾಡಬಹುದು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net