

ನವದೆಹಲಿ: ಭಾರತದಲ್ಲಿ ನಡೆಯುವ ಇತರ ಕ್ರಿಕೆಟ್ ಪಂದ್ಯಗಳಿಗೆ ಹೋಲಿಸಿದರೆ ಐಪಿಎಲ್ ಟಿಕೆಟ್ಗಳ ದರ ಯಾವಾಗಲೂ ದುಬಾರಿಯಾಗಿರುತ್ತವೆ. ಇದೀಗ ಕೇಂದ್ರ ಸರ್ಕಾರ ಜಿಎಸ್ಟಿ ಸ್ಲ್ಯಾಬ್ಗಳ ಪರಿಷ್ಕರಣೆ ಮಾಡಿರುವ ಬಳಿಕ ಐಪಿಎಲ್ ಪಂದ್ಯಗಳ ಟಿಕೆಟ್ ದರ ಇನ್ನಷ್ಟು ದುಬಾರಿಯಾಗಲಿವೆ. ಐಪಿಎಲ್ ಟಿಕೆಟ್ಗಳ ಮೇಲಿನ ತೆರಿಗೆಯನ್ನು ಗರಿಷ್ಠ ಶೇ. 28ರ ಸ್ಲ್ಯಾಬ್ನಿಂದ ಐಷಾರಾಮಿಯ ಶೇ. 40ಕ್ಕೆ ಏರಿಸಿರುವುದು ಇದಕ್ಕೆ ಕಾರಣವಾಗಿದೆ. ಅಂದರೆ ಐಪಿಎಲ್ ಟಿಕೆಟ್ಗಳಿಗೆ ಇನ್ನು ಗರಿಷ್ಠ ಜಿಎಸ್ಟಿ ಅನ್ವಯಿಸಲಿದೆ.
ಐಪಿಎಲ್ ಟಿಕೆಟ್ಗಳ ತೆರಿಗೆ ಸ್ನಾ$ಬ್ಅನ್ನು ಈಗ ಕ್ಯಾಸಿನೋ, ರೇಸ್ ಕ್ಲಬ್ನಂಥ ಐಷಾರಾಮಿ ಮನೋರಂಜನೆ ಮತ್ತು ಪಾಪದ ಸರಕುಗಳ ಪಟ್ಟಿಗೆ ಸೇರಿಸಲಾಗಿದೆ. ಇದರಿಂದಾಗಿ ಮುಂದಿನ ಐಪಿಎಲ್ ಆವೃತ್ತಿಯ ಒಂದು ಸಾವಿರ ಮುಖಬೆಲೆಯ ಟಿಕೆಟ್ಗಳ ದರ 1,280ಕ್ಕೆ ಬದಲಾಗಿ 1,400 ರೂ. ಆಗಲಿವೆ. ಅಂದರೆ 120 ರೂ. ಬೆಲೆ ಏರಿಕೆಯಾಗಲಿದೆ. ಐಪಿಎಲ್ ಪಂದ್ಯಗಳ 500 ರೂ. ಟಿಕೆಟ್ ಬೆಲೆ ಶೇ. 40 ಜಿಎಸ್ಟಿಯೊಂದಿಗೆ 640ರಿಂದ 700 ರೂ.ಗೆ ಏರಿಕೆಯಾಗಲಿದೆ. 2 ಸಾವಿರ ರೂ. ಮುಖಬೆಲೆಯ ಟಿಕೆಟ್ ದರ 2,560ರಿಂದ 2,800 ರೂ.ಗೆ ಏರಿಕೆಯಾಗಲಿದೆ. ಐಪಿಎಲ್ ಲೀಗ್ ಪಂದ್ಯಗಳ ಟಿಕೆಟ್ ದರವನ್ನು ಆತಿಥೇಯ ಫ್ರಾಂಚೈಸಿಗಳು ನಿರ್ಧರಿಸುತ್ತವೆ. ಇದರಲ್ಲಿ ಬಿಸಿಸಿಐಗೆ ಯಾವುದೇ ಪಾತ್ರ ಇರುವುದಿಲ್ಲ.
ಐಪಿಎಲ್ ಹೆಸರನ್ನು ಕೇಂದ್ರ ಸರ್ಕಾರ ಜಿಎಸ್ಟಿಯಲ್ಲಿ ರ್ನಿದಿಷ್ಟವಾಗಿ ಉಲ್ಲೇಖಿಸಿದೆ. ಆದರೆ ಈ ಶೇ. 40ರ ಸ್ನಾ$ಬ್ ದೇಶದ ಇತರ ಪ್ರಮುಖ ಕ್ರೀಡಾ ಲೀಗ್ಗಳಾದ ಪ್ರೊ ಕಬಡ್ಡಿ ಲೀಗ್ ಮತ್ತು ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಫುಟ್ಬಾಲ್ ಟೂರ್ನಿಗಳಿಗೂ ಅನ್ವಯಿಸಲಿದೆಯೇ ಎಂಬುದು ಸ್ಪಷ್ಟವಾಗಿಲ್ಲ.
ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದ ತೆರಿಗೆ ಬದಲಿಲ್ಲ
ಐಪಿಎಲ್ ಟಿಕೆಟ್ ಮೇಲಿನ ತೆರಿಗೆ ಏರಿಕೆ ನಡುವೆ, ಭಾರತದಲ್ಲಿ ನಡೆಯುವ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ಟಿಕೆಟ್ ಮೇಲಿನ ಜಿಎಸ್ಟಿ ಸ್ಲ್ಯಾಬ್ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ. ಟೀಮ್ ಇಂಡಿಯಾದ ಪಂದ್ಯಗಳು ಮತ್ತು ಇತರ ಕ್ರೀಡಾಕೂಟಗಳ ಟಿಕೆಟ್ಗಳಿಗೆ ಈ ಹಿಂದಿನಂತೆಯೇ ಶೇ. 18 ಜಿಎಸ್ಟಿ ಮುಂದುವರಿಯಲಿದೆ. ಜತೆಗೆ 500 ರೂ.ಗಿಂತ ಕಡಿಮೆ ಮುಖಬೆಲೆಯ ಟಿಕೆಟ್ಗಳಿಗೆ ಯಾವುದೇ ತೆರಿಗೆ ಇರುವುದಿಲ್ಲ. ಹೊಸ ಜಿಎಸ್ಟಿ ಸೆಪ್ಟೆಂಬರ್ 22ರಿಂದ ಅನ್ವಯಿಸಲಿದ್ದು, ಸೆಪ್ಟೆಂಬರ್ 30ರಿಂದ ಭಾರತದಲ್ಲಿ ನಡೆಯಲಿರುವ ಮಹಿಳೆಯರ ಏಕದಿನ ವಿಶ್ವಕಪ್ ಟೂರ್ನಿಯ ಟಿಕೆಟ್ ಮೇಲೆ ಹಿಂದಿನಂತೆಯೇ ಶೇ.18 ಜಿಎಸ್ಟಿ ಅನ್ವಯಿಸಲಿದೆ.