2020ರಲ್ಲಿ ಮಾತ್ರ ಐಪಿಎಲ್ ಡ್ರೀಮ್

ipl dream 11 china
Published on

ನವದೆಹಲಿ: ಐಪಿಎಲ್ 13ನೇ ಆವೃತ್ತಿಯ ಶೀರ್ಷಿಕೆ ಪ್ರಾಯೋಜಕತ್ವವನ್ನು ಆನ್​ಲೈನ್ ಫ್ಯಾಂಟಸಿ ಸ್ಪೋರ್ಟ್ಸ್ ಸಂಸ್ಥೆ ಡ್ರೀಮ್1ಗೆ ವಹಿಸಿರುವುದನ್ನು ಬಿಸಿಸಿಐ ಬುಧವಾರ ಅಧಿಕೃತವಾಗಿ ಪ್ರಕಟಿಸಿದೆ. ಜತೆಗೆ, 2021 ಮತ್ತು 2022ರ ಟೂರ್ನಿಗೂ ಸೇರಿದಂತೆ ಒಟ್ಟು 3 ವರ್ಷಗಳಿಗೆ ಷರತ್ತುಬದ್ಧ ಒಪ್ಪಂದ ನಡೆಸುವ ಡ್ರೀಮ್1 ಕಂಪನಿಯ ಪ್ರಸ್ತಾಪವನ್ನು ಬಿಸಿಸಿಐ ತಿರಸ್ಕರಿಸಿದೆ. ಮುಂದಿನೆರಡು ವರ್ಷಗಳಿಗೆ ಡ್ರೀಮ್1 ಬಿಡ್ ಸಲ್ಲಿಸಿರುವ ಮೊತ್ತ ಕಡಿಮೆ ಎನಿಸಿದ ಕಾರಣದಿಂದಾಗಿ ಬಿಸಿಸಿಐ ಈ ನಿರ್ಧಾರ ತೆಗೆದುಕೊಂಡಿದೆ.

ಗರಿಷ್ಠ 222 ಕೋಟಿ ರೂ. ಮೊತ್ತದ ಬಿಡ್ ಸಲ್ಲಿಸಿದ ಡ್ರೀಮ್1ಗೆ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವ ನೀಡಿರುವುದಾಗಿ ಐಪಿಎಲ್ ಚೇರ್ಮನ್ ಬ್ರಿಜೇಶ್ ಪಟೇಲ್ ಮಂಗಳವಾರವೇ ಘೋಷಿಸಿದ್ದರು. ಆದರೆ ಬಿಸಿಸಿಐನಿಂದ ಈ ಬಗ್ಗೆ ಒಂದು ದಿನ ತಡವಾಗಿ ಅಧಿಕೃತ ಪ್ರಕಟಣೆ ಹೊರಬಿದ್ದಿದೆ. ಇದರ ನಡುವೆ 2021-22ರ ಆವೃತ್ತಿಗೂ ಒಪ್ಪಂದ ಮುಂದುವರಿಸುವ ಬಗ್ಗೆ ಬಿಸಿಸಿಐ ಮತ್ತು ಡ್ರೀಮ್1 ನಡುವೆ ಮಾತುಕತೆ ನಡೆದಿತ್ತು. ಆದರೆ ಈಗ 2020ರ ಸಾಲಿಗೆ ಮಾತ್ರ ಡ್ರೀಮ್1 ಶೀರ್ಷಿಕೆ ಪ್ರಾಯೋಜಕತ್ವ ವಹಿಸಿಕೊಳ್ಳಲಿದೆ ಎಂದು ಬಿಸಿಸಿಐ ತಿಳಿಸಿದೆ. ಡ್ರೀಮ್ 11 ಮುಂಬೈ ಮೂಲದ ಭಾರತೀಯ ಕಂಪನಿಯಾಗಿದೆ ಎಂದು ಸ್ಪಷ್ಟಪಡಿಸಿದೆ. ಡ್ರೀಮ್1 ಮುಂಬರುವ 2021 ಮತ್ತು 2022ರ ಐಪಿಎಲ್ ಆವೃತ್ತಿಗಳಿಗೆ ತಲಾ 240 ಕೋಟಿ ರೂ. ಪಾವತಿಸಲು ಸಿದ್ಧವಾಗಿರುವುದಾಗಿ ತಿಳಿಸಿತ್ತು. ವಿವೋ ಜತೆಗಿನ ವಾರ್ಷಿಕ 440 ಕೋಟಿ ರೂ. ಮೊತ್ತದ ಒಪ್ಪಂದ ಮುಂದುವರಿಯದಿದ್ದರೆ ಈ ಮೊತ್ತ ನೀಡುವುದಾಗಿ ಆಫರ್ ನೀಡಿತ್ತು. ಆದರೆ ಬಿಸಿಸಿಐ, ಈ ಮೊತ್ತ ಸಾಕಾಗದು. ಮುಂದಿನೆರಡು ವರ್ಷಗಳ ಬಿಡ್ ಮೊತ್ತವನ್ನು ಇನ್ನಷ್ಟು ಹೆಚ್ಚಿಸುವಂತೆ ಸೂಚಿಸಿತ್ತು. ಆದರೆ ಕೊನೆಗೆ ಡ್ರೀಮ್1 ಮತ್ತು ಬಿಸಿಸಿಐ ನಡುವಿನ ಮಾತುಕತೆ ಮುರಿದುಬಿದ್ದಿದ್ದು. ಹಾಲಿ ವರ್ಷದ 4 ತಿಂಗಳು, 13 ದಿನಗಳ ಒಪ್ಪಂದ ಮಾತ್ರ ಖಾತ್ರಿಯಾಗಿದೆ. ಇನ್ನು ವಿವೋ ಕಂಪನಿ 2021ರ ಶೀರ್ಷಿಕೆ ಪ್ರಾಯೋಜಕತ್ವಕ್ಕೆ ಮರಳದಿದ್ದರೆ ಬಿಸಿಸಿಐ, ಮುಂದಿನ ವರ್ಷ ಮತ್ತೆ ಹೊಸದಾಗಿ ಬಿಡ್ ಆಹ್ವಾನಿಸುವ ನಿರೀಕ್ಷೆ ಇದೆ.

ಪ್ರಾಯೋಜಕರಿಗೆ ಸಿಎಐಟಿ ವಿರೋಧ

ನವದೆಹಲಿ: ಚೀನಾ ಹೂಡಿಕೆ ಹೊಂದಿರುವ ಕಂಪನಿಗೆ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವ ನೀಡುವ ಬಿಸಿಸಿಐ ನಿರ್ಧಾರಕ್ಕೆ ಅಖಿಲ ಭಾರತ ಟ್ರೇಡರ್ಸ್ ಕಾನ್ಪೆಡರೇಷನ್ (ಸಿಎಐಟಿ) ವಿರೋಧ ವ್ಯಕ್ತಪಡಿಸಿದೆ. 2020ರ ಐಪಿಎಲ್ ಪ್ರಾಯೋಜಕತ್ವಕ್ಕೆ ಡ್ರೀಮ್1 ಅನ್ನು ಆಯ್ಕೆ ಮಾಡಿರುವ ನಿಮ್ಮ ನಿರ್ಧಾರ ನಮಗೆ ಬೇಸರ ತಂದಿದೆ. ಯಾಕೆಂದರೆ ಅದು ಚೀನಾದ ಟೆನ್​ಸೆಂಟ್ ಗ್ಲೋಬಲ್ ಕಂಪನಿಯ ಹೂಡಿಕೆ ಹೊಂದಿದೆ. ಚೀನಾ ವಿರುದ್ಧದ ಜನಾಕ್ರೋಶವನ್ನು ಮತ್ತು ಭಾವನೆಗಳಿಗೆ ಬೆಲೆ ನೀಡದೆ, ಹಿಂಬಾಗಿಲಿನ ಮೂಲಕ ಚೀನಾ ಜತೆಗಿನ ಒಪ್ಪಂದ ಮುಂದುವರಿಸಿದಂತಾಗಿದೆ ಎಂದು ಸಿಎಐಟಿ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದೆ

ಶೀರ್ಷಿಕೆ ಪ್ರಾಯೋಜಕತ್ವ ಸಾಗಿ ಬಂದ ಹಾದಿ

  • 2008-12: ಡಿಎಲ್​ಎಫ್: ವಾರ್ಷಿಕ 40 ಕೋಟಿ ರೂ.
  • 2013-15: ಪೆಪ್ಸಿ: ವಾರ್ಷಿಕ 79.2 ಕೋಟಿ ರೂ.
  • 2016-2017: ವಿವೋ: ವಾರ್ಷಿಕ 100 ಕೋಟಿ ರೂ.
  • 2018-19: ವಿವೋ: ವಾರ್ಷಿಕ 440 ಕೋಟಿ ರೂ.
  • 2020: ಡ್ರೀಮ್1: ವಾರ್ಷಿಕ 222 ಕೋಟಿ ರೂ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net