

ನವದೆಹಲಿ: ವಿಶ್ವದ ಶ್ರೀಮಂತ ಟಿ20 ಕ್ರಿಕೆಟ್ ಟೂರ್ನಿ ಎನಿಸಿದ ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) ಬ್ರ್ಯಾಂಡ್ ಮೌಲ್ಯ 2024ರಲ್ಲಿ ಶೇ. 6.3 ಏರಿಕೆ ಕಂಡಿದ್ದು, 28,420 ಕೋಟಿ ರೂ. (3.4 ಶತಕೋಟಿ ಡಾಲರ್) ತಲುಪಿದೆ. ಐಪಿಎಲ್ ವ್ಯಾಪಾರ ಮೌಲ್ಯ ಕೂಡ ಕಳೆದ ವರ್ಷಕ್ಕಿಂತ ಶೇ.6.5 ಪ್ರಗತಿಯಾಗಿದ್ದು, 1,37,075 ಕೋಟಿ ರೂ.ಗೆ (16.4 ಶತಕೋಟಿ ಡಾಲರ್) ಏರಿದೆ ಎಂದು ಅಮೆರಿಕದ ಹೂಡಿಕೆ ಬ್ಯಾಂಕ್ "ಹೌಲಿಹಾನ್ ಲೋಕಿ'ಯ ಅಧ್ಯಯನ ವರದಿ ತಿಳಿಸಿದೆ.
2022ರಲ್ಲಿ ಡಿಸ್ನಿಸ್ಟಾರ್ ಮತ್ತು ವಯಾಕಾಮ್18 ಜತೆಗೆ ಐಪಿಎಲ್ ಮಾಡಿಕೊಂಡ 48 ಸಾವಿರ ಕೋಟಿ ರೂ. ಮೊತ್ತದ ಮಾಧ್ಯಮ ಹಕ್ಕು ಒಪ್ಪಂದ ಮತ್ತು 2023ರಲ್ಲಿ ಟಾಟಾ ಜತೆಗೆ ಮಾಡಿಕೊಂಡ 2,500 ಕೋಟಿ ರೂ. ಮೊತ್ತದ ಶೀರ್ಷಿಕೆ ಪ್ರಾಯೋಜಕತ್ವ ಒಪ್ಪಂದದಿಂದಾಗಿ ಐಪಿಎಲ್ ಮೌಲ್ಯ ವೃದ್ಧಿಸಿದೆ ಎಂದು ಹೌಲಿಹಾನ್ ಲೋಕಿ ವರದಿ ತಿಳಿಸಿದೆ.
ಐಪಿಎಲ್ ತಂಡಗಳ ಪೈಕಿ ಟೂರ್ನಿಯ ಅತ್ಯಂತ ಯಶಸ್ವಿ ತಂಡವೆನಿಸಿರುವ ಚೆನ್ನೈ ಸೂಪರ್ಕಿಂಗ್ಸ್ ಅತ್ಯಧಿಕ ಬ್ರಾ$್ಯಂಡ್ ಮೌಲ್ಯ ಹೊಂದಿದೆ. ಕಳೆದ ವರ್ಷಕ್ಕಿಂತ ಶೇ.9 ಏರಿಕೆ ಕಂಡಿರುವ ಸಿಎಸ್ಕೆ ಬ್ರ್ಯಾಂಡ್ ಮೌಲ್ಯ, 1,930 ಕೋಟಿ ರೂ. ತಲುಪಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೂರ್ನಿಯ 2ನೇ ಗರಿಷ್ಠ ಬ್ರಾ$್ಯಂಡ್ ಮೌಲ್ಯ (1,896 ಕೋಟಿ ರೂ.) ಹೊಂದಿರುವ ತಂಡವಾಗಿದ್ದು, 2023ರಿಂದ ಶೇ.16.4 ಪ್ರಗತಿ ಕಂಡಿದೆ.
2024ರ ಆವೃತ್ತಿಯ ಚಾಂಪಿಯನ್ ಕೋಲ್ಕತ ನೈಟ್ರೈಡರ್ಸ್ ತಂಡ ಕಳೆದ ವರ್ಷಕ್ಕಿಂತ ಅತ್ಯಧಿಕ ಮೌಲ್ಯ ಪ್ರಗತಿ ಕಂಡಿರುವ ತಂಡವಾಗಿದೆ. ಕೆಕೆಆರ್ ಶೇ.19.30 ಮೌಲ್ಯ ಪ್ರಗತಿ ಕಂಡಿದ್ದು, 1,805 ಕೋಟಿ ರೂ. ತಲುಪಿದೆ. 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ (1,704 ಕೋಟಿ ರೂ.) 4ನೇ ಸ್ಥಾನದಲ್ಲಿದೆ.
ಐಪಿಎಲ್ ತಂಡಗಳು ಟೂರ್ನಿಯ ಪ್ರಸಾರ ಹಕ್ಕು, ಪ್ರಯೋಜಕತ್ವ ಹಕ್ಕು ಮಾರಾಟ ಮೊತ್ತದ ಪಾಲಿನ ಜತೆಗೆ ಸ್ವಂತ ಪ್ರಾಯೋಜಕತ್ವ ಒಪ್ಪಂದಗಳಿಂದ 42ರಿಂದ 100 ಕೋಟಿ ರೂ.ವರೆಗೆ ಆದಾಯ ಗಳಿಸುತ್ತಿವೆ. ಕತಾರ್ ಏರ್ವೇಸ್ ಜತೆಗೆ ಆರ್ಸಿಬಿ ತಂಡ 3 ವರ್ಷಗಳಿಗೆ 75 ಕೋಟಿ ರೂ. ಮೊತ್ತದ ಒಪ್ಪಂದ ಹೊಂದಿದೆ ಎಂದು ವರದಿ ತಿಳಿಸಿದೆ.
ಐಪಿಎಲ್ ತಂಡಗಳ ಬ್ರ್ಯಾಂಡ್ ಮೌಲ್ಯ
ಚೆನ್ನೈ ಸೂಪರ್ಕಿಂಗ್ಸ್: 1,930 ಕೋಟಿ ರೂ.
ಆರ್ಸಿಬಿ (ಬೆಂಗಳೂರು): 1,896 ಕೋಟಿ ರೂ.
ಕೋಲ್ಕತ ನೈಟ್ರೈಡರ್ಸ್: 1,805 ಕೋಟಿ ರೂ.
ಮುಂಬೈ ಇಂಡಿಯನ್ಸ್: 1,704 ಕೋಟಿ ರೂ.
ರಾಜಸ್ಥಾನ ರಾಯಲ್ಸ್: 1,111 ಕೋಟಿ ರೂ.
ಸನ್ರೈಸರ್ಸ್ ಹೈದರಾಬಾದ್: 1,103 ಕೋಟಿ ರೂ.
ಡೆಲ್ಲಿ ಕ್ಯಾಪಿಟಲ್ಸ್: 1,094 ಕೋಟಿ ರೂ.
ಗುಜರಾತ್ ಟೈಟಾನ್ಸ್: 1,036 ಕೋಟಿ ರೂ.
ಪಂಜಾಬ್ ಕಿಂಗ್ಸ್: 844 ಕೋಟಿ ರೂ.
ಲಖನೌ ಸೂಪರ್ಜೈಂಟ್ಸ್: 760 ಕೋಟಿ ರೂ.