

ಬೆಂಗಳೂರು: ದಾಖಲೆಗಳಿರುವುದೇ ಮುರಿಯುವುದಕ್ಕೆ ಎಂಬುದು ಕ್ರೀಡೆಯಲ್ಲಿ ಸಾಮಾನ್ಯವಾಗಿ ಕೇಳಿಬರುವ ಮಾತು. ಅದರಲ್ಲೂ ಐಪಿಎಲ್ನಂಥ ಶ್ರೀಮಂತ, ರೋಚಕ ಕ್ರಿಕೆಟ್ ಲೀಗ್ನಲ್ಲಿ ಯಾವ ದಾಖಲೆಗಳೂ ಸುರಕ್ಷಿತವಲ್ಲ. ಅದೇ ರೀತಿ ಯಾವ ದಾಖಲೆಯೂ ಅಸಾಧ್ಯವೂ ಅಲ್ಲ. ಆದರೂ ಐಪಿಎಲ್ನಲ್ಲಿ ಕೆಲವು ದಾಖಲೆಗಳು ಇನ್ನೂ ಕ್ರಿಕೆಟಿಗರ ಕೈಗೆಟುಕಿಲ್ಲ. ಈ ಸಲವಾದರೂ ಆ ದಾಖಲೆಗಳ ಕನಸು ನನಸಾಗಬಹುದೇ ಎಂಬ ನಿರೀಕ್ಷೆಯೊಂದಿಗೆ ಅಂಥ ಕೆಲ ವಿಶಿಷ್ಟ ದಾಖಲೆಗಳ ಮೆಲುಕು ಇಲ್ಲಿದೆ...
300 ಪ್ಲಸ್ ಮೊತ್ತದ ನಿರೀಕ್ಷೆ
ಟಿ20 ಕ್ರಿಕೆಟ್ನಲ್ಲಿ 300ಕ್ಕಿಂತ ಅಧಿಕ ಮೊತ್ತ ಗಳಿಸಲು ಸಾಧ್ಯ ಎಂದು ಈಗಾಗಲೆ ಕೆಲ ತಂಡಗಳು ಸಾಬೀತುಪಡಿಸಿವೆ. ಆದರೆ ಐಪಿಎಲ್ನಲ್ಲಿ ಇದುವರೆಗೆ ಇದು ಸಾಧ್ಯವಾಗಿಲ್ಲ. ಆದರೆ ಈ ಬಾರಿ 300ಕ್ಕಿಂತ ಹೆಚ್ಚಿನ ಮೊತ್ತ ದಾಖಲಾಗುವ ನಿರೀಕ್ಷೆ ಹೆಚ್ಚಿದೆ. ಕಳೆದ ಸಲವೇ 8 ಬಾರಿ 250ಕ್ಕೂ ಅಧಿಕ ಮೊತ್ತ ದಾಖಲಾಗಿತ್ತು. ಇಂಪ್ಯಾಕ್ಟ್ ಪ್ಲೇಯರ್ನ ಇಂಪ್ಯಾಕ್ಟ್ ಇದಕ್ಕೆ ಕಾರಣವಾಗಿತ್ತು. ಈ ಪೈಕಿ ಸನ್ರೈಸರ್ಸ್ ತಂಡ ಆರ್ಸಿಬಿ ವಿರುದ್ಧ ಬೆಂಗಳೂರಿನಲ್ಲಿ 3 ವಿಕೆಟ್ಗೆ 287 ರನ್ ಗಳಿಸಿದ್ದು ಗರಿಷ್ಠವೆನಿಸಿತ್ತು. ಕಳೆದ ಅಕ್ಟೋಬರ್ನಲ್ಲಿ ಭಾರತ ತಂಡವೂ ಹೈದರಾಬಾದ್ನಲ್ಲಿ ಬಾಂಗ್ಲಾದೇಶ ವಿರುದ್ಧ 6 ವಿಕೆಟ್ಗೆ 297 ರನ್ ಗಳಿಸಿ 300ರ ಸನಿಹ ತಲುಪಿತ್ತು. ಹೀಗಾಗಿ ಈ ಬಾರಿ ಐಪಿಎಲ್ನಲ್ಲಿ 300ರ ಕನಸು ನನಸಾಗುವ ನಿರೀಕ್ಷೆ ಹೆಚ್ಚಿದೆ.
ಒಂದೇ ಆವೃತ್ತಿಯಲ್ಲಿ ಸಾವಿರ ರನ್
ಐಪಿಎಲ್ ಆವೃತ್ತಿಯೊಂದರಲ್ಲೇ ಸಾವಿರ ರನ್ ಸಿಡಿಸಿದ ಸಾಧನೆಯನ್ನು ಈ ಸಲ ಯಾರಾದರೂ ಸಾಧಿಸುವರೇ ಎಂಬ ಕುತೂಹಲವಿದೆ. 2016ರ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ 4 ಶತಕಗಳ ಸಹಿತ 973 ರನ್ ಸಿಡಿಸಿದ್ದು, ಐಪಿಎಲ್ ಆವೃತ್ತಿಯೊಂದರ ಸರ್ವಾಧಿಕ ರನ್ಗಳಿಕೆ ಎನಿಸಿದೆ. ಈ ಸಲ ಕೆಲ ಬ್ಯಾಟರ್ಗಳು ಭರ್ಜರಿ ಫಾರ್ಮ್ನಲ್ಲಿದ್ದು, ಈ ದಾಖಲೆ ಮುರಿಯುವ ನಿರೀಕ್ಷೆ ಇಡಬಹುದಾಗಿದೆ.
ಓವರ್ಗೆ 6 ಸಿಕ್ಸರ್!
ಟಿ20 ಕ್ರಿಕೆಟ್ನಲ್ಲಿ ಈಗಾಗಲೆ ಯುವರಾಜ್ ಸಿಂಗ್ ಸಹಿತ ಕೆಲ ಬ್ಯಾಟರ್ಗಳು ಓವರ್ ಒಂದರ ಎಲ್ಲ 6 ಎಸೆತಗಳಲ್ಲಿ ಸಿಕ್ಸರ್ ಸಿಡಿಸಿದ ಸಾಧನೆ ಮಾಡಿದ್ದಾರೆ. ಆದರೆ ಐಪಿಎಲ್ನಲ್ಲಿ ಇದು ಇನ್ನೂ ಸಾಧ್ಯವಾಗಿಲ್ಲ. ಸತತ 5 ಸಿಕ್ಸರ್ ಸಿಡಿಸಿದ್ದೇ ಗರಿಷ್ಠವೆನಿಸಿದೆ. 2012ರಲ್ಲಿ ಕ್ರಿಸ್ ಗೇಲ್ ಮತ್ತು 2023ರಲ್ಲಿ ರಿಂಕು ಸಿಂಗ್ ಈ ಸಾಧನೆ ಮಾಡಿದ್ದರು. 2021ರಲ್ಲಿ ರವೀಂದ್ರ ಜಡೇಜಾ ಕೂಡ ಓವರ್ ಒಂದರಲ್ಲಿ 5 ಸಿಕ್ಸರ್ ಸಿಡಿಸಿದ್ದರು. ಈ ಬಾರಿಯಾದರೂ ಯಾರಾದರೂ ಸತತ 6 ಸಿಕ್ಸರ್ ಸಿಡಿಸಬಹುದೇ ಎಂಬ ಕೌತುಕ ಹರಡಿದೆ.
ಹೊಸ ಚಾಂಪಿಯನ್
ಐಪಿಎಲ್ನಲ್ಲಿ ಮೊದಲ ಆವೃತ್ತಿಯಿಂದಲೂ ಸ್ಪರ್ಧೆಯಲ್ಲಿರುವ 3 ತಂಡಗಳಾದ ಆರ್ಸಿಬಿ, ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಇದುವರೆಗೆ ಒಮ್ಮೆಯೂ ಪ್ರಶಸ್ತಿ ಗೆಲುವಿನ ಸಂಭ್ರಮ ಕಂಡಿಲ್ಲ. ಮೂರೂ ತಂಡಗಳು ಕನಿಷ್ಠ ಒಮ್ಮೆಯಾದರೂ ಫೈನಲ್ಗೇರಿದ್ದರೂ, ರನ್ನರ್ಅಪ್ಗೆ ತೃಪ್ತಿಪಟ್ಟಿದ್ದವು. ಈ ಸಲವಾದರೂ ಈ ಪೈಕಿ ಒಂದು ತಂಡದ್ದಾದರೂ ಶಾಪ ವಿಮೋಚನೆ ಆಗಿ ಚೊಚ್ಚಲ ಚಾಂಪಿಯನ್ ಪಟ್ಟ ಒಲಿಯಬಹುದೇ ಎಂದು ಕಾದುನೋಡಬೇಕಿದೆ.
ಕ್ರಿಸ್ ಗೇಲ್ ದಾಖಲೆಗಳ ಪತನ
ವೆಸ್ಟ್ ಇಂಡೀಸ್ನ ಸ್ಫೋಟಕ ಬ್ಯಾಟರ್ನಲ್ಲಿ ಐಪಿಎಲ್ನಲ್ಲಿ ದಶಕದ ಹಿಂದೆ ದಾಖಲಿಸಿರುವ ಕೆಲ ದಾಖಲೆಗಳು ಇನ್ನೂ ಅಬೇಧ್ಯವಾಗಿ ಉಳಿದಿವೆ. 2013ರ ಐಪಿಎಲ್ನಲ್ಲಿ ಆರ್ಸಿಬಿ ಪರ ಕ್ರಿಸ್ ಗೇಲ್ ಸರ್ವಾಧಿಕ ಅಜೇಯ 175 ರನ್ ಸಿಡಿಸಿದ್ದರು. ಅದೇ ಇನಿಂಗ್ಸ್ನಲ್ಲಿ ಅವರು ಗರಿಷ್ಠ 17 ಸಿಕ್ಸರ್ಗಳನ್ನೂ ಬಾರಿಸಿದ್ದರು. ಈ ಬಾರಿ ಯಾರಾದರೂ ಬ್ಯಾಟರ್ ಗೇಲ್ ದಾಖಲೆ ಮುರಿದು ದ್ವಿಶತಕ ಪೂರೈಸಬಹುದೇ ಮತ್ತು 20 ಸಿಕ್ಸರ್ಗಳ ಸಾಧನೆ ತೋರಬಹುದೇ ಎಂಬ ಕುತೂಹಲವಿದೆ.
ಹ್ಯಾಟ್ರಿಕ್ ಶತಕ!
ಐಪಿಎಲ್ನಲ್ಲಿ ಇದುವರೆಗೆ ನಾಲ್ವರು ಬ್ಯಾಟರ್ಗಳು ಸತತ 2 ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಅವರೆಂದರೆ ವಿರಾಟ್ ಕೊಹ್ಲಿ (2023), ಜೋಸ್ ಬಟ್ಲರ್ (2022), ಶಿಖರ್ ಧವನ್ (2020) ಮತ್ತು ಶುಭಮಾನ್ ಗಿಲ್ (2023). ಈ ಬಾರಿ ಯಾರಾದರೂ ಈ ದಾಖಲೆಯನ್ನು ಮೀರಿಸಿ ಹ್ಯಾಟ್ರಿಕ್ ಶತಕ ಸಿಡಿಸುವಲ್ಲಿ ಯಶಸ್ವಿಯಾಗಬಹುದೇ ಎಂಬ ಕುತೂಹಲವಿದೆ.