

ಚೆನ್ನೈ: ರಾಜ್ಯ ಕ್ರಿಕೆಟ್ ತಂಡದ ಪರ ಒಂದೂ ಪಂದ್ಯ ಆಡುವ ಅವಕಾಶ ಪಡೆಯದ ನಡುವೆಯೂ ಐಪಿಎಲ್ನಲ್ಲಿ ಅವಕಾಶ ಪಡೆದ 24 ವರ್ಷದ ಎಡಗೈ ರಿಸ್ಟ್ ಸ್ಪಿನ್ನರ್ ವಿಘ್ನೇಶ್ ಪುಥುರ್, ಮುಂಬೈ ಇಂಡಿಯನ್ಸ್ ಪರ ಮೊದಲ ಪಂದ್ಯದಲ್ಲೇ 3 ವಿಕೆಟ್ ಕಬಳಿಸುವ ಮೂಲಕ ವಿಖ್ಯಾತಿ ಗಳಿಸಿದ್ದಾರೆ. 156 ರನ್ ಗುರಿಯನ್ನು ಸುಲಭವಾಗಿ ತಲುಪುವ ನಿರೀಕ್ಷೆಯಲ್ಲಿದ್ದ ಸಿಎಸ್ಕೆ ಹಾದಿಗೆ ವಿಘ್ನ ತರುವ ಭೀತಿಯನ್ನು ಅವರು ಹುಟ್ಟಿಸಿದ್ದರು. ಅಲ್ಲದೆ ಪಂದ್ಯದ ಬಳಿಕ ದಿಗ್ಗಜ ಎಂಎಸ್ ಧೋನಿ ಪ್ರಶಂಸಿಸಿದ ಚಿತ್ರ-ವಿಡಿಯೋ ವೈರಲ್ ಆಗುವುದರೊಂದಿಗೆ ವಿಘ್ನೇಶ್ ಕ್ರಿಕೆಟ್ ಪ್ರೇಮಿಗಳ ಹೃದಯ ಗೆದ್ದಿದ್ದಾರೆ.
ಕೇರಳದ ಮಲಪು$್ಪರಂನ ಆಟೋ ಚಾಲಕ ಸುನೀಲ್ ಕುಮಾರ್ ಮತ್ತು ಗೃಹಿಣಿ ಬಿಂದು ದಂಪತಿಯ ಪುತ್ರನಾಗಿರುವ ವಿಘ್ನೇಶ್, ಕ್ಯಾಲಿಕಟ್ ವಿಶ್ವವಿದ್ಯಾಲಯದ ಎಂಎ (ಇಂಗ್ಲಿಷ್ ಸಾಹಿತ್ಯ) ವಿದ್ಯಾರ್ಥಿಯಾಗಿದ್ದಾರೆ. ಪ್ರಥಮ ದರ್ಜೆ ಪಂದ್ಯವನ್ನು ಆಡಿರದ ವಿಘ್ನೇಶ್, ಕೇರಳ ಕ್ರಿಕೆಟ್ ಲೀಗ್ ಮತ್ತು ತಮಿಳುನಾಡು ಪ್ರೀಮಿಯರ್ ಲೀಗ್ನಂಥ ರಾಜ್ಯಮಟ್ಟದ ಟಿ20 ಟೂರ್ನಿಗಳಲ್ಲಿ ಆಡಿದ ಅನುಭವವನ್ನಷ್ಟೇ ಹೊಂದಿದ್ದರು.
ಕಳೆದ ಮೆಗಾ ಹರಾಜಿನಲ್ಲಿ ಮುಂಬೈ ತಂಡ ಮೂಲಬೆಲೆ 30 ಲಕ್ಷ ರೂ.ಗೆ ವಿಘ್ನೇಶ್ರನ್ನು ಖರೀದಿಸಿದ ಬಳಿಕ ದ. ಆಫ್ರಿಕಾದ ಎಸ್ಎ20 ಲೀಗ್ ವೇಳೆ ಎಂಐ ಕೇಪ್ಟೌನ್ ನಾಯಕ ಹಾಗೂ ಸ್ಪಿನ್ ಮಾಂತ್ರಿಕ ರಶೀದ್ ಖಾನ್ ಜತೆ ನೆಟ್ಸ್ನಲ್ಲಿ ಬೌಲಿಂಗ್ ಮಾಡುವ ಮತ್ತು ಟಿಪ್ಸ್ ಪಡೆಯುವ ಅವಕಾಶ ಕಲ್ಪಿಸಲಾಗಿತ್ತು. ಅಲ್ಲದೆ ನೆಟ್ಸ್ನಲ್ಲಿ ರೋಹಿತ್, ಸೂರ್ಯಕುಮಾರ್, ತಿಲಕ್ ವರ್ಮರಂಥ ಬ್ಯಾಟರ್ಗಳು ವಿಘ್ನೇಶ್ ಎಸೆತಗಳನ್ನು ಎದುರಿಸಲು ಕಷ್ಟಪಟ್ಟಿದ್ದರಿಂದ ಮುಂಬೈ ಮೊದಲ ಪಂದ್ಯದಲ್ಲೇ ಆಡಿಸುವ ಸಾಹಸಕ್ಕೆ ಕೈಹಾಕಿ ಐಪಿಎಲ್ಗೆ ಹೊಸ ಪ್ರತಿಭೆಯೊಂದನ್ನು ಪರಿಚಯಿಸಿದೆ.