

IPL 2025: ನಿನ್ನೆ (ಜೂ.01) ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಕ್ವಾಲಿಫೈಯರ್-2 ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಪಡೆ ಭರ್ಜರಿ ಗೆಲುವು ದಾಖಲಿಸಿ, ಇದೀಗ ನೇರವಾಗಿ ಫೈನಲ್ಗೆ ಲಗ್ಗೆಯಿಟ್ಟಿದೆ. ಈ ಮೂಲಕ ಫೈನಲ್ನಲ್ಲಿ ಆರ್ಸಿಬಿಯನ್ನು ಎದುರಿಸುವ ಪಂಜಾಬ್ ಕಿಂಗ್ಸ್, 18ನೇ ಆವೃತ್ತಿಯ ಟ್ರೋಫಿಗಾಗಿ ಬಿರುಸಿನ ಪೈಪೋಟಿಗೆ ಎದುರುನೋಡುತ್ತಿದೆ.
20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಮುಂಬೈ ಇಂಡಿಯನ್ಸ್ 203 ರನ್ ಕಲೆಹಾಕಿತು. ಈ ಸವಾಲಿನ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ಗೆ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ( ಅಜೇಯ 87 ರನ್, 41 ಎಸೆತ, 5 ಬೌಂಡರಿ, 8 ಸಿಕ್ಸರ್) ಮತ್ತು ನೆಹಾಲ್ ವಾಧೇರಾ (48 ರನ್, 29 ಎಸೆತ, 4 ಬೌಂಡರಿ, 2 ಸಿಕ್ಸರ್) ಅವರ ಸ್ಫೋಟಕ ಇನ್ನಿಂಗ್ಸ್ ಭರ್ಜರಿ ಗೆಲುವಿಗೆ ದಾರಿ ಮಾಡಿಕೊಟ್ಟಿತು. ಕೇವಲ 19 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಈ ಬೃಹತ್ ಗುರಿಯನ್ನು ತಲುಪುವಲ್ಲಿ ಶ್ರೇಯಸ್ ಪಡೆ ಯಶಸ್ವಿಯಾಯಿತು.
ತಡರಾತ್ರಿ ಮುಗಿದ ಪಂದ್ಯದ ಬಳಿಕ ಪಂಜಾಬ್ ಕಿಂಗ್ಸ್ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಮತ್ತು ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯಗೆ ಬಿಸಿಸಿಐ ಭಾರಿ ದಂಡ ವಿಧಿಸಿದೆ. ಎರಡೂ ತಂಡಗಳು ಮಂದಗತಿಯ ಓವರ್ ರೇಟ್ ದಾಖಲಿಸಿದ್ದೇ ಈ ದಂಡಕ್ಕೆ ಮುಖ್ಯ ಕಾರಣ. 18ನೇ ಆವೃತ್ತಿಯಲ್ಲಿ ಇದು 2ನೇ ಸ್ಲೋ ಓವರ್ ರೇಟ್ ಆದ ಹಿನ್ನೆಲೆ ಶ್ರೇಯಸ್ ಅಯ್ಯರ್ಗೆ 24 ರೂ. ದಂಡ ವಿಧಿಸಲಾಗಿದ್ದು, ಇಂಪ್ಯಾಕ್ಟ್ ಪ್ಲೇಯರ್ ಸೇರಿದಂತೆ ತಂಡದ ಪರ ಆಡಿದ ಎಲ್ಲಾ ಆಟಗಾರರಿಗೆ ತಲಾ 6 ಲಕ್ಷ ರೂ. ಅಥವಾ ಪಂದ್ಯ ಶುಲ್ಕದ ಶೇ.25ರಷ್ಟು ದಂಡ ವಿಧಿಸಲಾಗಿದೆ.
ಇನ್ನು ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯಗೆ 30 ಲಕ್ಷ ರೂ. ದಂಡ ವಿಧಿಸಲಾಗಿದ್ದು, ಇಂಪ್ಯಾಕ್ಟ್ ಆಟಗಾರ ಸೇರಿದಂತೆ ಉಳಿದ ಆಟಗಾರರಿಗೆ ತಲಾ 12 ಲಕ್ಷ ರೂ. ಅಥವಾ ಪಂದ್ಯ ಶುಲ್ಕದ ಶೇ.50ರಷ್ಟು ಭಾರೀ ದಂಡವನ್ನು ಹಾಕಲಾಗಿದೆ. ಎಂಐಗೆ ಏಕೆ ಹೆಚ್ಚಿನ ದಂಡ ಎಂಬ ಪ್ರಶ್ನೆಗೆ ಕಾರಣ, ಈ ಆವೃತ್ತಿಯಲ್ಲಿ ಮುಂಬೈ ದಾಖಲಿಸಿದ ಮೂರನೇ ಮಂದಗತಿಯ ಓವರ್ ರೇಟ್ ಇದಾಗಿದೆ. ಈ ಕುರಿತು ಬಿಸಿಸಿಐ ಕೂಡ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ,(ಏಜೆನ್ಸೀಸ್).