ಮಿಚೆಲ್ ಮಾರ್ಷ್-ಪೂರನ್ ಅಬ್ಬರ: ಗೆಲುವಿನ ಖಾತೆ ತೆರೆದ ಲಖನೌ ಸೂಪರ್ ಜೈಂಟ್ಸ್

New Project
Published on

ಹೈದರಾಬಾದ್: ಮೆಗಾ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿ ಕೊನೇ ಕ್ಷಣದಲ್ಲಿ ಬದಲಿಗನಾಗಿ ಸೇರ್ಪಡೆಯಾಗಿರುವ ಆಲ್ರೌಂಡರ್ ಶಾರ್ದೂಲ್ ಠಾಕೂರ್ (34ಕ್ಕೆ4 ) ಬಿಗಿ ದಾಳಿ ಹಾಗೂ ಎಡಗೈ ಬ್ಯಾಟರ್ ನಿಕೋಲಸ್ ಪೂರನ್ (70 ರನ್, 26 ಎಸೆತ, 6 ಬೌಂಡರಿ, 6 ಸಿಕ್ಸರ್) ಅಬ್ಬರದ ಬ್ಯಾಟಿಂಗ್ ನೆರವಿನಿಂದ ಲಖನೌ ಸೂಪರ್‌ಜೈಂಟ್ಸ್ ತಂಡ ಐಪಿಎಲ್ 18ನೇ ಆವೃತ್ತಿಯಲ್ಲಿ ಹಾಲಿ ರನ್ನರ್ ಅಪ್ ಸನ್‌ರೈಸರ್ಸ್‌ ಹೈದರಾಬಾದ್ ಎದುರು 5 ವಿಕೆಟ್‌ಗಳ ಗೆಲುವು ದಾಖಲಿಸಿದೆ. ಇದರೊಂದಿಗೆ ರಿಷಭ್ ಪಂತ್ ಸಾರಥ್ಯದಲ್ಲಿ ಲಖನೌ ಮೊದಲ ಗೆಲುವು ಒಲಿಸಿಕೊಂಡಿದೆ.

ಆರ್‌ಜಿಐ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಲಖನೌ ನಾಯಕ ರಿಷಭ್ ಪಂತ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್‌ಗೆ ಇಳಿದ ಸನ್‌ರೈಸರ್ಸ್‌ ಆರಂಭಿಕ ಆಘಾತ ಎದುರಿಸಿತು. ಎಡಗೈ ಬ್ಯಾಟರ್ ಟ್ರಾವಿಸ್ ಹೆಡ್ (47 ರನ್, 28 ಎಸೆತ, 5 ಬೌಂಡರಿ, 3 ಸಿಕ್ಸರ್) ಬಿರುಸಿನ ಆರಂಭ ಒದಗಿಸಿದರೆ, ನಿತೀಶ್ ಕುಮಾರ್ ರೆಡ್ಡಿ (32 ರನ್, 28 ಎಸೆತ, 2 ಬೌಂಡರಿ) ಹಾಗೂ ಅನಿಕೇತ್ ವರ್ಮ (36 ರನ್, 13 ಎಸೆತ, 5 ಸಿಕ್ಸರ್) ಸ್ಲಾಗ್ ಓವರ್‌ಗಳಲ್ಲಿ ನಡೆಸಿದ ಉಪಯುಕ್ತ ಬ್ಯಾಟಿಂಗ್ ನೆರವಿನಿಂದ ಸನ್‌ರೈಸರ್ಸ್‌ 9 ವಿಕೆಟ್‌ಗೆ 190 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. ಪ್ರತಿಯಾಗಿ ಆರಂಭಿಕ ಮಿಚೆಲ್ ಮಾರ್ಷ್ (52 ರನ್, 31 ಎಸೆತ, 7 ಬೌಂಡರಿ, 2 ಸಿಕ್ಸರ್) ಮತ್ತು ಪೂರನ್ ಹಾಕಿಕೊಟ್ಟ ಅಡಿಪಾಯದ ನೆರವಿನಿಂದ ಲಖನೌ 16.1 ಓವರ್‌ಗಳಲ್ಲಿ 5 ವಿಕೆಟ್‌ಗೆ 193 ರನ್‌ಗಳಿಸಿ ಅಂಕಪಟ್ಟಿಯಲ್ಲಿ ಖಾತೆ ತೆರೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net