IPL-2025: ಇಂದು ಕೆಕೆಆರ್​-ಆರ್​ಸಿಬಿ ಮೊದಲ ಫೈಟ್​; ಕೋಲ್ಕತದಲ್ಲಿ ಐಪಿಎಲ್​ 18ನೇ ಆವೃತ್ತಿಗೆ ಚಾಲನೆ

web ipl rcb vs kkr
Published on

ಕೋಲ್ಕತ: ಐಪಿಎಲ್​ ಟೂರ್ನಿ 18 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಜನ್ಮತಾಳಿದಾಗ ಮುಖಾಮುಖಿಯಾಗಿದ್ದ ತಂಡಗಳಾದ ಕೋಲ್ಕತ ನೈಟ್​ರೈಡರ್ಸ್​ ಮತ್ತು ಆರ್​ಸಿಬಿ ತಂಡಗಳು ಈ ಬಾರಿ ಮತ್ತೊಮ್ಮೆ ಉದ್ಘಾಟನಾ ಪಂದ್ಯದಲ್ಲೇ ಪರಸ್ಪರ ಸೆಣಸುತ್ತಿರುವುದು ವಿಶೇಷವೆನಿಸಿದೆ. ಕೋಲ್ಕತದ ಈಡನ್​ ಗಾರ್ಡನ್ಸ್​ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ ಪಂದ್ಯದಲ್ಲಿ ಕೆಕೆಆರ್​ ಹಾಲಿ ಚಾಂಪಿಯನ್​ ಆಗಿ ಪ್ರಶಸ್ತಿ ಉಳಿಸಿಕೊಳ್ಳುವ ಧ್ಯೇಯದೊಂದಿಗೆ ಕಣಕ್ಕಿಳಿಯುತ್ತಿದ್ದರೆ, ಆರ್​ಸಿಬಿ 2008ರ ಚೊಚ್ಚಲ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಳ್ಳುವ ಹಂಬಲದಲ್ಲಿದೆ.

ಕೆಕೆಆರ್​ ಇದುವರೆಗೆ 3 ಬಾರಿ ಪ್ರಶಸ್ತಿ ಗೆದ್ದಿದ್ದರೆ, ಆರ್​ಸಿಬಿ ತಂಡ ಇದುವರೆಗೆ ಅಭಿಮಾನಿಗಳ ಹೃದಯವನ್ನಷ್ಟೇ ಗೆಲ್ಲುತ್ತ ಬಂದಿದೆ. ಕೆಕೆಆರ್​ ಇದುವರೆಗೆ ಒಮ್ಮೆಯೂ ಸತತ 2 ಬಾರಿ ಪ್ರಶಸ್ತಿ ಗೆದ್ದಿಲ್ಲ. ಹೀಗಾಗಿ ಅದನ್ನು ಈ ಬಾರಿ ಸಾಧ್ಯವಾಗಿಸುವ ತವಕದಲ್ಲಿದ್ದರೆ, ಆರ್​ಸಿಬಿ ತಂಡ ಅಭಿಮಾನಿಗಳ 'ಈ ಸಲ ಕಪ್​ ನಮ್ದೇ' ಘೋಷವಾಕ್ಯವನ್ನು ನನಸಾಗಿಸುವ ಕನಸಿನಲ್ಲಿದೆ. ಅನುಭವಿ ಅಜಿಂಕ್ಯ ರಹಾನೆ ಮತ್ತು ಹೊಸ ನಾಯಕ ರಜತ್​ ಪಾಟೀದಾರ್​ ನಾಯಕತ್ವಕ್ಕೆ ಮೊದಲ ಪಂದ್ಯದಲ್ಲೇ ದೊಡ್ಡ ಸವಾಲು ಎದುರಾಗಲಿದೆ.

ಚಾಂಪಿಯನ್ಸ್​ ಟ್ರೋಫಿಯಲ್ಲಿ ಮಿಂಚಿದ್ದ ಮಿಸ್ಟರಿ ಸ್ಪಿನ್ನರ್​ ವರುಣ್​ ಚಕ್ರವರ್ತಿ ಮತ್ತು ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ನಡುವಿನ ಮುಖಾಮುಖಿ ಕುತೂಹಲ ಕೆರಳಿಸಿದೆ. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದ ಬಳಿಕ ಮೊದಲ ಬಾರಿ ಐಪಿಎಲ್​ನಲ್ಲಿ ಆಡಲಿರುವ ಕೊಹ್ಲಿ, ನೆಟ್ಸ್​ನಲ್ಲಿ ಸ್ಪಿನ್ನರ್​ಗಳ ಎದುರು ಕಠಿಣ ಬ್ಯಾಟಿಂಗ್​ ಅಭ್ಯಾಸ ನಡೆಸಿದ್ದಾರೆ.

ಕಳೆದ ಆವೃತ್ತಿಯಲ್ಲಿ ಕೆಕೆಆರ್​ ತಂಡದಲ್ಲಿದ್ದ ಫಿಲ್​ ಸಾಲ್ಟ್​ ಮತ್ತು ಸ್ಪಿನ್ನರ್​ ಸುಯಶ್​ ಶರ್ಮ ಈ ಬಾರಿ ಆರ್​ಸಿಬಿ ಪರ ಕಣಕ್ಕಿಳಿಯಲಿದ್ದಾರೆ. ಸ್ಪಿನ್​ ಸ್ನೇಹಿ ಪಿಚ್​ ಹೊಂದಿರುವ ಈಡನ್​ ಗಾರ್ಡನ್ಸ್​ನಲ್ಲಿ ಸುಯಶ್​ ಅನುಭವ ಆರ್​ಸಿಬಿಗೆ ನೆರವಾಗಲಿದೆ.

*ಮುಖಾಮುಖಿ: 34

*ಕೆಕೆಆರ್​: 20

*ಆರ್​ಸಿಬಿ: 14

*ಆರಂಭ: ರಾತ್ರಿ 7.30

*ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋ ಹಾಟ್​ಸ್ಟಾರ್​.

*ಆವೃತ್ತಿ: 18

*ತಂಡ: 10

*ದಿನ: 65

*ಪಂದ್ಯ: 74

*ತಾಣ: 13

ಕಾಡುತ್ತಿದೆ ಮಳೆ ಭೀತಿ

ಈ ಬಾರಿ ಐಪಿಎಲ್​ ಟೂರ್ನಿಯ ಆರಂಭದಲ್ಲೇ ಮಳೆ ಭೀತಿ ಎದುರಾಗಿದೆ. ಕೆಕೆಆರ್​&ಆರ್​ಸಿಬಿ ನಡುವಿನ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡಚಣೆ ಭೀತಿ ಇದೆ. ಪಶ್ಚಿಮ ಬಂಗಾಳದ ಹವಾಮಾನ ಇಲಾಖೆ ಈಗಾಗಲೆ, ಮಿಂಚು&ಗುಡುಗು ಮತ್ತು ಬಲವಾದ ಗಾಳಿಯೊಂದಿಗೆ ಮಳೆ ಸುರಿಯುವ ಬಗ್ಗೆ ಆರೆಂಜ್​ ಅರ್ಲಟ್​ ನೀಡಿದ್ದು, ಶನಿವಾರ ರಾತ್ರಿ ಪಂದ್ಯದ ಸಮಯದಲ್ಲಿ ಮಳೆ ಕಾಡುವ ಸಾಧ್ಯತೆ ಶೇ.50ರಷ್ಟಿದೆ ಎನ್ನಲಾಗಿದೆ. ಕೋಲ್ಕತದಲ್ಲಿ ಕಳೆದ ಕೆಲದಿನಗಳಿಂದ ಮಳೆ ಸುರಿಯತ್ತಿದ್ದು, ಕೆಕೆಆರ್​ ತಂಡದ ಆಂತರಿಕ ಅಭ್ಯಾಸ ಪಂದ್ಯವೂ ಇದೇ ಕಾರಣದಿಂದ ರದ್ದುಗೊಂಡಿತ್ತು. ಬುಧವಾರ& ಗುರುವಾರ ಸಾಧಾರಣ ಮಳೆ ಸುರಿದ ನಡುವೆಯೂ ಉಭಯ ತಂಡಗಳು ಅಭ್ಯಾಸ ನಡೆಸಿದ್ದವು. ಆದರೆ, ಶುಕ್ರವಾರ ಸಂಜೆ ಕೋಲ್ಕತದಲ್ಲಿ ಸುರಿದ ಭಾರಿ ಮಳೆಯಿಂದಾಗಿ, ಉದ್ಘಾಟನಾ ಪಂದ್ಯಕ್ಕೆ ಮುನ್ನಾದಿನ ಉಭಯ ತಂಡಗಳಿಗೂ ಅಭ್ಯಾಸ ನಡೆಸಲು ಸಾಧ್ಯವಾಗಲಿಲ್ಲ. ಶನಿವಾರವೂ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ. ಫಲಿತಾಂಶ ನಿರ್ಧಾರಕ್ಕೆ ಉಭಯ ತಂಡಗಳು ಕನಿಷ್ಠ 5 ಓವರ್​ ಆಡಬೇಕಾಗುತ್ತದೆ. ಪಂದ್ಯ ರದ್ದಾದರೆ ಉಭಯ ತಂಡಗಳಿಗೆ ತಲಾ 1 ಅಂಕ ಹಂಚಲಾಗುವುದು.

ಆರಂಭೋತ್ಸವಕ್ಕೆ ಬಾಲಿವುಡ್​ ಸ್ಟಾರ್ಸ್​

ಉದ್ಘಾಟನಾ ಪಂದ್ಯದ ಟಾಸ್​ಗೆ ಮುನ್ನ ಈಡನ್​ ಗಾರ್ಡನ್ಸ್​ನಲ್ಲಿ ವರ್ಣರಂಜಿತ ಆರಂಭೋತ್ಸವ ನಡೆಯಲಿದ್ದು, ಬಾಲಿವುಡ್​ ತಾರೆಯರು ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಗಾಯಕಿ ಶ್ರೇಯಾ ಘೋಷಾಲ್​, ನಟಿ ದಿಶಾ ಪಟಾನಿ ಮತ್ತು ಪಂಜಾಬ್​ ಸಂಗೀತ ಸೆನ್ಸೇಶನ್​ ಕರಣ್​ ಅಹುಜಾ ಆರಂಭೋತ್ಸವಕ್ಕೆ ಕಳೆ ತುಂಬಲಿದ್ದಾರೆ ಎಂದು ವರದಿಯಾಗಿದೆ. ಆರಂಭೋತ್ಸವ ಸಂಜೆ 6.30ರಿಂದ ನಡೆಯಲಿದೆ. ಇದು ಸುಮಾರು 25 ನಿಮಿಷಗಳ ಕಾರ್ಯಕ್ರಮವಾಗಿರುತ್ತದೆ.

ಈ ಸಲದ ಹೊಸ ನಿಯಮಾವಳಿ...

*ಚೆಂಡು ಶೈನ್​ ಮಾಡಲು ಎಂಜಲು ಹಚ್ಚುವುದಕ್ಕೆ ಮತ್ತೆ ಅನುಮತಿ.

*2ನೇ ಇನಿಂಗ್ಸ್​ನಲ್ಲಿ ಎರಡನೇ ಹೊಸ ಚೆಂಡು ಬಳಸಲು ಅವಕಾಶ.

*ಶಿಸ್ತು ಕ್ರಮಗಳಿಗೆ ಮೊದಲ ಬಾರಿಗೆ ಐಸಿಸಿ ನೀತಿಸಂಹಿತೆ ಜಾರಿ.

*ಎತ್ತರ, ಆ್​ಸ್ಟಂಪ್​ ವೈಡ್​ ಎಸೆತಗಳಿಗೂ ಡಿಆರ್​ಎಸ್​ ಬಳಕೆ.

*ನಿಧಾನಗತಿ ಓವರ್​ಗೆ ಡಿಮೆರಿಟ್​ ಅಂಕ, ನಾಯಕನಿಗೆ ನಿಷೇಧವಿಲ್ಲ.

*ಹಾಲಿ ಚಾಂಪಿಯನ್​ ತಂಡದ ಜೆರ್ಸಿಯಲ್ಲಿ ಗೋಲ್ಡನ್​ ಬ್ಯಾಡ್ಜ್​.

*12ನೇ ಲೀಗ್​ ಪಂದ್ಯದವರೆಗೂ ಬದಲಿ ಆಟಗಾರನ ಸೇರ್ಪಡೆ.

*ಹೊರಬಿದ್ದ ಆಟಗಾರನಿಗಿಂತ ಬದಲಿಗನಿಗೆ ಅಧಿಕ ವೇತನವಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net