

IPL 2025 : ಐಪಿಎಲ್-2025 ಮೆಗಾ ಹರಾಜಿನಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ನ ಮಾಜಿ ನಾಯಕ ರಿಷಭ್ ಪಂತ್ ಭಾರಿ ಬೆಲೆ ಪಡೆಯುವುದು ಖಚಿತ ಎಂದು ಭಾರತದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಹೇಳಿದ್ದಾರೆ.
ವಿಕೆಟ್ ಕೀಪರ್ ಕಮ್ ಬ್ಯಾಟರ್ ರಿಷಭ್ ಪಂತ್ಗಾಗಿ ಫ್ರಾಂಚೈಸಿಗಳು ಭಾರಿ ಪೈಪೋಟಿ ನಡೆಸುವುದು ಖಚಿತ. ಪಂತ್ ಅವರು ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾದ ಆಟಗಾರನಾಗಲಿದ್ದಾರೆ ಎಂದು ಉತ್ತಪ್ಪ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಪಂಜಾಬ್ ಕಿಂಗ್ಸ್ ತಂಡ ಪಂತ್ ಅನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳಲು ಹೆಚ್ಚಿನ ಆಸಕ್ತಿಯನ್ನು ತೋರಿಸಬಹುದು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಪಂತ್ಗಾಗಿ ಪೈಪೋಟಿ ನೀಡುವ ಸಾಧ್ಯತೆ ಇದೆ. ಲಖನೌ ಸೂಪರ್‌ಜೈಂಟ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಕೂಡ ಪಂತ್ ಕಡೆ ಒಲವು ತೋರಲಿವೆ ಎಂದು ಉತ್ತಪ್ಪ ಹೇಳಿದ್ದಾರೆ. ಹೀಗಾಗಿ ಈ ಬಾರಿ ಪಂತ್, 25 ರಿಂದ 28 ಕೋಟಿ ರೂಪಾಯಿ ಲೂಟಿ ಮಾಡಲಿದ್ದಾರೆ ಎಂದು ಉತ್ತಪ್ಪ ಭವಿಷ್ಯ ನುಡಿದರು.
ರಸ್ತೆ ಅಪಘಾತದಿಂದಾಗಿ 2023ರಲ್ಲಿ ಐಪಿಎಲ್‌ಗೆ ಗೈರುಹಾಜರಾಗಿದ್ದ ಪಂತ್, ಚೇತರಿಸಿಕೊಂಡ ನಂತರ 2024ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿ ಮರುಪ್ರವೇಶ ಮಾಡಿದರು. ಕಳೆದ ಐಪಿಎಲ್ನಲ್ಲಿ 446 ರನ್ ಗಳಿಸಿದ ಈ ವಿಕೆಟ್ ಕೀಪರ್, ನಾಯಕನಾಗಿ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಪಂತ್ ನಾಯಕತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ಹದಿನಾಲ್ಕು ಪಂದ್ಯಗಳಲ್ಲಿ ಏಳನ್ನು ಮಾತ್ರ ಗೆದ್ದು 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿ ಉಳಿಯಿತು. ಈ ಹಿನ್ನೆಲೆಯಲ್ಲಿ ಮೆಗಾ ಹರಾಜಿಗೂ ಮುನ್ನ ಡೆಲ್ಲಿ ಫ್ರಾಂಚೈಸಿ ರಿಷಭ್ ಪಂತ್ ಅವರನ್ನು ಬಿಡುಗಡೆ ಮಾಡಿತು.
ರಾಬಿನ್ ಉತ್ತಪ್ಪ, ಆಕಾಶ್ ಚೋಪ್ರಾ, ಇರ್ಫಾನ್ ಪಠಾಣ್ ಸೇರಿದಂತೆ ಭಾರತದ ಮಾಜಿ ಕ್ರಿಕೆಟಿಗರು ಪಂತ್ ಈ ಬಾರಿ ಕಣ್ಣು ಕುಕ್ಕುವ ಮೊತ್ತ ಪಡೆಯಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಬಹುತೇಕ ಪಂಜಾಬ್ ಕಿಂಗ್ಸ್ ತಂಡ ಪಂತ್ ಪಡೆಯುವ ಸಾಧ್ಯತೆ ಇದೆ ಎಂದಿದ್ದಾರೆ. ಸದ್ಯ ಆಸ್ಟ್ರೇಲಿಯಾದ ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್ ನಗದು ಶ್ರೀಮಂತ ಲೀಗ್‌ನಲ್ಲಿ ಅತಿ ಹೆಚ್ಚು ಬೆಲೆಯ ಆಟಗಾರನಾಗಿ ಮುಂದುವರಿದಿದ್ದಾರೆ. ಐಪಿಎಲ್-2024 ಮಿನಿ ಹರಾಜಿನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಬರೋಬ್ಬರಿ 24.75 ಕೋಟಿ ರೂ.ಗೆ ಖರೀದಿಸಿತು. (ಏಜೆನ್ಸೀಸ್)