

ನವದೆಹಲಿ: ಐಪಿಎಲ್ 18ನೇ ಆವೃತ್ತಿ ಸೇರಿ ಮುಂದಿನ ಮೂರು ಋತುವಿನ ದಿನಾಂಕಗಳನ್ನು ಬಿಸಿಸಿಐ ಅಂತಿಮಗೊಳಿಸಿದೆ. ಮುಂದಿನ ವರ್ಷ ನಡೆಯಲಿರುವ 18ನೇ ಆವೃತ್ತಿಗೆ ಮಾರ್ಚ್ 14ರಿಂದ ಮೇ 25ರವರೆಗೆ, 2026ರ ಆವೃತ್ತಿ ಮಾರ್ಚ್ 15ರಿಂದ ಮೇ 31ರವರೆಗೆ ಹಾಗೂ 2027ರ ಆವೃತ್ತಿ ಮಾರ್ಚ್14ರಿಂದ ಮೇ 30ರವರೆಗೆ ನಡೆಯಲಿದೆ. 2025 ಹಾಗೂ 2026ರ ಆವೃತ್ತಿಗಳಲ್ಲಿ ಒಟ್ಟು 84 ಪಂದ್ಯಗಳು ನಡೆದರೆ, 2027ರ ಸೀಸನ್‌ನಲ್ಲಿ ಗರಿಷ್ಠ 94 ಪಂದ್ಯ ನಿಗದಿಪಡಿಸಲಾಗಿದೆ. ಎಲ್ಲ ಫೈನಲ್ ಪಂದ್ಯಗಳು ಭಾನುವಾರ ನಡೆಯಲಿವೆ.
ಐಪಿಎಲ್ನ ಪ್ರತಿ ಋತುವಿನಲ್ಲಿ ನಡೆಯಲಿರುವ ಪಂದ್ಯಗಳ ಸಂಖ್ಯೆ ಹಾಗೂ ಸಾಗರೋತ್ತರ ಆಟಗಾರರ ಲಭ್ಯತೆಯ ಬಗ್ಗೆ ಎಲ್ಲ ್ರಾಂಚೈಸಿಗಳಿಗೆ ಬಿಸಿಸಿಐ ಮಾಹಿತಿ ನೀಡಿದೆ. ಎಲ್ಲ 10 ಫ್ರಾಂಚೈಸಿಗಳಿಗೆ ಗುರುವಾರ ಇ-ಮೇಲ್ ಮುಖಾಂತರ ಮಾಹಿತಿ ಹಂಚಿಕೊಂಡಿರುವ ಬಿಸಿಸಿಐ, ಭಾನುವಾರ ಹಾಗೂ ಸೋಮವಾರ ಜಿದ್ದಾದಲ್ಲಿ ನಡೆಯಲಿರುವ ಆಟಗಾರರ ಮೆಗಾ ಹರಾಜಿಗೆ ಮುನ್ನ ಫ್ರಾಂಚೈಸಿಗಳ ಕಾರ್ಯಯೋಜನೆಗೆ ಸಹಕಾರಿಯಾಗುವಂತೆ ಮುಂದಿನ ಮೂರು ಸೀಸನ್‌ಗಳ ದಿನಾಂಕಗಳನ್ನು ಹಂಚಿಕೊಳ್ಳಲಾಗಿದೆ ಎಂದು ಬಿಸಿಸಿಐ ತಿಳಿಸಿದೆ. ಪಾಕಿಸ್ತಾನ ಹೊರತುಪಡಿಸಿ ದ.ಆಫ್ರಿಕಾ, ನ್ಯೂಜಿಲೆಂಡ್ ವೆಸ್ಟ್ ಇಂಡೀಸ್, ಅಪ್ಘಾನಿಸ್ತಾನ, ಜಿಂಬಾಬ್ವೆ ಹಾಗೂ ಶ್ರೀಲಂಕಾ ಆಟಗಾರರು ಟೂರ್ನಿಗೆ ಸಂಪೂರ್ಣವಾಗಿ ಲಭ್ಯವಾಗಲಿದ್ದಾರೆ. ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಆಟಗಾರರು ರಾಷ್ಟ್ರೀಯ ತಂಡದ ಪರ ಆಡದಿದ್ದರೆ ಐಪಿಎಲ್ ಒಪ್ಪಂದಕ್ಕೆ ಬದ್ಧವಾಗಿರಲಿದ್ದಾರೆ ಎನ್ನಲಾಗಿದೆ.
ಆರ್ಚರ್ ಸೇರ್ಪಡೆ: ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್, ಭಾರತೀಯ ಮೂಲದ ಅಮೇರಿಕ ವೇಗಿ ಸೌರಭ್ ನೇತ್ರವಲ್ಕರ್ ಮತ್ತು ಮುಂಬೈ-ವಿಕೆಟ್ ಕೀಪರ್-ಬ್ಯಾಟರ್ ಹಾರ್ದಿಕ್ ತಮೋರ್ ಅವರನ್ನು ಆಟಗಾರರ ಅಂತಿಮ ಹರಾಜು ಪಟ್ಟಿಗೆ ಸೇರಿಸಲಾಗಿದ್ದು, ಹರಾಜಿನ ಕಣದಲ್ಲಿರುವ ಆಟಗಾರರ ಸಂಖ್ಯೆ 577ಕ್ಕೇರಿದೆ.