

CSK : ಐಪಿಎಲ್ 2025ರ ಮೆಗಾ ಹರಾಜಿಗೂ ಮುನ್ನ ನಡೆದ ಐಪಿಎಲ್ ಪ್ರಿ ಆಕ್ಸನ್ ಟ್ರಯಲ್ ಮೂಲಕ ಸದ್ದು ಮಾಡಿದ್ದ ಮುಂಬೈನ ಯುವ ಆಟಗಾರ ಆಯುಷ್ ಮಾತ್ರೆ, ಕ್ರಿಕೆಟ್ ವಲಯದಲ್ಲಿ ಇದೀಗ ಪರಿಚಿತ ಹೆಸರಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ನ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರೇ ಆಯುಷ್ ಮಾತ್ರೆ ಅವರ ಪ್ರತಿಭೆಯಿಂದ ಪ್ರಭಾವಿತರಾಗಿದ್ದರು. ಮೆಗಾ ಹರಾಜಿಗೂ ಮುನ್ನ ಸಿಎಸ್ಕೆ ತಂಡ ಮಾತ್ರೆ ಅವರನ್ನು ಟ್ರಯಲ್ಸ್ಗೆ ಆಹ್ವಾನಿಸಿತ್ತು. ಈ ವೇಳೆ ಮಾತ್ರೆ ಅದ್ಭುತ ಪ್ರದರ್ಶನ ಸಹ ನೀಡಿದರು. ಆದರೆ, ಅಂತಿಮವಾಗಿ ಮೆಗಾ ಹರಾಜಿನಲ್ಲಿ ಸಿಎಸ್ಕೆ, ಮಾತ್ರೆ ಅವರನ್ನು ಖರೀದಿಸಲಿಲ್ಲ. ಅಲ್ಲದೆ, ಯಾವುದೇ ಫ್ರಾಂಚೈಸಿ ಮಾತ್ರೆ ಮೇಲೆ ಆಸಕ್ತಿ ತೋರಲಿಲ್ಲ. ಹೀಗಾಗಿ ಮುಂಬೈ ಮೂಲದ 17 ವರ್ಷದ ಆಲ್ ರೌಂಡರ್ ಹರಾಜಿನಲ್ಲಿ ಮಾರಾಟವಾಗದೆ ಉಳಿದರು.
ಇದೆಲ್ಲಾ ಸರಿ, ಈ ವಿಚಾರವನ್ನು ಈಗ ಯಾಕೆ ಹೇಳ್ತಿದ್ದೀರಾ? ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಅದಕ್ಕೆ ಉತ್ತರ ಇಲ್ಲಿದೆ. ಸಿಎಸ್ಕೆ ತಂಡ ಮಾತ್ರೆಯ ಮೇಲೆ ಭರವಸೆ ಇಟ್ಟುಕೊಂಡಿತ್ತು. ಆದರೆ, ಮೆಗಾ ಹರಾಜಿನಲ್ಲಿ ಆ ಭರವಸೆಯನ್ನು ಸಿಎಸ್ಕೆ ಉಳಿಸಿಕೊಳ್ಳಲಿಲ್ಲ. ಅದು ತಪ್ಪು ಎಂದು ಈಗ ಅನಿಸುತ್ತಿದೆ. ಏಕೆಂದರೆ, ಮಾತ್ರೆ ಅವರು ಅಂಡರ್-19 ಏಷ್ಯಾ ಕಪ್ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಈ ಟೂರ್ನಿಯಲ್ಲಿ ಮಾತ್ರೆ ಈಗಾಗಲೇ ಎರಡು ಅರ್ಧಶತಕ ಹಾಗೂ 3 ವಿಕೆಟ್ ಪಡೆದಿದ್ದಾರೆ. ಯುಎಇ ವಿರುದ್ಧ ಇತ್ತೀಚೆಗೆ ನಡೆದ ಪಂದ್ಯದಲ್ಲಿ, ಮಾತ್ರೆ ಆಲ್ರೌಂಡ್ ಪ್ರದರ್ಶನದೊಂದಿಗೆ (ಔಟಾಗದೆ 67; 1/19) ಪ್ರಭಾವ ಬೀರಿದರು. ಪರಿಣಾಮವಾಗಿ, ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಮಾತ್ರೆ ಅವರ ಇತ್ತೀಚಿನ ಪ್ರದರ್ಶನ ನೋಡಿ ಅವರನ್ನು ಸಿಎಸ್ಕೆ ಕೈಬಿಟ್ಟಿರಬಹುದೆಂದು ಭಾವಿಸಬಹುದು. ಆದರೆ, ಬಲವಾದ ಹೊಡೆಯುವ ಸಾಮರ್ಥ್ಯದ ಜೊತೆಗೆ ಉತ್ತಮ ಬ್ಯಾಟಿಂಗ್ ತಂತ್ರವನ್ನು ಹೊಂದಿರುವ ಮಾತ್ರೆ, ಸಿಎಸ್ಕೆಯಲ್ಲಿದ್ದರೆ ಆರಂಭಿಕರಾಗಿ ಹಲವು ಅದ್ಭುತಗಳನ್ನು ಮಾಡುತ್ತಿದ್ದರು. ಅಂಡರ್ 19 ಏಷ್ಯಾ ಕಪ್ನಲ್ಲಿ ಮಾತ್ರೆ ಪ್ರದರ್ಶನ ನೋಡಿದ ಬಳಿಕ ಸಿಎಸ್ಕೆ ಅಭಿಮಾನಿಗಳು ತಮ್ಮ ತಂಡದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇಂಥಾ ಓರ್ವ ಆಟಗಾರನನ್ನು ಮಿಸ್ ಮಾಡಿಕೊಳ್ಳಬಾರದಿತ್ತು. ನಿಜಕ್ಕೂ ನೀವು ತಪ್ಪು ಮಾಡಿಬಿಟ್ರಿ ಎಂದು ಹೇಳುತ್ತಿದ್ದಾರೆ. ಅದೇನೇ ಇರಲಿ, ಸಿಎಸ್ಕೆ ಮಾತ್ರೆಯನ್ನು ಕೈಬಿಟ್ಟಿರುವುದು ದುರಾದೃಷ್ಟವೇ ಸರಿ.
ಮತ್ತೊಂದೆಡೆ, ಐಪಿಎಲ್ ಮೆಗಾ ಹರಾಜಿನಲ್ಲಿ ಮಾತ್ರೆ ಅವರ ಸಹ ಆಟಗಾರ ಮತ್ತು ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಅವರನ್ನು ರಾಜಸ್ಥಾನ ರಾಯಲ್ಸ್ ಖರೀದಿಸಿತು. ಆರ್ಆರ್ ತಂಡ ಸೂರ್ಯವಂಶಿಯನ್ನು 1.1 ಕೋಟಿಗೆ ತಮ್ಮದಾಗಿಸಿಕೊಂಡಿದ್ದಾರೆ. ಸೂರ್ಯವಂಶಿ ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಭಾಗವಹಿಸಿದ ಅತ್ಯಂತ ಕಿರಿಯ (13) ಎಂಬ ದಾಖಲೆಯನ್ನು ನಿರ್ಮಿಸಿದರು. ಸೂರ್ಯವಂಶಿ ಕೂಡ ಉತ್ತಮ ಹಿಟ್ಟರ್. ಮಾತ್ರೆಗಿಂತಲೂ ಬಲವಾದ ಹಿಟ್ಟರ್. ಇತ್ತೀಚೆಗಷ್ಟೇ ಯುಎಇ ವಿರುದ್ಧದ ಪಂದ್ಯದಲ್ಲಿ ಸೂರ್ಯವಂಶಿ, ಮಾತ್ರೆ ಅವರೊಂದಿಗೆ ಧನಾಧನ್ ಇನಿಂಗ್ಸ್ ಆಡಿದರು. ಈ ಪಂದ್ಯದಲ್ಲಿ ಸೂರ್ಯವಂಶಿ 46 ಎಸೆತಗಳಲ್ಲಿ 3 ಬೌಂಡರಿ ಹಾಗೂ 6 ಸಿಕ್ಸರ್ಗಳ ನೆರವಿನಿಂದ ಅಜೇಯ 76 ರನ್ ಗಳಿಸಿದರು. (ಏಜೆನ್ಸೀಸ್)