

ಮುಂಬೈ: ಐಪಿಎಲ್ 2024ರ ಆವೃತ್ತಿಗೆ ಈಗಾಗಲೇ ಸಕಲ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಆಯಾ ತಂಡದ ಫ್ರಾಂಚೈಸಿಗಳು ಆಟಗಾರರನ್ನು ಆಯ್ದುಕೊಳ್ಳುವ ಪ್ರಕ್ರಿಯೆಯನ್ನು ಕೂಡ ಯಶಸ್ವಿಯಾಗಿ ಅಂತ್ಯಗೊಳಿಸಿದೆ. ಮುಂಬರುವ ದಿನಗಳನ್ನು ಎದುರುನೋಡುತ್ತಿರುವ ತಂಡಗಳು, ಈ ಬಾರಿಯ ಐಪಿಎಲ್ ಟ್ರೋಫಿಯನ್ನು ತಮ್ಮ ಮುಡಿಗೇರಿಸಿಕೊಳ್ಳಬೇಕು ಎಂಬ ಲೆಕ್ಕಾಚಾರಗಳನ್ನು ಹಾಕಿಕೊಂಡಿದೆ. ಆದ್ರೆ, ಎಲ್ಲಾ ಟೀಮ್ನ ಅಭಿಮಾನಿಗಳಿಗೆ ತಮ್ಮ ನಾಯಕರನ್ನು ನೋಡುವ ತವಕವಿದ್ದರೆ, ಇತ್ತ ಮುಂಬೈ ಇಂಡಿಯನ್ಸ್ ಫ್ಯಾನ್ಸ್ಗಳಿಗೆ ಮಾತ್ರ ಬೇಸರ ತಪ್ಪಿಲ್ಲ ಎಂಬಂತಾಗಿದೆ.
ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ಗುಜರಾತ್ ಟೈಟನ್ಸ್ ನಾಯಕತ್ವವನ್ನು ತ್ಯಜಿಸಿ, ತಂಡದಿಂದ ಹೊರಬಂದ ಹಾರ್ದಿಕ್ ಪಾಂಡ್ಯ ದುಬಾರಿ ಮೊತ್ತದ ಬೇಡಿಕೆಯಿಟ್ಟು ಮುಂಬೈ ಇಂಡಿಯನ್ಸ್ ಟೀಮ್ನ ಕ್ಯಾಪ್ಟನ್ ಆಗಿ ತಂಡಕ್ಕೆ ಮರಳಿದರು. ಈ ಸಂಗತಿ ಅಪಾರ ಸಂಖ್ಯೆಯ ರೋಹಿತ್ ಅಭಿಮಾನಿಗಳನ್ನು ಒಂದು ಕ್ಷಣ ಕುಸಿಯುವಂತೆ ಮಾಡಿತು.
ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ ರೋಹಿತ್ ಶರ್ಮಾ 2024ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುತ್ತಿಲ್ಲ ಎಂಬ ಸುದ್ದಿ ಕೇಳಿದ ಅಭಿಮಾನಿಗಳು ಭಾರೀ ಆಘಾತಕ್ಕೆ ಒಳಗಾಗಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ರೋಹಿತ್ಗೆ ಬೆಂಬಲಿಸಿದ ಫ್ಯಾನ್ಸ್, ಸಾಮಾಜಿಕ ಜಾಲತಾಣಗಳಲ್ಲಿ ಹಾರ್ದಿಕ್ ಅವರನ್ನು ವ್ಯಾಪಕವಾಗಿ ಟೀಕಿಸಿದ್ದರು.
ನಾಯಕತ್ವ ಇಲ್ಲ, ಇದೇ ಕೊನೆಯ ಐಪಿಎಲ್? ತಮ್ಮ ತಂಡಕ್ಕೆ 6 ಬಾರಿ ಐಪಿಎಲ್ ಟ್ರೋಫಿ ತಂದುಕೊಟ್ಟ ಸ್ಟಾರ್ ಕ್ಯಾಪ್ಟನ್ ರೋಹಿತ್ ಶರ್ಮಾ, ಎಂಐ ತಂಡದದೊಂದಿಗೆ ಇದೇ ಕೊನೆಯ ಬಾರಿಗೆ ಆಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಕಾರಣ ಇತ್ತೀಚಿಗಿನ ಹಾರ್ದಿಕ್ ಪಾಂಡ್ಯ ನಾಯಕತ್ವ. ಗುಜರಾತ್ ಟೈಟನ್ಸ್ ಬಿಟ್ಟು ಮುಂಬೈಗೆ ಎಂಟ್ರಿ ಕೊಟ್ಟ ಪಾಂಡ್ಯ ಅವರನ್ನು ತಂಡದ ನೂತನ ಕ್ಯಾಪ್ಟನ್ ಆಗಿ ಪ್ರಾಂಚೈಸಿ ಅಧಿಕೃತವಾಗಿ ಘೋಷಣೆ ಮಾಡಿತು.
ಈ ಮೂಲಕ ರೋಹಿತ್ ಅವರ ಐತಿಹಾಸಕ ಕ್ಯಾಪ್ಟನ್ಸಿಗೆ ತೆರೆ ಎಳೆದಂತಾಗಿದೆ. ಆದ್ರೆ, ಈ ಬಗ್ಗೆ ಫ್ರಾಂಚೈಸಿಗಳು ಪ್ರಾಕ್ಟಿಸ್ ಸೆಷನ್ ಸೇರಿದಂತೆ ಎಲ್ಲವೂ ಸರಿಯಾಗಿದೆ ಎಂದು ತಿಳಿಸಿದೆ. ಆದ್ರೆ, ನಾಯಕತ್ವದಲ್ಲಿ ಉಂಟಾದ ಬದಲಾವಣೆಯು ರೋಹಿತ್ಗೆ ಭಾರಿ ನೋವನ್ನು ತಂದೊಡ್ಡಿದ್ದು, ಹಾರ್ದಿಕ್ ಅವರ ನೇತೃತ್ವದಲ್ಲಿ ಆಡುವುದು ಅವರಿಗೆ ಕಷ್ಟಕರವಾಗಬಹುದು ಎಂದು ಹೇಳಲಾಗಿದೆ.
ಈ ಎಲ್ಲಾ ಕಾರಣಗಳು ಮುಂಬೈ ಇಂಡಿಯನ್ಸ್ ತಂಡದಿಂದ ರೋಹಿತ್ ಶರ್ಮಾ ಹೊರಗುಳಿಯಲು ಪ್ರಮುಖ ಕಾರಣ ಎಂದು ಹೇಳಲಾಗಿದೆ. ಆದ್ರೆ, ಈ ಬಗ್ಗೆ ಅಧಿಕತವಾಗಿ ರೋಹಿತ್ ಏನು ಹೇಳಲಿದ್ದಾರೆ? ಎಂಐ ತಂಡದಲ್ಲಿ ಇದೇ ಅವರ ಕೊನೆಯ ಸೀಸನ್ ಆಗಲಿದ್ಯಾ? ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ,(ಏಜೆನ್ಸೀಸ್).