

ಬೆಂಗಳೂರು: ಪ್ರತಿ ಓವರ್ಗೆ 2 ಬೌನ್ಸರ್ ಎಸೆಯುವ ನಿಯಮವನ್ನು ಜಾರಿಗೆ ತರಲು ಬಿಸಿಸಿಐ ನಿರ್ಧರಿಸಿದೆ. ಇದರ ಬೆನ್ನಲ್ಲೇ ಆಟಗಾರರ ಹರಾಜಿನಲ್ಲಿ ವೇಗಿಗಳು ದುಬಾರಿ ಮೊತ್ತಕ್ಕೆ ಬಿಕರಿಯಾಗಿರುವುದು ಗಮನಾರ್ಹವೆನಿಸಿದೆ. ಮುಂದಿನ ವರ್ಷದ ಐಪಿಎಲ್ನಲ್ಲಿ ಪ್ರತಿ ಓವರ್ನಲ್ಲಿ 2 ಬೌನ್ಸರ್ಗೆ ಅವಕಾಶ ನೀಡುವ ಮುನ್ನ ಕಳೆದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಬಿಸಿಸಿಐ ಈ ನಿಯಮವನ್ನು ಪ್ರಾಯೋಗಿಕವಾಗಿ ಪರೀಕ್ಷೆ ನಡೆಸಿದೆ.
ಇದರಿಂದ ಬ್ಯಾಟರ್-ಬೌಲರ್ಗಳ ನಡುವೆ ಉತ್ತಮ ಪೈಪೋಟಿ ಕಂಡುಬರುವ ಸಾಧ್ಯತೆಗಳಿವೆ. ‘ಓವರ್ಗೆ 2 ಬೌನ್ಸರ್ ತುಂಬಾ ಉಪಯುಕ್ತವಾಗಿದೆ. ಇದು ಬೌಲರ್ಗಳಿಗೆ ಹೆಚ್ಚಿನ ನೆರವು ಒದಗಿಸಲಿದೆ. ನಾನು ನಿಧಾನಗತಿ ಬೌನ್ಸರ್ ಎಸೆದ ನಂತರ, ಯಾವುದೇ ಬೌನ್ಸರ್ ಬರುವುದಿಲ್ಲ ಎಂದು ಬ್ಯಾಟರ್ ಮುಂದಿನ ಎಸೆತ ಎದುರಿಸಲು ಮಾನಸಿಕವಾಗಿ ಸಿದ್ಧವಾಗಿರುತ್ತಾನೆ. ಆದ್ದರಿಂದ ಓವರ್ನ ಮೊದಲ 3 ಎಸೆತಗಳಲ್ಲಿ ಒಂದು ಬೌನ್ಸರ್ ಬೌಲ್ ಮಾಡಿದರೂ ಮತ್ತೊಮ್ಮೆ ಎಸೆಯುವ ಅವಕಾಶ ಬೌಲರ್ಗಳಿಗೆ ದೊರೆಯುವುದರಿಂದ ಈ ನಿಯಮ ಉಪಯುಕ್ತವೆನಿಸಬಹುದು’ ಎಂದು ಟೀಮ್ ಇಂಡಿಯಾ ವೇಗಿ ಜೈದೇವ್ ಉನಾದ್ಕತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.