

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2024ಕ್ಕೆ ಕ್ರಿಕೆಟ್ ಅಭಿಮಾನಿಗಳು ಸಜ್ಜಾಗಿದ್ದು, 10 ಬಲಿಷ್ಠ ತಂಡಗಳು ಭರ್ಜರಿ ಪೈಪೋಟಿ ಕೊಡಲು ಈಗಾಗಲೇ ಸಕಲ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ. ಸದ್ಯ ಇದೆಲ್ಲದರ ಮಧ್ಯೆ ಈ ಬಾರಿಯ ಐಪಿಎಲ್ನ ಉದ್ಘಾಟನಾ ಸಮಾರಂಭ ಚೆನ್ನೈ ನಗರದಲ್ಲಿ ನಡೆಯಲಿದೆ ಎಂದು ಅಧಿಕೃತ ಘೋಷಣೆ ಹೊರಬಿದ್ದಿದೆ. ಇದರೊಟ್ಟಿಗೆ ಕೇವಲ 15 ದಿನಗಳ ವೇಳಾಪಟ್ಟಿ ಮಾತ್ರ ಪ್ರಕಟಿಸಲಾಗಿದ್ದು, ಚುನಾವಣೆ ಪಟ್ಟಿ ಬಿಡುಗಡೆಯಾದ ಬಳಿಕ ಮುಂದಿನ ಪಟ್ಟಿ ರಿಲೀಸ್ ಮಾಡುವುದಾಗಿ ಬಿಸಿಸಿಐ ತಿಳಿಸಿದೆ.
ಐಪಿಎಲ್ 2024ರ ಪಂದ್ಯಗಳಿಗೆ ಚಾಲನೆ ಸಿಕ್ಕಿದ ಬಳಿಕ ಕ್ರೀಡಾಂಗಣದಲ್ಲಿ ಎಂದಿನಂತೆ ಯಾವ ಎರಡು ತಂಡಗಳು ಮುಖಾಮುಖಿಯಾಗಿ ಕಣಕ್ಕಿಳಿಯಲಿವೆ ಎಂಬ ಪ್ರಶ್ನೆ ಸದ್ಯ ಕ್ರಿಕೆಟ್ ಅಭಿಮಾನಿಗಳಲ್ಲಿ ತೀವ್ರವಾಗಿತ್ತು. ಐಪಿಎಲ್ ಇತಿಹಾಸದಲ್ಲೇ ಐದು ಬಾರಿ ಚಾಂಪಿಯನ್ಸ್ ಪಟ್ಟ ಅಲಂಕರಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐದು ಸಲ ಟ್ರೋಫಿ ಎತ್ತಿರುವ ಮುಂಬೈ ಇಂಡಿಯನ್ಸ್ ವಿರುದ್ಧ ಆಡಿರುವುದೇ ಹೆಚ್ಚು. ಅದರೊಟ್ಟಿಗೆ ಆರ್ಸಿಬಿ ಕೂಡ ಪ್ರಾರಂಭದ ಪಂದ್ಯಗಳನ್ನು ಆಡಿದೆ. ಇದೀಗ ಈ ಕುತೂಹಲಕ್ಕೆ ತರೆಬಿದ್ದಿದ್ದು, ಮೊದಲ ಪಂದ್ಯದಲ್ಲೇ ವಿರಾಟ್ ಮತ್ತು ಧೋನಿ ಮುಖಾಮುಖಿಯಾಗಿದ್ದಾರೆ.
ಐಪಿಎಲ್ನ 17ನೇ ಸೀಸನ್ನಲ್ಲಿ ಆರಂಭಿಕ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಚಾಂಪಿಯನ್ಸ್ಗಳಾದ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದೊಂದಿಗೆ ಸೆಣಸಾಡಲು ಸಜ್ಜಾಗಿದೆ. ಈ ಕಿಕ್ಸ್ಟಾರ್ಟ್ ಪಂದ್ಯ ಚೆನ್ನೈನಲ್ಲಿ ಮಾರ್ಚ್ 22ರಂದು ನಡೆಯಲಿದೆ.