

ಬೆಂಗಳೂರು: ಸಾಂಪ್ರದಾಯಿಕ ಬದ್ಧವೈರಿಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಇಂದು ಐಪಿಎಲ್ 2024ರ 17ನೇ ಆವೃತ್ತಿ ಐಪಿಎಲ್‌ನ ಬಹು ನಿರೀಕ್ಷಿತ ಹಣಾಹಣಿಗೆ ನಗರದ ಎಂ.ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜಾಗಿದೆ. ಉಭಯ ತಂಡಗಳಿಗೂ ಈ ಪಂದ್ಯ ಮಾಡು ಇಲ್ಲವೇ ಮಾಡಿ ಎನಿಸಿಕೊಂಡಿದ್ದು, ಮಳೆ ಭೀತಿ ನಡುವೆಯೇ ರಣರೋಚಕ ಪೈಪೋಟಿಗೆ ಸಾಕ್ಷಿಯಾಗಲು ಅಭಿಮಾನಿಗಳೂ ತುದಿಗಾಲಲ್ಲಿ ನಿಂತಿದ್ದಾರೆ.
ಈ ಪಂದ್ಯದಲ್ಲಿ ಸಿಎಸ್ಕೆ ಗೆದ್ದರೆ ನೇರವಾಗಿ ಪ್ಲೇ ಆಫ್‌ಗೆ ಲಗ್ಗೆ ಇಡಲಿದೆ. ಮತ್ತೊಂದೆಡೆ, ಆರ್‌ಸಿಬಿಗೆ ಕೇವಲ ಪಂದ್ಯವನ್ನು ಗೆಲ್ಲುವುದು ಮುಖ್ಯವಲ್ಲ. ಆದಾಗ್ಯೂ, ಆರ್‌ಸಿಬಿ ಪ್ಲೇ ಆಫ್‌ಗೆ ಪ್ರವೇಶಿಸಬೇಕಾದರೆ ಅತ್ಯುತ್ತಮ ನೆಟ್ ರನ್ರೇಟ್ನಲ್ಲಿ ಪಂದ್ಯವನ್ನು ಗೆಲ್ಲಬೇಕಾಗಿದೆ.
ಉದ್ಘಾಟನಾ ಪಂದ್ಯದಲ್ಲಿ ಚೆನ್ನೈನಲ್ಲಿ ಅನುಭವಿಸಿದ ಸೋಲಿಗೆ ತವರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೇಡು ತೀರಿಸಿಕೊಳ್ಳುವ ಮೂಲಕ ಅಂಕಪಟ್ಟಿಯ ಅಗ್ರ 4 ತಂಡಗಳಲ್ಲಿ ಒಂದಾಗುವುದು ಫಾಫ್ ಡು ಪ್ಲೆಸಿಸ್ ಬಳಗದ ಕನಸಾಗಿದೆ. ಒಂದು ವೇಳೆ ಸಿಎಸ್ಕೆ ತಂಡ ಪ್ಲೇಆಫ್ ಹಂತಕ್ಕೇರದಿದ್ದರೆ, ಭಾರತೀಯ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕ, ವಿಕೆಟ್ ಕೀಪರ್-ಬ್ಯಾಟರ್ ಎಂಎಸ್ ಧೋನಿ ಪಾಲಿಗೆ ಇದು ಐಪಿಎಲ್ನಲ್ಲಿ ಕೊನೆಯ ಪಂದ್ಯವಾಗಲಿದೆ.
ಆರಂಭಿಕ 8 ಪಂದ್ಯಗಳಲ್ಲಿ 1ರಲ್ಲಿ ಮಾತ್ರ ಗೆದ್ದಿದ್ದ ಆರ್‌ಸಿಬಿ ನಂತರದಲ್ಲಿ ಸತತ 5 ಪಂದ್ಯ ಜಯಿಸುವ ಮೂಲಕ ಐಪಿಎಲ್ನಲ್ಲಿ ಅಮೋವಾಗಿ ಪುಟಿದೆದ್ದಿದೆ. ಆಡಿದ 13 ಪಂದ್ಯಗಳಲ್ಲಿ ಈಗ 6 ಜಯ, 7 ಸೋಲಿನೊಂದಿಗೆ 12 ಅಂಕ ಗಳಿಸಿರುವ ಆರ್‌ಸಿಬಿಗೆ ರನ್ರೇಟ್ ಸುಧಾರಣೆಯೂ ಪ್ಲೇಆಫ್ ರೇಸ್ನಲ್ಲಿ ಉಳಿದುಕೊಳ್ಳಲು ನೆರವಾಗಿದೆ. “ಹೊಸ ಅಧ್ಯಾಯ’ ಎಂಬ ಜೋಶ್ನಲ್ಲಿ ಅಭಿಯಾನ ಆರಂಭಿಸಿದ್ದ ಆರ್‌ಸಿಬಿ ಈಗ ಸತತ 4 ಪಂದ್ಯ ಗೆದ್ದರೆ ಕಪ್ ಕನಸು ನನಸಾಗಿಸುವ ಅವಕಾಶ ಹೊಂದಿದೆ.
ಮತ್ತೊಂದೆಡೆ ಸಿಎಸ್ಕೆ ಆರಂಭಿಕ 2 ಪಂದ್ಯಗಳಲ್ಲಿ ಗೆದ್ದಿದ್ದರೂ, ನಂತರದಲ್ಲಿ ಅಸ್ಥಿರ ನಿರ್ವಹಣೆಯಿಂದಾಗಿ ಏಳು-ಬೀಳುಗಳನ್ನು ಕಂಡಿದೆ. ಆಡಿದ 13 ಪಂದ್ಯಗಳಲ್ಲಿ 7 ಜಯ, 6 ಸೋಲಿನೊಂದಿಗೆ 14 ಅಂಕ ಗಳಿಸಿ ಸದ್ಯಕ್ಕೆ 4ನೇ ಸ್ಥಾನದಲ್ಲಿರುವ ಸಿಎಸ್ಕೆ, ತಾನಾಡಿದ ಕೊನೇ 7 ಪಂದ್ಯಗಳಲ್ಲಿ 3ರಲ್ಲಿ ಮಾತ್ರ ಗೆದ್ದು, 4ರಲ್ಲಿ ಸೋತಿದೆ.
ಹಾಲಿ ಟೂರ್ನಿಯ ಉದ್ಘಾಟನಾ ಪಂದ್ಯ ಸೇರಿದಂತೆ ಒಟ್ಟಾರೆ ಐಪಿಎಲ್ ದಾಖಲೆ ಸಿಎಸ್ಕೆ ಪರವಾಗಿದ್ದರೂ, ಸತತ 5 ಜಯದೊಂದಿಗೆ ಬೀಗುತ್ತಿರುವ ಆರ್‌ಸಿಬಿ ಹಾಲಿ ಬಲಿಷ್ಠ ಫಾರ್ಮ್ನಲ್ಲಿದೆ. ಜತೆಗೆ ಆರ್‌ಸಿಬಿ ತವರಿನಲ್ಲಿ ಆಡುವ ಲಾಭವನ್ನೂ ಹೊಂದಿದೆ. ಹೀಗಾಗಿ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ.