ವಿರಾಟ್ ಕೊಹ್ಲಿಗೆ ಹಸಿರು ಜರ್ಸಿ ದುರಾದೃಷ್ಟಕರ? ಇಲ್ಲಿದೆ ಅಚ್ಚರಿಯ ಅಂಕಿ-ಅಂಶ!

Virat Kohli
Published on

ಬೆಂಗಳೂರು: ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡದ ಮಾಜಿ ನಾಯಕ ವಿರಾಟ್​ ಕೊಹ್ಲಿಗೆ ಹಸಿರು ಜರ್ಸಿ ದುರಾದೃಷ್ಟಕರ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಆರ್​ಸಿಬಿ ಪ್ರತಿ ವರ್ಷ ಐಪಿಎಲ್​ ಟೂರ್ನಿಯಲ್ಲಿ ಭೂಮಿಯ ಹಸಿರು ಕಾಳಜಿಯ ಬಗ್ಗೆ ಅರಿವು ಮೂಡಿಸಲು ಒಂದೆರೆಡು ಪಂದ್ಯಗಳಲ್ಲಿ ಹಸಿರು ಜರ್ಸಿಯಲ್ಲಿ ಆಡುತ್ತದೆ. ಅದೇ ರೀತಿ ನಿನ್ನೆ (ಏಪ್ರಿಲ್​ 23) ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲೂ ಆರ್​ಸಿಬಿ ಹಸಿರು ಜರ್ಸಿಯಲ್ಲಿ ಮೈದಾನಕ್ಕಿಳಿಯಿತು ಮತ್ತು ಪಂದ್ಯವನ್ನು ಗೆದ್ದುಕೊಂಡಿತು. ಆದರೆ, ಕೊಹ್ಲಿ ಅಭಿಮಾನಿಗಳಿಗೆ ನಿನ್ನೆ ನಿರಾಸೆಯಾಯಿತು.

ನಿನ್ನೆ ಬ್ಯಾಟಿಂಗ್​ ಆರಂಭಿಸಿದ ಕೊಹ್ಲಿ ಮೊದಲ ಎಸೆತದಲ್ಲೇ ಆರ್​ಆರ್​ ತಂಡದ ಟ್ರೆಂಟ್​ ಬೋಲ್ಟ್​ಗೆ ವಿಕೆಟ್​ ಒಪ್ಪಿಸಿದರು. ಎಲ್​ಬಿಡಬ್ಲ್ಯು ಬಲೆಗೆ ಬಿದ್ದ ಕೊಹ್ಲಿ ಯಾವುದೇ ರನ್​ ಖಾತೆ ತೆರೆಯದೇ ಪೆವಲಿಯನ್​ಗೆ ತೆರಳಿದರು. ಕೊಹ್ಲಿ ಪಾಲಿಗೆ ಹಸಿರು ಜರ್ಸಿ ದುರಾದೃಷ್ಟ ಎಂಬಂತೆ ಕಾಣುತ್ತದೆ. ಅದಕ್ಕೆ ಅಂಕಿ-ಅಂಶವು ಕೂಡ ಪುಷ್ಠಿ ನೀಡುತ್ತದೆ. 2022ರಲ್ಲಿ ಹಸಿರು ಜರ್ಸಿಯೊಂದಿಗೆ ಸನ್​ ರೈಸರ್ಸ್​ ಹೈದರಬಾದ್​ ತಂಡದ ವಿರುದ್ಧ ಕಣಕ್ಕಿಳಿದಿದ್ದ ಕೊಹ್ಲಿ, ಜಗದೀಶ ಸುಚಿತ್​ ಬೌಲಿಂಗ್​ನಲ್ಲಿ ಮೊದಲ ಎಸೆತದಲ್ಲೇ ನಿರ್ಗಮಿಸಿದ್ದರು. ಇದೀಗ ನಿನ್ನೆ ನಡೆದ ಪಂದ್ಯದಲ್ಲೂ ಮೊದಲ ಎಸೆತದಲ್ಲೇ ಕೊಹ್ಲಿ ಔಟಾದರು.

ಕ್ರಮವಾಗಿ ಎರಡು ವರ್ಷ ಹಸಿರು ಜರ್ಸಿಯಲ್ಲಿ ಆಡಿದ ಎರಡು ಪಂದ್ಯಗಳಲ್ಲೂ ಕೊಹ್ಲಿ ಖಾತೆ ತೆರಯದೇ ಪೆವಲಿಯನ್​ಗೆ ನಿರ್ಗಮಿಸಿದರು. ಇದನ್ನು ನೋಡಿದರೆ ಕೊಹ್ಲಿಗೆ ಹಸಿರು ಜರ್ಸಿ ಹೊಂದುವುದಿಲ್ಲ ಎಂದು ಕಾಣುತ್ತದೆ. ಹೀಗೊಂದು ಚರ್ಚೆ ಸಾಮಾಜಿಕ ಜಾಲತಾಣದಲ್ಲೂ ನಡೆಯುತ್ತಿದೆ.

ಇದನ್ನು ಬಿಟ್ಟರೆ ನಿನ್ನೆಯ ಪಂದ್ಯದಲ್ಲಿ ಆರ್​ಸಿಬಿ ರೋಚಯ ಜಯ ದಾಖಲಿಸಿತು. ಮೊದಲು ಬ್ಯಾಟಿಂಗ್​ ಮಾಡಿದ ಆರ್​ಸಿಬಿ ನಾಯಕ ಫಾಪ್​ ಡುಪ್ಲಿಸಿಸ್ (62)​ ಮತ್ತು ಗ್ಲೇನ್​ ಮ್ಯಾಕ್ಸ್​ವೆಲ್ (77) ಅಬ್ಬರದ ಅರ್ಧಶತಕಗಳ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 189 ರನ್​ ಕಲೆ ಹಾಕಿತು. ಗುರಿ ಬೆನ್ನತ್ತಿದ ರಾಯಲ್ಸ್​ ತಂಡ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 182 ರನ್​ ಗಳಿಸಿತು. ಅಂತಿಮವಾಗಿ ಆರ್​ಸಿಬಿ 7 ರನ್​ಗಳಿಂದ ರೋಚಕ ಜಯ ದಾಖಲಿಸಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net