ಅನಿರ್ದಿಷ್ಟಾವಧಿವರೆಗೆ ಐಪಿಎಲ್ ಮುಂದೂಡಿಕೆ: ಪರಿಸ್ಥಿತಿ ಸುಧಾರಿಸಿದ ಬಳಿಕ ಮುಂದಿನ ನಿರ್ಧಾರ

ipl 31 mar 20
Published on

ನವದೆಹಲಿ: ಕರೊನಾ ವೈರಸ್ ಭೀತಿಯಿಂದಾಗಿ ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿ ಐಪಿಎಲ್​ನ 13ನೇ ಆವೃತ್ತಿಯನ್ನು ಅನಿರ್ದಿಷ್ಟಾವಧಿಯವರೆಗೆ ಆಯೋಜಿಸುವುದಿಲ್ಲ ಎಂದು ಬಿಸಿಸಿಐ ಗುರುವಾರ ಅಧಿಕೃತವಾಗಿ ಪ್ರಕಟಿಸಿದೆ. ಮೂಲ ವೇಳಾಪಟ್ಟಿಯ ಪ್ರಕಾರ ಮಾರ್ಚ್ 29ರಂದು ಆರಂಭಗೊಳ್ಳಬೇಕಾಗಿದ್ದ ಐಪಿಎಲ್ ಟೂರ್ನಿಯನ್ನು ಏಪ್ರಿಲ್ 15ರವರೆಗೆ ಮುಂದೂಡಲಾಗಿತ್ತು. ದೇಶದಲ್ಲಿ ಲಾಕ್​ಡೌನ್ ಮೇ 3ರವರೆಗೆ ವಿಸ್ತರಣೆಗೊಂಡ ಬೆನ್ನಲ್ಲೇ ಐಪಿಎಲ್ ಕೂಡ ಅನಿರ್ದಿಷ್ಟಾವಧಿಯವರೆಗೆ ಮುಂದೂಡಲ್ಪಡುವುದು ಖಚಿತಗೊಂಡಿತ್ತು. ಇದೀಗ ಬಿಸಿಸಿಐ ಈ ವಿಷಯವನ್ನು ಅಧಿಕೃತವಾಗಿ ಪ್ರಕಟಿಸಿದೆ. ಟೂರ್ನಿಯ ಎಲ್ಲ 8 ಫ್ರಾಂಚೈಸಿಗಳ ಮಾಲೀಕರಿಗೆ ಬಿಸಿಸಿಐ ಈ ಮೊದಲೇ ವಿಷಯವನ್ನು ತಿಳಿಸಿತ್ತು ಎನ್ನಲಾಗಿದೆ.

’ಜಾಗತಿಕ ಆರೋಗ್ಯ ಪರಿಸ್ಥಿತಿ ಯನ್ನು ಮತ್ತು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಲಾಕ್​ಡೌನ್ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು 2020ರ ಐಪಿಎಲ್ ಟೂರ್ನಿಯನ್ನು ಮುಂದಿನ ಆದೇಶದವರೆಗೆ ಅಮಾನತಿನಲ್ಲಿಡಲು ಐಪಿಎಲ್ ಆಡಳಿತ ಮಂಡಳಿ ನಿರ್ಧರಿಸಿದೆ’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ತಿಳಿಸಿದ್ದಾರೆ.

‘ದೇಶದ ಜನರ ಮತ್ತು ನಮ್ಮ ಕ್ರೀಡಾಕೂಟದಲ್ಲಿ ಒಳಗೊಳ್ಳುವ ಎಲ್ಲರ ಆರೋಗ್ಯ ಮತ್ತು ಸುರಕ್ಷತೆ ಪ್ರಮುಖ ಆದ್ಯತೆಯಾಗಿರುತ್ತದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸಿ ಸುರಕ್ಷಿತ ವಾತಾವರಣ ನಿರ್ವಣಗೊಂಡಾಗ ಮಾತ್ರ ಟೂರ್ನಿಯನ್ನು ಆಯೋಜಿಸಲು ಬಿಸಿಸಿಐ ಜತೆಗೆ ಫ್ರಾಂಚೈಸಿ ಮಾಲೀಕರು, ಪ್ರಸಾರ ಸಂಸ್ಥೆ, ಪ್ರಾಯೋಜಕರು ಮತ್ತು ಟೂರ್ನಿಯಲ್ಲಿ ಒಳಗೊಂಡಿರುವ ಎಲ್ಲರೂ ಬಯಸಿದ್ದಾರೆ’ ಎಂದು ಜಯ್ ಷಾ ವಿವರಿಸಿದ್ದಾರೆ.

ದೇಶದಲ್ಲಿ ಕ್ರಿಕೆಟ್ ಯಾವಾಗ ಪುನರಾರಂಭಗೊಳ್ಳಲಿದೆ ಎಂಬ ಬಗ್ಗೆ ಬಿಸಿಸಿಐ ಯಾವುದೇ ಮಾಹಿತಿಯನ್ನು ನೀಡಿಲ್ಲ. ಆದರೆ ಪರಿಸ್ಥಿತಿಯನ್ನು ಬಿಸಿಸಿಐ ಸೂಕ್ಷ್ಮವಾಗಿ ಗಮನಿಸಿ ಪರಿಶೀಲನೆ ನಡೆಸಲಿದೆ. ಜತೆಗೆ ಕೇಂದ್ರ ಸರ್ಕಾರ ಮತ್ತು ಎಲ್ಲ ರಾಜ್ಯ ಸರ್ಕಾರಗಳಿಂದ ಸೂಕ್ತ ಮಾರ್ಗದರ್ಶನಗಳನ್ನು ಪಡೆಯಲಿದೆ ಎಂದು ಜಯ್ ಷಾ ತಿಳಿಸಿದ್ದಾರೆ.

ಮುಂದೂಡಿಕೆ ಮಾತ್ರ, ರದ್ದು ಇಲ್ಲ!: ಕರೊನಾ ಭೀತಿಯಿಂದಾಗಿ ಬಿಸಿಸಿಐ, ಐಪಿಎಲ್ ಟೂರ್ನಿಯನ್ನು ಮುಂದೂಡಿಕೆ ಮಾಡಿದ್ದರೂ, 2020ರ ಟೂರ್ನಿಯನ್ನು ರದ್ದುಗೊಳಿಸುವ ಬಗ್ಗೆ ಚಿಂತನೆಯನ್ನೂ ಮಾಡಿಲ್ಲ. ಬಿಸಿಸಿಐ ಪಾಲಿಗೆ 2008ರಿಂದ ಚಿನ್ನದ ಮೊಟ್ಟೆ ಇಡುವ ಕೋಳಿ ಎನಿಸಿರುವ ಐಪಿಎಲ್​ನ ಈ ವರ್ಷದ ಆವೃತ್ತಿಯಿಂದ 3,500 ಕೋಟಿ ರೂ.ಗೂ ಅಧಿಕ ಮೊತ್ತದ ಆದಾಯ ನಿರೀಕ್ಷೆ ಇದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕ್ರಿಕೆಟ್ ಚಟುವಟಿಕೆ ಪುನರಾರಂಭಗೊಂಡಾಗ, ಇತರ ಅಂತಾರಾಷ್ಟ್ರೀಯ ಟೂರ್ನಿಗಳಿಗಿಂತ ಐಪಿಎಲ್ ಆಯೋಜನೆಯೇ ಬಿಸಿಸಿಐನ ಪ್ರಮುಖ ಆದ್ಯತೆಯಾಗಿರುವುದರಲ್ಲಿ ಅನುಮಾನವಿಲ್ಲ. ಭಾರತ ಮಾತ್ರವಲ್ಲದೆ ವಿದೇಶಿ ಕ್ರಿಕೆಟಿಗರಿಗೂ ಇದು ದುಬಾರಿ ಸಂಭಾವನೆ ಲಭಿಸುವ ಟೂರ್ನಿಯಾಗಿದೆ. ಹೀಗಾಗಿ ಒಟ್ಟಾರೆ ಎಲ್ಲರ ಹಿತದೃಷ್ಟಿಯಿಂದ ಈ ವರ್ಷದ ಐಪಿಎಲ್ ಟೂರ್ನಿ ಆಯೋಜಿಸುವುದು ಅಗತ್ಯವಾಗಿದೆ.

ಕನಿಷ್ಠ 37 ದಿನ ಬೇಕು

ಬಿಸಿಸಿಐ ಹಾಕಿಕೊಂಡಿರುವ ಯೋಜನೆಯ ಪ್ರಕಾರ ಪೂರ್ಣ ಪ್ರಮಾಣದ ಐಪಿಎಲ್ ಆಯೋಜನೆಗೆ ಕನಿಷ್ಠ 37 ದಿನಗಳ ಕಾಲಾವಕಾಶ ಬೇಕು. ಸಾಮಾನ್ಯವಾಗಿ ಐಪಿಎಲ್ ಟೂರ್ನಿ 54ರಿಂದ 60 ದಿನಗಳ ಕಾಲ ನಡೆಯುತ್ತವೆ. ಆದರೆ 2009ರಲ್ಲಿ ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಗೊಂಡಿದ್ದ ಐಪಿಎಲ್ ಟೂರ್ನಿಯನ್ನು ಕೇವಲ 37 ದಿನಗಳಲ್ಲೇ ಮುಗಿಸಲಾಗಿತ್ತು. ಹೀಗಾಗಿ ಅದೇ ಮಾದರಿಯಲ್ಲಿ ಈ ಬಾರಿಯೂ ಪೂರ್ಣ ಪ್ರಮಾಣದ ಐಪಿಎಲ್ ಆಯೋಜಿಸಲು ಬಿಸಿಸಿಐ ಸಿದ್ಧವಾಗಿದೆ. ಇನ್ನು ಪಂದ್ಯಗಳ ಸಂಖ್ಯೆಯನ್ನು ಕಡಿತಗೊಳಿಸಿ ಇನ್ನಷ್ಟು ಕಡಿಮೆ ದಿನಗಳಲ್ಲಿ ಐಪಿಎಲ್ ಟೂರ್ನಿಯನ್ನು ಮುಗಿಸಿದ್ದೇ ಆದರೆ ಅದರಿಂದ ಬಿಸಿಸಿಐ ಜತೆಗೆ ಫ್ರಾಂಚೈಸಿಗಳು ಮತ್ತು ನೇರಪ್ರಸಾರ ವಾಹಿನಿಯೂ ನಷ್ಟ ಎದುರಿಸಬೇಕಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net