ಐಪಿಎಲ್ ಉದ್ಘಾಟನಾ ಪಂದ್ಯವನ್ನು ಎಷ್ಟು ಕ್ರಿಕೆಟ್ ಪ್ರೇಮಿಗಳು ವೀಕ್ಷಿಸಿದ್ದಾರೆ ಗೊತ್ತೇ..?

IPL-CSK AND MUMBAI FOR WEB
Published on

ದುಬೈ: ಕಳೆದ 6 ತಿಂಗಳಿಂದ ವಿಶ್ವ ಕ್ರಿಕೆಟ್ ಪ್ರಿಯರು ಕಾತರದಿಂದ ಕಾಯುತ್ತಿದ್ದ 13ನೇ ಐಪಿಎಲ್‌ಗೆ ಯುಎಇಯಲ್ಲಿ ಚಾಲನೆ ಸಿಕ್ಕಿ ಮೂರು ದಿನಗಳಾಗಿವೆ. ಕರೊನಾ ವೈರಸ್ ಭೀತಿ ನಡುವೆಯೂ ಆರಂಭಗೊಂಡ ಲೀಗ್‌ನ ಉದ್ಘಾಟನಾ ಪಂದ್ಯ ಮಾತ್ರ ದಾಖಲೆಯನ್ನೇ ಸೃಷ್ಟಿಸಿದೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಟೂರ್ನಿಯ ಉದ್ಘಾಟನಾ ಪಂದ್ಯವನ್ನು 20 ಕೋಟಿ ಮಂದಿ ವೀಕ್ಷಿಸಿದ್ದಾರೆ. ಧೋನಿ ಸಾರಥ್ಯದ ಚೆನ್ನೈ ತಂಡ 5 ವಿಕೆಟ್‌ಗಳಿಂದ ಮುಂಬೈ ತಂಡವನ್ನು ಮಣಿಸಿತ್ತು. ಈ ಕುರಿತು ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ವಿಶ್ವದ ಯಾವುದೇ ಕ್ರೀಡಾಲೀಗ್‌ನ ಉದ್ಘಾಟನಾ ಪಂದ್ಯವನ್ನು ಇಷ್ಟು ದೊಡ್ಡ ಸಂಖ್ಯೆಯಲ್ಲಿ ವೀಕ್ಷಿಸಿಲ್ಲ. ಇದೊಂದು ದಾಖಲೆಯಾಗಿದೆ. 20 ಕೋಟಿ ವೀಕ್ಷಕರು ಉದ್ಘಾಟನಾ ಪಂದ್ಯ ವೀಕ್ಷಿಸಿದ್ದು, ಟೂರ್ನಿಯಲ್ಲಿ ಇದುವರೆಗೂ ಅತಿಹೆಚ್ಚು ಮಂದಿ ವೀಕ್ಷಿಸಿದ ಉದ್ಘಾಟನಾ ಪಂದ್ಯ ಇದಾಗಿದೆ ಎಂದು ಜಯ್ ಷಾ ಹೇಳಿದ್ದಾರೆ. ‘ಬಿಎಆರ್‌ಸಿ (ಬಾರ್ಕ್) ಮೂಲಗಳ ಪ್ರಕಾರ, ಡ್ರೀಮ್ ಇಲೆವೆನ್ ಐಪಿಎಲ್ ನೂತನ ದಾಖಲೆ ನಿರ್ಮಿಸಿದೆ. ಇದುವರೆಗೂ ಯಾವುದೇ ಕ್ರೀಡಾ ಲೀಗ್‌ನ ಉದ್ಘಾಟನಾ ಪಂದ್ಯವನ್ನು ಇಷ್ಟು ಸಂಖ್ಯೆಯಲ್ಲಿ ಪ್ರೇಕ್ಷಕರು ವೀಕ್ಷಿಸಿರಲಿಲ್ಲ ಎಂದು ಷಾ ಹೇಳಿದ್ದಾರೆ.

ಮಾರ್ಚ್ 29ಕ್ಕೆ ಆರಂಭಗೊಳ್ಳಬೇಕಿದ್ದ ಟೂರ್ನಿಯೂ ಕರೊನಾ ವೈರಸ್ ಭೀತಿಯಿಂದಾಗಿ ಅನಿದಿರ್ಷ್ಟಾವಧಿವರೆಗೂ ಮುಂದೂಡಿಕೆಯಾಗಿತ್ತು. ಬಳಿಕ ಟಿ20 ವಿಶ್ವಕಪ್ ಮುಂದಿನ ವರ್ಷಕ್ಕೆ ಮುಂದೂಡಿಕೆಯಾದ ಬೆನ್ನಲ್ಲೇ ಬಿಸಿಸಿಐ, ಐಪಿಎಲ್ ಆಯೋಜನೆಗೆ ಸಿದ್ಧತೆ ಕೈಗೊಂಡಿತು. ಭಾರತದಲ್ಲಿ ಕೋವಿಡ್-19 ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಭಾರತೀಯ ಕಾಲಮಾನಕ್ಕೆ ಹೊಂದಿಕೊಳ್ಳುವ ಯುಎಇಗೆ ಟೂರ್ನಿ ಸ್ಥಳಾಂತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net