

ಶಾರ್ಜಾ: ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಲ್ ಟೂರ್ನಿಯ ನಾಲ್ಕನೇ ಪಂದ್ಯದಲ್ಲಿ 16 ರನ್ಗಳ ಅಮೋಘ ಜಯ ಸಾಧಿಸುವ ಮೂಲಕ ರಾಜಸ್ಥಾನ ರಾಯಲ್ಸ್ ತಂಡ ಪ್ರಸಕ್ತ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ರಾಜಸ್ಥಾನ ನೀಡಿದ 217 ರನ್ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 200 ರನ್ ಕಲೆಹಾಕುವ ಮೂಲಕ ರಾಯಲ್ಸ್ ಎದುರು ಸೋಲಿಗೆ ಶರಣಾಯಿತು.
ಸಿಎಸ್ಕೆ ಪರ ಆರಂಭಿಕರಾಗಿ ಕಣಕ್ಕಿಳಿದ ಮುರಳಿ ವಿಜಯ್ ಮತ್ತು ಶೇನ್ ವ್ಯಾಟ್ಸನ್ 56 ರನ್ಗಳ ಜತೆಯಾಟದೊಂದಿಗೆ ಉತ್ತಮ ಆರಂಭ ಒದಗಿಸಿದರು. ಆದರೆ, 33 ರನ್ ಗಳಿಸಿದ್ದ ವ್ಯಾಟ್ಸನ್ ಹಾಗೂ 21 ರನ್ ಗಳಿಸಿದ್ದ ವಿಜಯ್ ಬ್ಯಾಕ್ ಟು ಬ್ಯಾಕ್ ವಿಕೆಟ್ ಒಪ್ಪಿಸಿದ್ದು ತಂಡಕ್ಕೆ ಹಿನ್ನೆಡೆಯಾಯಿತು.
ಇತ್ತ ಫ್ಲಾಫ್ ಡುಪ್ಲೆಸಿಸ್ಗೆ ಸಾಥ್ ನೀಡುತ್ತಿದ್ದ ಸ್ಯಾಮ್ ಕರನ್ (17) ರನ್ ಗಳಿಸಿ ಕ್ಯಾಚಿತ್ತು ನಿರ್ಗಮಿಸಿದರು. ಇದರ ಬೆನಲ್ಲೇ ರುತುರಾಜ್ ಗಾಯಕ್ವಾಡ್ ರನ್ ಖಾತೆ ತೆರೆಯದೇ ಹಿಂದಿರುಗಿದರು. ಬಳಿಕ ಬಂದ ಕೇದರ್ ಜಾಧವ್ (22) ಉತ್ತಮವಾಗಿ ಆಡಿದರೂ ಸಹ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ.
ಮೂರನೇ ಕ್ರಮಾಂಕದಲ್ಲಿ ಇಳಿದು ಕೊನೆಯವರೆಗೂ ಸ್ಫೋಟಕ ಆಟವಾಡಿದ ಡು ಪ್ಲೆಸಿಸ್ ಕೇವಲ 37 ಎಸೆತಗಳಲ್ಲಿ 7 ಸಿಕ್ಸರ್, 1 ಬೌಂಡರಿ ನೆರವಿನಿಂದ 72 ರನ್ ಗಳಿಸಿ ಏಕಾಂಗಿಯಾಗಿ ಹೋರಾಡಿದರೂ. ಆದರೆ, ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ಗಳು ಸಾಥ್ ನೀಡದೇ ಇದ್ದಿದ್ದು ತಂಡಕ್ಕೆ ಹಿನ್ನೆಡೆಯಾಯಿತು. ಕೊನೆಯಲ್ಲಿ ಅಬ್ಬರಿಸಿದ ನಾಯಕ ಧೋನಿ ಕೇವಲ 16 ಎಸೆತಗಳಲ್ಲಿ 3 ಸಿಕ್ಸರ್ ನೆರವಿನಿಂದ ಅಜೇಯ 28 ರನ್ ಗಳಿಸಿದರೂ ಗೆಲವು ಮಾತ್ರ ದಕ್ಕಲಿಲ್ಲ. ರವೀಂದ್ರ ಜಡೇಜಾ 1 ರನ್ ಗಳಿಸಿ ಅಜೇಯರಾಗಿ ಉಳಿದರು.
ರಾಜಸ್ಥಾನ ಪರ ರಾಹುಲ್ ತೆವಾಟಿಯಾ ಪ್ರಮುಖ ಮೂರು ವಿಕೆಟ್ ಕಬಳಿಸಿ ಮಿಂಚಿದರು. ಉಳಿದಂತೆ ಜೋಫ್ರಾ ಆರ್ಚರ್, ಶ್ರೇಯಸ್ ಗೋಪಾಲ್ ಮತ್ತು ಟಾಮ್ ಕುರನ್ ತಲಾ 1 ವಿಕೆಟ್ಗೆ ತೃಪ್ತಿಪಟ್ಟರು.
ಅಬ್ಬರಿಸಿದ ಸ್ಯಾಮ್ಸನ್-ಸ್ಮಿತ್
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ರಾಜಸ್ಥಾನ ರಾಯಲ್ಸ್ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 216 ರನ್ ಕಲೆಹಾಕಿತು. ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ (6) ತಂಡದ ಮೊತ್ತ 11 ಇರುವಾಗಲೇ ಕ್ಯಾಚಿತ್ತು ನಿರ್ಗಮಿಸುವ ಮೂಲಕ ಆರಂಭಿಕ ಆಘಾತ ನೀಡಿದರು. ಬಳಿಕ ನಾಯಕ ಸ್ಟೀವ್ ಸ್ಮಿತ್ ಜತೆಗೂಡಿದ ಯುವ ಆಟಗಾರ ಸಂಜು ಸ್ಯಾಮ್ಸನ್ ಶತಕದ ಜತೆಯಾಟವಾಡಿ ತಂಡಕ್ಕೆ ಭದ್ರ ಬುನಾದಿ ಹಾಕಿದರು.
ಕೇವಲ 34 ಎಸೆತಗಳಲ್ಲಿ 9 ಸಿಕ್ಸರ್, 1 ಬೌಂಡರಿ ನೆರವಿನೊಂದಿಗೆ ಸ್ಫೋಟಕ 74 ರನ್ ಕಲೆಹಾಕಿದ್ದ ಸ್ಯಾಮ್ಸನ್ ಬಿರುಸಿನ ಹೊಡೆತಕ್ಕೆ ಕೈಹಾಕಿ ಕ್ಯಾಚಿತ್ತು ನಿರ್ಗಮಿಸಿದರು. ಇದರ ಬೆನ್ನಲ್ಲೇ ಬಾಲಂಗೋಚಿಯಂತೆ ಡೇವಿಡ್ ಮಿಲ್ಲರ್ (0), ರಾಬಿನ್ ಉತ್ತಪ್ಪ (5), ರಾಹುಲ್ ತೆವಾಟಿಯಾ (10), ರಿಯಾನ್ ಪರಾಗ್ (6) ಟಾಮ್ ಕರನ್ (0) ವಿಕೆಟ್ ಒಪ್ಪಿಸಿ ಪೆವಲಿಯನ್ ಸೇರಿದರು.
ಇತ್ತ ಆರಂಭದಿಂದಲೂ ನಾಯಕನ ಜವಬ್ದಾರಿಯುತ ಆಟವಾಡಿದ ಸ್ಮಿತ್ 47 ಎಸೆತಗಳಲ್ಲಿ 4 ಸಿಕ್ಸರ್, 4 ಬೌಂಡರಿ ನೆರವಿನೊಂದಿಗೆ 69 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಕೊನೆಯಲ್ಲಿ ಅಬ್ಬರಿಸಿದ ಜೋಫ್ರಾ ಆರ್ಚರ್ ಕೇವಲ 8 ಎಸೆತಗಳಲ್ಲಿ 4 ಸಿಕ್ಸರ್ ನೆರವಿನೊಂದಿಗೆ 27* ರನ್ ಗಳಿಸಿದರೆ, ಟಾಮ್ ಕರನ್ (10*) ರನ್ ಕಲೆಹಾಕಿ ಅಜೇಯರಾಗಿ ಉಳಿದರು.
ಸಿಎಸ್ಕೆ ಪರ ಸ್ಯಾಮ್ ಕರನ್ 3 ವಿಕೆಟ್ ಕಬಳಿಸಿದರೆ, ದೀಪಕ್ ಚಹಾರ್, ಲುಂಗಿ ಎನ್‌ಗಿಡಿ ಹಾಗೂ ಪಿಯೂಷ್ ಚಾವ್ಲ ತಲಾ 1 ವಿಕೆಟ್ ಪಡೆದರು. (ಏಜೆನ್ಸೀಸ್)