ಬ್ಯಾಟಿಂಗ್​-ಬೌಲಿಂಗ್​ನಲ್ಲಿ ಮಿಂಚಿದ ಮುಂಬೈ: ಕೋಲ್ಕತ ವಿರುದ್ಧ ರೋಹಿತ್​ ಪಡೆಗೆ ಭರ್ಜರಿ ಗೆಲುವು!

Kolkata
Published on

ಅಬುದಾಬಿ: ಇಲ್ಲಿನ ಶೇಖ್ ಜಾಯೆದ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ ಟೂರ್ನಿಯ 5ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ತಂಡವು ಕೋಲ್ಕತ ನೈಟ್​ ರೈಡರ್ಸ್​ ವಿರುದ್ಧ 49 ರನ್​ಗಳ ಜಯ ಸಾಧಿಸಿತು.

ಮುಂಬೈ ಇಂಡಿಯನ್ಸ್​ ನೀಡಿದ್ದ 196 ರನ್​ಗಳ ಗುರಿ ಬೆನ್ನತ್ತಿದ ಕೋಲ್ಕತ ತಂಡ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ ಕಳೆದುಕೊಂಡು 149 ರನ್​ ಕಲೆಹಾಕಿತು.

ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಶುಭಮಾನ್ ಗಿಲ್ (7) ಹಾಗೂ ಸುನೀಲ್​ ನರೇನ್​ (9) ವಿಕೆಟ್​ ಒಪ್ಪಿಸುವ ಮೂಲಕ ಆರಂಭಿಕ ಆಘಾತ ನೀಡಿದರು. ತಂಡವು 25 ರನ್​ಗೆ ಪ್ರಮುಖ ಎರಡು ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಬಳಿಕ ಬಂದ ನಾಯಕ ದಿನೇಶ್​ ಕಾರ್ತಿಕ್​ (30), ನಿತೀಶ್ ರಾಣ (24) ಜತೆಗೂಡಿ ತಂಡಕ್ಕೆ ಚೇತರಿಕೆ ತಂದುಕೊಟ್ಟರೂ ಬ್ಯಾಕ್​ ಟು ಬ್ಯಾಕ್​ ವಿಕೆಟ್​ ಒಪ್ಪಿಸುವ ಮೂಲಕ ಮತ್ತೊಮ್ಮೆ ಆಘಾತ ನೀಡಿದರು. ಕೇವಲ 77 ರನ್​ಗೆ ಪ್ರಮುಖ 4 ವಿಕೆಟ್​ ಕಳೆದುಕೊಂಡ ಕೋಲ್ಕತ ಗೆಲವಿನ ಆಸೆಯನ್ನು ಕೈ ಚೆಲ್ಲಿತು.

ಬಳಿಕ ಬಂದ ಆ್ಯಂಡ್ರೆ ರಸೆಲ್​ (11), ಇಯಾನ್​ ಮಾರ್ಗನ್ (16)​ ಮತ್ತು ನಿಖಿಲ್​ ನಾಯಕ್​ (1) ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲದೆ ಔಟಾಗಿದ್ದು, ಕೋಲ್ಕತ ಪಾಳಯಕ್ಕೆ ಸೋಲು ಬಹುತೇಕ ಖಚಿತವಾಯಿತು. ಕೊನೆಯಲ್ಲಿ ಕೇವಲ 12 ಎಸೆತಗಳಲ್ಲಿ 4 ಸಿಕ್ಸರ್​, 1 ಬೌಂಡರಿ ನೆರವಿನಿಂದ ಪ್ಯಾಟ್​ ಕ್ಯೂಮಿನ್ಸ್​ ಅಬ್ಬರಿಸಿದ್ದು, ಕೋಲ್ಕತ ಪಾಳಯಕ್ಕೆ ಗೆಲುವಿನ ಆಸೆ ಚಿಗುರಿತ್ತು. ಆದರೆ, ಕ್ಯೂಮಿನ್ಸ್​ ಕ್ಯಾಚಿತ್ತು ನಿರ್ಗಮಿಸಿದ್ದು, ಸೋಲು ನಿಶ್ಚಿತವಾಯಿತು. ಉಳಿದಂತೆ ಶಿವಂ ಮವಿ (9) ರನ್​ ಗಳಿಸಿ ಔಟಾದರೆ, ಕುಲದೀಪ್​ ಯಾದವ್​ 1 ರನ್​ ಗಳಿಸಿ ಅಜೇಯರಾಗಿ ಉಳಿದರು.

ಮುಂಬೈ ಪರ ಟ್ರೆಂಟ್​ ಬೋಲ್ಟ್​, ಜೇಮ್ಸ್​ ಪ್ಯಾಟಿನ್ಸನ್​, ಜಸ್ಪ್ರಿತ್​ ಬೂಮ್ರಾ ಮತ್ತು ರಾಹಲ್​ ಚಾಹರ್​ ತಲಾ 2 ವಿಕೆಟ್​ ಪಡೆದರು. ಉಳಿದಂತೆ ಕೀರನ್​ ಪೋಲಾರ್ಡ್​ 1 ವಿಕೆಟ್​ ಪಡೆದರು.

ರೋಹಿತ್​ ಅಬ್ಬರದ ಬ್ಯಾಟಿಂಗ್​

ಇದಕ್ಕೂ ಮುನ್ನ ಟಾಸ್​ ಸೋತು ಬ್ಯಾಟಿಂಗ್​ ಆರಂಭಿಸಿದ ಮುಂಬೈ ತಂಡ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 195 ರನ್​ ಕಲೆಹಾಕಿತು. ತಂಡದ ಆರಂಭಿಕರಾಗಿ ಕಣಕ್ಕಿಳಿದ ಕ್ವಿಂಟನ್​ ಡಿ ಕಾಕ್​ ಕೇವಲ 1 ರನ್​ ಗಳಿಸಿ ಔಟಾಗುವ ಮೂಲಕ ಆರಂಭಿಕ ಆಘಾತ ನೀಡಿದರು. ಬಳಿಕ ರೋಹಿತ್​ ಶರ್ಮಾ ಜತೆಗೂಡಿದ ಸೂರ್ಯಕುಮಾರ್​ ಯಾದವ್​ 90 ರನ್​ಗಳ ಜತೆಯಾಟವಾಡಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಈ ವೇಳೆ 47 ರನ್​ ಕಲೆಹಾಕಿದ್ದ ಯಾದವ್​ ರನೌಟ್​ ಆಗುವ ಮೂಲಕ ಅರ್ಧಶತಕದಿಂದ ವಂಚಿತರಾದರು. ಬಳಿಕ ಬಂದ ಸೌರಭ್​ ತಿವಾರಿಯು ಸಹ 21 ರನ್​ಗಳ ಕಾಣಿಕೆ ನೀಡಿ ಪೆವಲಿಯನ್​​ ಸೇರಿದರು.

ಇತ್ತ ಆರಂಭದಿಂದಲೂ ಸ್ಫೋಟಿಸಿದ ರೋಹಿತ್​ ಶರ್ಮಾ 6 ಸಿಕ್ಸರ್​, 3 ಬೌಂಡರಿ ನೆರವಿನೊಂದಿಗೆ ಭರ್ಜರಿ 80 ರನ್​ ಕಲೆಹಾಕುವ ಮೂಲಕ ನಾಯಕ ಜವಬ್ದಾರಿಯುತ ಆಟವಾಡಿದರು. ಉಳಿದಂತೆ ಹಾರ್ದಿಕ್​ ಪಾಂಡ್ಯ (18) ರನ್​ ಗಳಿಸಿ ಔಟಾದರೆ, ಕೀರನ್​ ಪೊಲಾರ್ಡ್​ (11*) ಮತ್ತು ಕೃನಾಲ್​ ಪಾಂಡ್ಯ (1*) ಅಜೇಯರಾಗಿ ಉಳಿದರು.

ಕೋಲ್ಕತ ಪರ ಶಿವಮ್​ ಮವಿ 2 ವಿಕೆಟ್​ ಪಡೆದರೆ, ಸುನೀಲ್​ ನರೇನ್​ ಮತ್ತು ಆ್ಯಂಡ್ರೆ ರಸೆಲ್​ ತಲಾ 1 ವಿಕೆಟ್​ ಪಡೆದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net