

ಬೆಂಗಳೂರು: ಕರೊನಾ ಹಾವಳಿಯ ನಡುವೆ ಐಪಿಎಲ್ 13ನೇ ಆವೃತ್ತಿಯ ಆರು ತಿಂಗಳು ತಡವಾಗಿಯಾದರೂ ಅರಬ್ ರಾಷ್ಟ್ರ ಯುಎಇಯಲ್ಲಿ ಶನಿವಾರ ರೋಚಕ ಆರಂಭ ದೊರೆತಿದೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಫೇವರಿಟ್ ತಂಡವಾಗಿಯೇ ಉತ್ತಮ ಆರಂಭ ಕಂಡರೂ, ಬಳಿಕ ಚೆನ್ನೈ ಸೂಪರ್‌ಕಿಂಗ್ಸ್ ತಂಡ ನೀಡಿದ ತಿರುಗೇಟಿನಿಂದಾಗಿ ಮೊದಲ ಪಂದ್ಯದಲ್ಲಿ ಸೋಲುವ ಸಂಪ್ರದಾಯವನ್ನು ಸತತ 8ನೇ ಆವೃತ್ತಿಗೂ ವಿಸ್ತರಿಸಿತು.
436 ದಿನಗಳ ಕ್ರಿಕೆಟ್ ಮೈದಾನಕ್ಕಿಳಿದ ಎಂಎಸ್ ಧೋನಿ ಸಿಎಸ್‌ಕೆ ನಾಯಕರಾಗಿ ಕೈಗೊಂಡ ಕೆಲವು ನಿರ್ಧಾರಗಳು ವರದಾನವಾಗಿ ಪರಿಣಮಿಸಿದವು. ಸ್ಯಾಮ್ ಕರ‌್ರನ್ ಅವರನ್ನು ತಮಗಿಂತ ಮುನ್ನ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿಸಿದ ಧೋನಿ ನಿರ್ಧಾರ ಸಾಕಷ್ಟು ಅಚ್ಚರಿ ಸೃಷ್ಟಿಸಿತು. ಇದಲ್ಲದೆ ಫಾಫ್ ಡು ಪ್ಲೆಸಿಸ್ ಹಿಡಿದ 2 ಕ್ಯಾಚ್‌ಗಳು ಕೂಡ ಪಂದ್ಯದ ಚಿತ್ರಣವನ್ನೇ ಬದಲಾಯಿಸಿತು. ಇದೆಲ್ಲವನ್ನೂ ಸೇರಿಸಿ ಕ್ರಿಕೆಟ್ ಪ್ರೇಮಿಗಳು ಸಾಮಾಜಿಕ ಜಾಲತಾಣಗಳಲ್ಲಿ ಉದ್ಘಾಟನಾ ಪಂದ್ಯದ ಬಗ್ಗೆ ವಿವಿಧ ಮೀಮ್ಸ್‌ಗಳನ್ನು ಮಾಡಿದ್ದಾರೆ.
ಇದಲ್ಲದೆ ಸಿಎಸ್‌ಕೆ ಆರಂಭಿಕ ಮುರಳಿ ವಿಜಯ್ ಎಲ್‌ಬಿಡಬ್ಲ್ಯು ಆದ ಬೆನ್ನಲ್ಲಿಯೇ ಕನಿಷ್ಠ ಡಿಆರ್‌ಎಸ್ ಕೂಡ ಬಳಸದೆ ಡಗ್‌ಔಟ್‌ಗೆ ವಾಪಸ್ ಆಗಿದ್ದಕ್ಕೂ ಅಭಿಮಾನಿಗಳು ಅವರನ್ನು ಟ್ರೋಲ್ ಮಾಡಿದ್ದಾರೆ. ಅವರ ವಿರುದ್ಧದ ಎಲ್‌ಬಿಡಬ್ಲ್ಯು ತೀರ್ಪಿನಲ್ಲಿ ಚೆಂಡು ವಿಕೆಟ್‌ನಿಂದ ಹೊರಹೋಗುತ್ತಿದ್ದಂತೆ ಕಂಡರೂ, ಪ್ಲೆಸಿಸ್ ಡಿಆರ್‌ಎಸ್‌ಗೆ ಸಲಹೆ ನೀಡಿದರೂ, ವಿಜಯ್ ಡಗ್‌ಔಟ್‌ಗೆ ಮರಳಲು ಅವಸರ ತೋರಿದರೆಂದು ಕ್ರಿಕೆಟ್ ಪ್ರೇಮಿಗಳು ಟ್ರೋಲ್ ಮಾಡಿದ್ದಾರೆ.