ಇಂದು ಗುಜರಾತ್ ಟೈಟಾನ್ಸ್ - ಸನ್‌ರೈಸರ್ಸ್‌ ಮುಖಾಮುಖಿ;

ipl-15 srh and gujarat match preview for web
Published on

ಮುಂಬೈ: ಹ್ಯಾಟ್ರಿಕ್ ಗೆಲುವಿನಿಂದ ಬೀಗುತ್ತಿರುವ ಗುಜರಾತ್ ಟೈಟಾನ್ಸ್ ಹಾಗೂ ಸತತ 2 ಸೋಲಿನ ಬಳಿಕ ಗೆಲುವಿನ ಲಯ ಕಂಡುಕೊಂಡಿರುವ ಸನ್‌ರೈಸರ್ಸ್‌ ಹೈದರಾಬಾದ್ ತಂಡಗಳು ಐಪಿಎಲ್-15ರ ಪಂದ್ಯದಲ್ಲಿ ಸೋಮವಾರ ಎದುರಾಗಲಿವೆ. ಗುಜರಾತ್ ಟೂರ್ನಿಯಲ್ಲಿ ಇದುವರೆಗೂ ಅಜೇಯವಾಗಿರುವ ಏಕೈಕ ತಂಡವಾಗಿದೆ. ಕಳೆದ ಪಂದ್ಯದಲ್ಲಿ ಪಂಜಾಬ್ ಎದುರು ಆಲ್ರೌಂಡರ್ ರಾಹುಲ್ ತೆವಾಟಿಯ ಕಡೇ 2 ಎಸೆತಗಳಲ್ಲಿ 2 ಸಿಕ್ಸರ್ ಸಿಡಿಸುವ ಮೂಲಕ ಹಾರ್ದಿಕ್ ಪಾಂಡ್ಯ ಬಳಗ ಲಯ ತಪ್ಪದಂತೆ ನೋಡಿಕೊಂಡಿದ್ದರು. ಮತ್ತೊಂದೆಡೆ, ಹಾಲಿ ಚಾಂಪಿಯನ್ ಸಿಎಸ್‌ಕೆ ತಂಡವನ್ನು ಮಣಿಸಿ ಗೆಲುವಿನ ಖಾತೆ ತೆರೆದಿರುವ ಕೇನ್ ವಿಲಿಯಮ್ಸನ್ ಬಳಗ ಗುಜರಾತ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕುವ ಹಂಬಲದಲ್ಲಿದೆ.

ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಹಣಾಹಣಿಯಲ್ಲಿ ಗುಜರಾತ್ ಆರಂಭಿಕ ಶುಭಮಾನ್ ಗಿಲ್ ಮತ್ತೊಮ್ಮೆ ಕೇಂದ್ರಬಿಂದುವಾಗಲಿದ್ದಾರೆ. ಆಲ್ರೌಂಡರ್ ವಿಜಯ್ ಶಂಕರ್ ಬದಲಿಗೆ ಸ್ಥಾನ ಪಡೆದ ಸಾಯಿ ಸುದರ್ಶನ್ ಸಿಕ್ಕ ಅವಕಾಶವನ್ನು ಸೂಕ್ತವಾಗಿ ಬಳಸಿಕೊಂಡಿದ್ದಾರೆ. ಯುವ ಬೌಲರ್ ದರ್ಶನ ನಲಕಂಡೆ, ಲಾಕಿ ಫರ್ಗ್ಯುಸನ್, ಮೊಹಮದ್ ಶಮಿ, ರಶೀದ್ ಖಾನ್ ಒಳಗೊಂಡ ಬೌಲಿಂಗ್ ಪಡೆ ಬಲಿಷ್ಠವಾಗಿದೆ. ಸನ್‌ರೈಸರ್ಸ್‌ ತಂಡದ ಯುವ ಬ್ಯಾಟರ್ ಅಭಿಷೇಕ್ ಶರ್ಮ, ರಾಹುಲ್ ತ್ರಿಪಾಠಿ, ನಿಕೋಲಸ್ ಪೂರನ್ ಹಾಗೂ ಏಡನ್ ಮಾರ್ಕ್ರಮ್ ಒಳಗೊಂಡ ಬ್ಯಾಟಿಂಗ್ ಪಡೆ ಗುಜರಾತ್ ತಂಡ ಬಲಿಷ್ಠ ಬೌಲಿಂಗ್ ಅನ್ನು ಎದುರಿಸಲು ಸಜ್ಜಾಗಿದೆ.

ಟೀಮ್ ನ್ಯೂಸ್:

ಸನ್‌ರೈಸರ್ಸ್‌: ವೇಗದ ಎಸೆತಗಳ ಮೂಲಕ ಗಮನ ಸೆಳೆಯುತ್ತಿದ್ದರೂ ದುಬಾರಿಯಾಗುತ್ತಿರುವ ಉಮ್ರಾನ್ ಮಲಿಕ್ ಬದಲಿಗೆ ಕನ್ನಡಿಗ ಶ್ರೇಯಸ್ ಗೋಪಾಲ್ ಕಣಕ್ಕಿಳಿಯುವ ಸಾಧ್ಯತೆಗಳಿವೆ.

ಗುಜರಾತ್ ಟೈಟಾನ್ಸ್: ಸತತ ವೈಫಲ್ಯ ಅನುಭವಿಸುತ್ತಿರುವ ಅನುಭವಿ ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್ ಬದಲಿಗೆ ರಹಮಾನುಲ್ಲ ಗುರ್ಬಜ್ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

ಪಂದ್ಯ ಆರಂಭ: ರಾತ್ರಿ 7.30ಕ್ಕೆ

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net