ಇಂದು ಸನ್‌ರೈಸರ್ಸ್‌- ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿ ; ಉಭಯ ತಂಡಗಳಿಗೂ ಮಾಡು ಇಲ್ಲವೇ ಮಡಿ ಕದನ

Untitled-1
Published on

ಮುಂಬೈ: ಹ್ಯಾಟ್ರಿಕ್ ಸೋಲಿನ ಭೀತಿಯಲ್ಲಿರುವ ಸನ್‌ರೈಸರ್ಸ್‌ ಹೈದರಾಬಾದ್ ತಂಡ ಐಪಿಎಲ್-15ರ ಹಣಾಹಣಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಗುರುವಾರ ಬ್ರಬೋರ್ನ್ ಸ್ಟೇಡಿಯಂನಲ್ಲಿ ಎದುರಿಸಲಿದೆ. ಪ್ಲೇಆಫ್ ಹಂತಕ್ಕೇರಲು ಉಭಯ ತಂಡಗಳ ಪಾಲಿಗೆ ಈ ಪಂದ್ಯ ಮಹತ್ವ ಪಡೆದಿದೆ. ಉಭಯ ತಂಡಗಳಿಗೂ ಬ್ಯಾಟರ್‌ಗಳೇ ಕೈಕೊಡುತ್ತಿರುವುದು ದೊಡ್ಡ ಹಿನ್ನಡೆಯಾಗುತ್ತಿದೆ. ಅದರಲ್ಲೂ ಡೆಲ್ಲಿ ತಂಡದ ಸ್ಥಿತಿ ಹಗ್ಗದ ಮೇಲಿನ ನಡಿಗೆಯಂತಿದ್ದು, ಗೆದ್ದರಷ್ಟೇ ಪ್ಲೇಆಫ್ ಆಸೆ ಜೀವಂತವಾಗಿ ಉಳಿಯಲಿದೆ. ಮತ್ತೊಂದೆಡೆ, ಕೇನ್ ವಿಲಿಯಮ್ಸನ್ ಬಳಗ ಗೆಲುವಿನ ಹಳಿಗೇರುವ ವಿಶ್ವಾಸದಲ್ಲಿದೆ.

* ಗೆಲುವಿನ ಒತ್ತಡದಲ್ಲಿ ರಿಷಭ್ ಪಡೆ

ಸ್ಟಾರ್ ಆಟಗಾರರನ್ನೇ ಹೊಂದಿದ್ದರೂ ಇದುವರೆಗೂ ಗೆಲುವಿಗಿಂತ ಸೋಲನ್ನೇ ಹೆಚ್ಚಾಗಿ ಕಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಸರ್ವಾಂಗೀಣ ನಿರ್ವಹಣೆ ಬರಬೇಕಿದೆ. ಇದುವರೆಗೂ ಆಡಿರುವ 9 ಪಂದ್ಯಗಳಲ್ಲಿ ಕೇವಲ 4ರಲ್ಲಿ ಗೆದ್ದು, 5ರಲ್ಲಿ ಸೋತಿರುವ ಡೆಲ್ಲಿ ಕ್ಯಾಪಿಟಲ್ಸ್‌ಗೆ ತಂಡದ ಸಂಯೋಜನೆಯೇ ದೊಡ್ಡ ಸವಾಲಾಗಿದೆ. ಕುಲದೀಪ್ ಯಾದವ್ (17ವಿಕೆಟ್), ಖಲೀಲ್ ಅಹಮದ್, ಮುಸ್ತಾಫಿಜರ್ ರೆಹಮಾನ್‌ರಂಥ ಬಲಿಷ್ಠ ಬೌಲರ್‌ಗಳಿದ್ದಾರೆ. ನಾಯಕ ರಿಷಭ್ ಪಂತ್ (234), ಪೃಥ್ವಿ ಷಾ, ಡೇವಿಡ್ ವಾರ್ನರ್‌ರಂಥ ಸ್ಟಾರ್ ಬ್ಯಾಟರ್‌ಗಳು ತಂಡಕ್ಕೆ ಆಸರೆಯಾಗಬೇಕಿದೆ. ಆರಂಭಿಕರೂ ರನ್‌ಗಳಿಸಿದರಷ್ಟೇ ತಂಡದ ಭವಿಷ್ಯ ಅಡಗಿದೆ. ಮಧ್ಯಮ ಕ್ರಮಾಂಕದಲ್ಲಿ ಲಲಿತ್ ಯಾದವ್‌ಗೆ ಇತರರು ಸಾಥ್ ನೀಡಬೇಕಿದೆ. ಶಾರ್ದೂಲ್ ಠಾಕೂರ್ ವೈಫಲ್ಯದಿಂದ ಹೊರಬರಬೇಕಿದೆ.

* ಪುಟಿದೇಳುವ ವಿಶ್ವಾಸದಲ್ಲಿ ಸನ್‌ರೈಸರ್ಸ್‌

ಆರಂಭಿಕ ಎರಡು ಪಂದ್ಯಗಳಲ್ಲಿ ಸೋತು ಸತತ 5 ಪಂದ್ಯಗಳಲ್ಲಿ ಗೆದ್ದು ಬೀಗಿದ್ದ ಸನ್‌ರೈಸರ್ಸ್‌, ಇದೀಗ ಸತತ ಎರಡು ಸೋಲುಗಳಿಂದ ಕಂಗೆಟ್ಟಿದೆ. ಯುವ ಬ್ಯಾಟರ್ ಅಭಿಷೇಕ್ ಶರ್ಮ (324) ಆರಂಭಿಕ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ತೋರುತ್ತಿದ್ದರೂ ಇದೇ ಲಯವನ್ನು ತಂಡದ ಇತರ ಆಟಗಾರರು ಮುಂದುವರಿಸುತ್ತಿಲ್ಲ. ರಾಹುಲ್ ತ್ರಿಪಾಠಿ (228), ಏಡನ್ ಮಾರ್ಕ್ರಮ್ (263), ಕೇನ್ ವಿಲಿಯಮ್ಸನ್ ಬ್ಯಾಟಿಂಗ್‌ನಲ್ಲಿ ಜವಾಬ್ದಾರಿ ನಿಭಾಯಿಸಬೇಕಿದೆ. ವಿಕೆಟ್ ಕೀಪರ್-ಬ್ಯಾಟರ್ ನಿಕೋಲಸ್ ಪೂರನ್ ಉತ್ತಮ ಲಯದಲ್ಲಿರುವುದು ಬ್ಯಾಟಿಂಗ್ ಬಲ ಹೆಚ್ಚಿಸಿದೆ. ಸಿಎಸ್‌ಕೆ ನಿಸ್ತೇಜ ಬ್ಯಾಟಿಂಗ್ ಪ್ರದರ್ಶನವೇ ತಂಡದ ಸೋಲಿಗೆ ಪ್ರಮುಖ ಕಾರಣವಾಗಿತ್ತು. ಮಾರ್ಕೋ ಜಾನ್ಸೆನ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಟಿ.ನಟರಾಜನ್ ಒಳಗೊಂಡ ಬೌಲಿಂಗ್ ಪಡೆ ಡೆಲ್ಲಿ ಬ್ಯಾಟರ್‌ಗಳಿಗೆ ಕಂಟಕವಾದರೂ ಅಚ್ಚರಿಯಿಲ್ಲ

ಟೀಮ್ ನ್ಯೂಸ್

ಸನ್‌ರೈಸರ್ಸ್‌: ಸತತ ಎರಡು ಸೋಲಿನ ನಡುವೆಯೂ ತಂಡದಲ್ಲಿ ಬದಲಾವಣೆ ನಿರೀಕ್ಷಿಸುವಂತಿಲ್ಲ..

ಡೆಲ್ಲಿ ಕ್ಯಾಪಿಟಲ್ಸ್: ಬಹುತೇಕ ಹಿಂದಿನ ಪಂದ್ಯದಲ್ಲಿ ಆಡಿದ ತಂಡವೇ ಕಣಕ್ಕಿಳಿಯಲಿದೆ.

* ಕೇನ್ ವಿಲಿಯಮ್ಸನ್, ಇದುವರೆಗೂ 9 ಟಾಸ್‌ಗಳ ಪೈಕಿ 8ರಲ್ಲಿ ಗೆದ್ದಿದ್ದಾರೆ.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ಮುಖಾಮುಖಿ: 20, ಸನ್‌ರೈಸರ್ಸ್‌; 11, ಡೆಲ್ಲಿ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net