

ಪುಣೆ: ಸ್ಟಾರ್ ಬ್ಯಾಟರ್‌ಗಳು ಕೈಕೊಟ್ಟ ಪರಿಣಾಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್-15ರ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಎದುರು 29 ರನ್‌ಗಳಿಂದ ಸೋಲು ಕಂಡಿತು. ಯುವ ವೇಗದ ಬೌಲರ್ ಕುಲದೀಪ್ ಸೆನ್ (20ಕ್ಕೆ 4) ಹಾಗೂ ಅನುಭವಿ ಸ್ಪಿನ್ನರ್ ಆರ್.ಅಶ್ವಿನ್ (17ಕ್ಕೆ 3) ಜೋಡಿಯ ಮಾರಕ ದಾಳಿಗೆ ನಲುಗಿದ ಆರ್‌ಸಿಬಿ ಸಾಧಾರಣ ಮೊತ್ತ ಬೆನ್ನಟ್ಟಲು ವಿಫಲವಾಯಿತು. ಇದರಿಂದ ಲೀಗ್‌ನಲ್ಲಿ ಆರ್‌ಸಿಬಿ ಸತತ 2ನೇ ಸೋಲನುಭವಿಸಿದರೆ, ಹ್ಯಾಟ್ರಿಕ್ ಗೆಲುವಿನ ನಗೆ ಬೀರಿದ ಸಂಜು ಸ್ಯಾಮ್ಸನ್ ಪಡೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಆರ್ಸಿಬಿ ಎದುರು ಮೊದಲ ಹಣಾಹಣಿಯಲ್ಲಿ ಸೋಲು ಕಂಡಿದ್ದ ರಾಜಸ್ಥಾನ ರಾಯಲ್ಸ್ ತಂಡ ಸೇಡು ತೀರಿಸಿಕೊಂಡಿತು.
ಮಹಾರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ಆರಂಭಿಕ ಆಘಾತದ ನಡುವೆಯೂ ಯುವ ಬ್ಯಾಟರ್ ರಿಯಾನ್ ಪರಾಗ್ (56*ರನ್, 31 ಎಸೆತ, 3 ಬೌಂಡರಿ, 4 ಸಿಕ್ಸರ್) ಅರ್ಧಶತಕದಾಟದ ನೆರವಿನಿಂದ 8 ವಿಕೆಟ್‌ಗೆ 144 ರನ್ ಪೇರಸಿತು. ಬಳಿಕ ದಿಢೀರ್ ಕುಸಿತ ಕಂಡ ಆರ್‌ಸಿಬಿ 19.3 ಓವರ್‌ಗಳಲ್ಲಿ 115 ರನ್‌ಗಳಿಗೆ ಸರ್ವಪತನ ಕಂಡಿತು.