

ಮುಂಬೈ: ಹೊಸ ನಾಯಕರ ಸಾರಥ್ಯದಲ್ಲಿ ಹೊಸ ಸವಾಲಿಗೆ ಸಜ್ಜಾಗಿರುವ ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಐಪಿಎಲ್-15ರ ತಮ್ಮ ಮೊದಲ ಪಂದ್ಯದಲ್ಲಿ ಭಾನುವಾರ ಎದುರಾಗಲಿವೆ. ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಕದನದಲ್ಲಿ ಉಭಯ ತಂಡಗಳು ಶುಭಾರಂಭದ ನಿರೀಕ್ಷೆಯಲ್ಲಿವೆ. ಕಳೆದ 8 ವರ್ಷಗಳಿಂದ ಆರ್‌ಸಿಬಿ ತಂಡವನ್ನು ಮುನ್ನಡೆಸಿದ್ದ ವಿರಾಟ್ ಕೊಹ್ಲಿ ಈ ಬಾರಿ ಕೇವಲ ಆಟಗಾರನಾಗಿ ಕಾಣಿಸಿಕೊಳ್ಳಲಿದ್ದಾರೆ. ದಕ್ಷಿಣ ಆಫ್ರಿಕಾದ ಫಾಫ್ ಡು ಪ್ಲೆಸಿಸ್ ಆರ್‌ಸಿಬಿ ತಂಡದ ಸಾರಥ್ಯ ವಹಿಸಿದ್ದರೆ, ಪಂಜಾಬ್ ತಂಡವನ್ನು ಕನ್ನಡಿಗ ಮಯಾಂಕ್ ಅಗರ್ವಾಲ್ ಮುನ್ನಡೆಸಲಿದ್ದಾರೆ. ಕಳೆದ 14 ವರ್ಷಗಳಿಂದ ಪ್ರಶಸ್ತಿ ಬರ ಎದುರಿಸುತ್ತಿರುವ ಆರ್‌ಸಿಬಿ, ಪ್ಲೆಸಿಸ್ ಸಾರಥ್ಯದಲ್ಲಿ ಚೊಚ್ಚಲ ಗೆಲುವಿನ ಭರವಸೆಯಲ್ಲಿದೆ. 2014ರಿಂದ ತಂಡಕ್ಕೆ ಪೂರ್ಣ ಪ್ರಮಾಣದ ನಾಯಕರಾಗಿದ್ದ ಕೊಹ್ಲಿ, ಅದಕ್ಕೆ 2012 ಹಾಗೂ 2013ರಲ್ಲೂ ಕೆಲ ಪಂದ್ಯಗಳಿಗೆ ಹಂಗಾಮಿ ನಾಯಕರಾಗಿದ್ದರು. 8 ವರ್ಷಗಳ ಕಾಲ ಕೊಹ್ಲಿ ತಂಡ ಮುನ್ನಡೆಸಿದರೂ 2016ರಲ್ಲಿ ಒಮ್ಮೆ ಮಾತ್ರ ಅವರ ಸಾರಥ್ಯದಲ್ಲಿ ತಂಡ ಫೈನಲ್‌ಗೇರಿತ್ತು. ವೈಯಕ್ತಿಕವಾಗಿ ಕೊಹ್ಲಿ ಉತ್ತಮ ನಿರ್ವಹಣೆ ತೋರುತ್ತಿದ್ದರೂ ತಂಡದ ನಿರ್ವಹಣೆ ಮಾತ್ರ ಉತ್ತಮವಾಗಿರಲಿಲ್ಲ. ಬಹುತೇಕ ಹೊಸ ಆಟಗಾರರನ್ನೇ ಹೊಂದಿರುವ ಪಂಜಾಬ್ ತಂಡಕ್ಕೆ ಹೋಲಿಸಿದರೆ ಹೆಚ್ಚು ಅನುಭವಿ ಆಟಗಾರರನ್ನು ಹೊಂದಿರುವ ಆರ್‌ಸಿಬಿಯೇ ಫೇವರಿಟ್ ತಂಡವಾಗಿದೆ. ಕರ್ನಾಟಕದ ಬ್ಯಾಟರ್ ಕೆಎಲ್ ರಾಹುಲ್ ಪಂಜಾಬ್ ತಂಡ ತೊರೆದ ಬಳಿಕ ಮಯಾಂಕ್‌ಗೆ ನಾಯಕನ ಪಟ್ಟ ಕಟ್ಟಲಾಗಿದ್ದು, ಮತ್ತೋರ್ವ ಕನ್ನಡಿಗ ಅನಿಲ್ ಕುಂಬ್ಳೆ ಮಾರ್ಗದರ್ಶನದಲ್ಲಿ ಹೊಸ ಸವಾಲಿಗೆ ಪಂಜಾಬ್ ತಂಡ ಸಜ್ಜಾಗಿದೆ.
* ಗೆಲುವಿನ ನಿರೀಕ್ಷೆಯಲ್ಲಿ ಆರ್‌ಸಿಬಿ
ಚೊಚ್ಚಲ ಪ್ರಶಸ್ತಿ ಕನಸಿನಲ್ಲಿರುವ ಆರ್‌ಸಿಬಿ ಲೀಗ್‌ನಲ್ಲಿ ಶುಭಾರಂಭ ಕಾಣುವ ಭರವಸೆಯಲ್ಲಿದೆ. 37 ವರ್ಷದ ಪ್ಲೆಸಿಸ್ ತಜ್ಞ ಆರಂಭಿಕನಾದರೆ, ಇವರಿಗೆ ಅನುಜ್ ರಾವತ್ ಸಾಥ್ ನೀಡಬಹುದು. ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್, ಆಲ್ರೌಂಡ್ ವಾನಿಂದು ಹಸರಂಗ ಆಟಗಾರರು ತಂಡದಲ್ಲಿದ್ದಾರೆ. ಮದುವೆ ಸಂಭ್ರಮದಲ್ಲಿರುವ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಪಾಕ್ ಪ್ರವಾಸದಲ್ಲಿರುವ ಆಸೀಸ್ ವೇಗಿ ಜೋಸ್ ಹ್ಯಾಸಲ್‌ವುಡ್ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಉತ್ತಮ ಬೆಂಚ್ ಸ್ಟ್ರೆಂತ್ ಹೊಂದಿರುವ ಆರ್‌ಸಿಬಿಗೆ ಕಳೆದ ಬಾರಿಯ ಪರ್ಪಲ್ ಕ್ಯಾಪ್ ವಿಜೇತ ಹರ್ಷಲ್ ಪಟೇಲ್, ಮೊಹಮದ್ ಸಿರಾಜ್ ವೇಗದ ಬೌಲಿಂಗ್ ವಿಭಾಗದಲ್ಲಿ ಶಕ್ತಿ ತುಂಬಲಿದ್ದಾರೆ.
* ಕಿಂಗ್ಸ್‌ಗೂ ಪ್ರಮುಖರು ಅಲಭ್ಯ
ಪಂಜಾಬ್ ಕಿಂಗ್ಸ್ ತಂಡಕ್ಕೂ ಆರಂಭಿಕ ಪಂದ್ಯಕ್ಕೆ ಪ್ರಮುಖ ವಿದೇಶಿಗರ ಅನುಪಸ್ಥಿತಿ ಕಾಡಲಿದೆ. ಜಾನಿ ಬೇರ್‌ಸ್ಟೋ, ಕಗಿಸೊ ರಬಾಡ ಆರಂಭಿಕ ಪಂದ್ಯಕ್ಕೆ ಅಲಭ್ಯರಾಗುತ್ತಿದ್ದಾರೆ. ನಾಯಕ ಮಾಯಂಕ್ ಹಾಗೂ ಅನುಭವಿ ಶಿಖರ್ ಧವನ್ ಅತ್ಯುತ್ತಮ ಆರಂಭಿಕ ಜೋಡಿಯಾಗಿದ್ದು, ಆರ್‌ಸಿಬಿಯನ್ನು ಕಾಡಬಹುದು. ಅಲ್ಲದೆ, ಶಾರುಖ್ ಖಾನ್ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಸರೆಯಾಗಬಲ್ಲರು.
ಟೀಮ್ ನ್ಯೂಸ್:
ಆರ್‌ಸಿಬಿ: ನಾಯಕ ಪ್ಲೆಸಿಸ್ ಜತೆಗೆ ಅನುಜ್ ರಾವತ್ ಇನಿಂಗ್ಸ್ ಆರಂಭಿಸಲಿದ್ದಾರೆ. ಮ್ಯಾಕ್ಸ್‌ವೆಲ್ ಅನುಪಸ್ಥಿತಿಯಲ್ಲಿ ಶೆರ್ಫಾನೆ ರುದರ್ಫೋಡ್ ಕಣಕ್ಕಿಳಿಯಲಿದ್ದು, ಹ್ಯಾಸಲ್‌ವುಡ್ ಅವರ ಸ್ಥಾನದಲ್ಲಿ ಡೇವಿಡ್ ವಿಲ್ಲಿ ಆಡುವರು.
ಸಂಭಾವ್ಯ ತಂಡ: ಪ್ಲೆಸಿಸ್ (ನಾಯಕ), ಅನುಜ್ ರಾವತ್, ವಿರಾಟ್ ಕೊಹ್ಲಿ, ಶೆರ್ಫಾನೆ ರುದರ್ಫೋಡ್, ದಿನೇಶ್ ಕಾರ್ತಿಕ್ (ವಿಕೀ), ಮಹಿಪಾಲ್ ಲೊಮ್ರೊರ್, ಶಾಬಾಜ್ ಅಹ್ಮದ್, ವಾನಿಂದು ಹಸರಂಗ, ಹರ್ಷಲ್ ಪಟೇಲ್, ಮೊಹಮದ್ ಸಿರಾಜ್, ಡೇವಿಡ್ ವಿಲ್ಲಿ.
ಪಂಜಾಬ್ ಕಿಂಗ್ಸ್: ಜಾನಿ ಬೇರ್‌ಸ್ಟೋ, ಕಗಿಸೊ ರಬಾಡ ಅನುಪಸ್ಥಿತಿಯಲ್ಲಿ ನಾಥನ್ ಎಲ್ಲಿಸ್, ಒಡೆನ್ ಸ್ಮಿತ್ ಆಡುವ ಸಾಧ್ಯತೆಗಳಿವೆ. ಮಯಾಂಕ್, ಶಾರುಖ್ ಖಾನ್, ಪ್ರಭ್‌ಸಿಮ್ರಾನ್ ಸಿಂಗ್ ಹೊರತುಪಡಿಸಿ ಉಳಿದಂತೆ ಬಹುತೇಕ ಹೊಸ ತಂಡವಾಗಿಯೇ ಪಂಜಾಬ್ ಕಣಕ್ಕಿಳಿಯಲಿದೆ.
ಸಂಭಾವ್ಯ ತಂಡ: ಶಿಖರ್ ಧವನ್, ಮಯಾಂಕ್ ಅಗರ್ವಾಲ್ (ನಾಯಕ), ಭಾನುಕ ರಾಜಪಕ್ಷ, ಲಿಯಾಮ್ ಲಿವಿಂಗ್‌ಸ್ಟೋನ್, ಶಾರುಖ್ ಖಾನ್, ಪ್ರಭ್‌ಸಿಮ್ರಾನ್ ಸಿಂಗ್ (ವಿಕೀ), ಒಡೆನ್ ಸ್ಮಿತ್, ರಿಷಿ ಧವನ್, ರಾಹುಲ್ ಚಹರ್, ಅರ್ಷದೀಪ್, ನಾಥನ್ ಎಲ್ಲಿಸ್.
ಮುಖಾಮುಖಿ: 28
ಆರ್‌ಸಿಬಿ: 13
ಪಂಜಾಬ್: 15
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್