ಇಂದು ಆರ್‌ಸಿಬಿ - ಡೆಲ್ಲಿ ಕ್ಯಾಪಿಟಲ್ಸ್ ಹಣಾಹಣಿ ; ಪುಟಿದೇಳುವ ವಿಶ್ವಾಸದಲ್ಲಿ ಪ್ಲೆಸಿಸ್ ಬಳಗ

RCB DELHI
Published on

ಮುಂಬೈ: ಹ್ಯಾಟ್ರಿಕ್ ಗೆಲುವಿನ ಬಳಿಕ ಹಾಲಿ ಚಾಂಪಿಯನ್ಸ್ ಸಿಎಸ್‌ಕೆ ಎದುರು ನಿರಾಸೆ ಕಂಡಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್-15ರ ತನ್ನ 6ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಸಹೋದರಿ ನಿಧನದಿಂದಾಗಿ ಕಳೆದ ಪಂದ್ಯಕ್ಕೆ ಅಲಭ್ಯರಾಗಿದ್ದ ಹರ್ಷಲ್ ಪಟೇಲ್ ತಂಡ ಕೂಡಿಕೊಂಡಿರುವುದು ಆರ್‌ಸಿಬಿ ಬಲ ಹೆಚ್ಚಿಸಿದೆ. ಕಳೆದ ಪಂದ್ಯದಲ್ಲಿ ಹರ್ಷಲ್ ಪಟೇಲ್ ಅನುಪಸ್ಥಿತಿಯೇ ದುಬಾರಿಯಾಗಿತ್ತು. ಸಿಎಸ್‌ಕೆ ತಂಡ ಶಿವಂ ದುಬೆ ಹಾಗೂ ರಾಬಿನ್ ಉತ್ತಪ್ಪ, ಪ್ಲೆಸಿಸ್ ಪಡೆಯ ಬೌಲರ್‌ಗಳ ಎದುರು ಸ್ಫೋಟಿಸಿದ್ದರು. ಮತ್ತೊಂದು ಟೂರ್ನಿಯಲ್ಲಿ ಇದುವರೆಗೂ ಸೋಲು ಗೆಲುವನ್ನು ಸಮಾನವಾಗಿ ಕಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತೊಂದು ಜಯದ ನಿರೀಕ್ಷೆಯಲ್ಲಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಹಣಾಹಣಿಯಲ್ಲಿ ಟಾಸೇ ಪ್ರಮುಖ ಪಾತ್ರವಹಿಸಲಿದೆ. ಕಳೆದ ಆವೃತ್ತಿಯಲ್ಲಿ ಆರ್‌ಸಿಬಿ ತಂಡವೇ ಲೀಗ್ ಹಂತದ ಎರಡೂ ಪಂದ್ಯಗಳನ್ನು ಜಯಿಸಿತ್ತು.

ಟೀಮ್ ನ್ಯೂಸ್:

ಆರ್‌ಸಿಬಿ: ಹರ್ಷಲ್ ಪಟೇಲ್ ತಂಡಕ್ಕೆ ವಾಪಸಾದರೆ ಆಕಾಶ್ ದೀಪ್ ಹೊರಗುಳಿಯುವ ಸಾಧ್ಯತೆಗಳಿವೆ. ಮೊದಲ ಪಂದ್ಯದಲ್ಲೇ ಸುಯಶ್ ಪ್ರಭುದೇಸಾಯಿ ಗಮನಸೆಳೆದಿದ್ದು, ಮತ್ತೊಂದು ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

ಡೆಲ್ಲಿ: ಹಿಂದಿನ ಪಂದ್ಯದಲ್ಲಿ ಜಯ ದಾಖಲಿಸಿರುವ ಡೆಲ್ಲಿ ತಂಡ ಬದಲಾವಣೆ ಇಲ್ಲದೆ ಕಣಕ್ಕಿಳಿಯಬಹುದು.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ಮುಖಾಮುಖಿ: 26, ಆರ್‌ಸಿಬಿ: 15, ಡೆಲ್ಲಿ: 10, ರದ್ದು: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net