ಆರ್‌ಸಿಬಿ ಗೆಲುವಿನ ಓಟಕ್ಕೆ ಸಿಎಸ್‌ಕೆ ಕಡಿವಾಣ; ಜಯದ ಖಾತೆ ತೆರೆದ ಹಾಲಿ ಚಾಂಪಿಯನ್ಸ್

ipl-15 csk and rcb match for web
Published on

ಮುಂಬೈ: ಎಡಗೈ ಬ್ಯಾಟರ್ ಶಿವಂ ದುಬೆ (95*ರನ್, 46 ಎಸೆತ, 5 ಬೌಂಡರಿ, 8 ಸಿಕ್ಸರ್) ಹಾಗೂ ಕನ್ನಡಿಗ ರಾಬಿನ್ ಉತ್ತಪ್ಪ (88 ರನ್, 50 ಎಸೆತ, 4 ಬೌಂಡರಿ, 9 ಸಿಕ್ಸರ್) ಜೋಡಿಯ ಸ್ಫೋಟಕ ಬ್ಯಾಟಿಂಗ್ ಹಾಗೂ ಶ್ರೀಲಂಕಾದ ಸ್ಪಿನ್ನರ್ ಮಹೀಶ್ ತೀಕ್ಷಣ (33ಕ್ಕೆ 4) ಮಾರಕ ದಾಳಿಗೆ ನಲುಗಿದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್-15ರ ಪಂದ್ಯದಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ಎದುರು 23 ರನ್‌ಗಳಿಂದ ನಿರಾಸೆ ಅನುಭವಿಸಿತು. ಹ್ಯಾಟ್ರಿಕ್ ಗೆಲುವಿನಿಂದ ಬೀಗುತ್ತಿದ್ದ ಫಾಫ್ ಡು ಪ್ಲೆಸಿಸ್ ಪಡೆಯ ಓಟಕ್ಕೆ ಬ್ರೇಕ್ ಬಿದ್ದರೆ, ಸತತ 4 ಸೋಲುಗಳಿಂದ ಕಂಗೆಟ್ಟಿದ್ದ ಹಾಲಿ ಚಾಂಪಿಯನ್ ಸಿಎಸ್‌ಕೆ ತಂಡ ಗೆಲುವಿನ ಖಾತೆ ತೆರೆಯಲು ಯಶಸ್ವಿಯಾಯಿತು.

ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ, ಆರಂಭಿಕ 10 ಓವರ್‌ಗಳಲ್ಲಿ 2 ವಿಕೆಟ್‌ಗೆ 60 ರನ್ ಪೇರಿಸಿ ಆಘಾತಕ್ಕೊಳಗಾಯಿತು. ಬಳಿಕ ರಾಬಿನ್-ಶಿವಂ ಜೋಡಿ 3ನೇ ವಿಕೆಟ್‌ಗೆ 74 ಎಸೆತಗಳಲ್ಲಿ 165 ರನ್ ಜತೆಯವಾಡಿದ ಪರಿಣಾಮ 4 ವಿಕೆಟ್‌ಗೆ 216 ರನ್ ಕಲೆಹಾಕಿತು. ಈ ಬೃಹತ್ ಸವಾಲು ಬೆನ್ನಟ್ಟಿದ ಆರ್‌ಸಿಬಿಗೆ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಕೈಕೊಟ್ಟರು. ನಂತರ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಹೋರಾಟದ ನಡುವೆ 9 ವಿಕೆಟ್‌ಗೆ 193 ರನ್ ಕಲೆಹಾಕಲಷ್ಟೇ ಶಕ್ತವಾಯಿತು.

ಸಿಎಸ್‌ಕೆ: 4 ವಿಕೆಟ್‌ಗೆ 216 (ರಾಬಿನ್ ಉತ್ತಪ್ಪ 88, ಶಿವಂ ದುಬೆ 95*, ವನಿಂದು ಹಸರಂಗ 35ಕ್ಕೆ 2, ಜೋಸ್ ಹ್ಯಾಸಲ್‌ವುಡ್ 33ಕ್ಕೆ 1), ಆರ್‌ಸಿಬಿ: 9 ವಿಕೆಟ್‌ಗೆ 193 (ಮ್ಯಾಕ್ಸ್‌ವೆಲ್ 26, ಶಾಬಾಜ್ ಅಹಮದ್ 41, ಪ್ರಭುದೇಸಾಯಿ 34, ದಿನೇಶ್ ಕಾರ್ತಿಕ್ 34, ಮಹೀಶ್ ತೀಕ್ಷಣ 33ಕ್ಕೆ 4, ರವೀಂದ್ರ ಜಡೇಜಾ 39ಕ್ಕೆ 3).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net